More

    ಶೈಕ್ಷಣಿಕ ಸುಧಾರಣೆಗಾಗಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ

    ಹಾನಗಲ್ಲ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ದೇಶ ವೇಗವಾಗಿ ಬದಲಾಗುತ್ತಿದ್ದು, ಬದಲಾದ ಪರಿಸ್ಥಿತಿಯಲ್ಲಿ ಶೈಕ್ಷಣಿಕ ಸುಧಾರಣೆಗಾಗಿ ಪದವಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್​ಟಾಪ್ ವಿತರಿಸುವ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಸಿ.ಎಂ. ಉದಾಸಿ ಹೇಳಿದರು.

    ಪಟ್ಟಣದ ಮಲ್ಲಿಗ್ಗಾರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2019-20ನೇ ಸಾಲಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಮಂಗಳವಾರ ಉಚಿತವಾಗಿ ಲ್ಯಾಪ್​ಟಾಪ್ ವಿತರಿಸಿ ಅವರು ಮಾತನಾಡಿದರು.

    ಕುಟುಂಬದ ವಾರ್ಷಿಕ ಆದಾಯ 2.50 ಲಕ್ಷ ರೂ.ಗಳಿಗಿಂತ ಕಡಿಮೆ ಇರುವ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್​ಟಾಪ್ ವಿತರಿಸಲಾಗುತ್ತಿದೆ. ತಾಲೂಕಿನಲ್ಲಿ ಅಕ್ಕಿಆಲೂರು ಕಾಲೇಜಿನ 332 ಹಾಗೂ ಮಲ್ಲಿಗ್ಗಾರ ಕಾಲೇಜಿನ 273 ವಿದ್ಯಾರ್ಥಿಗಳಿಗೆ 1.76 ಕೋಟಿ ರೂ. ವೆಚ್ಚದಲ್ಲಿ 605 ಲ್ಯಾಪ್​ಟಾಪ್​ಗಳನ್ನು ವಿತರಿಸಲಾಗುತ್ತಿದೆ. ಇಂದಿನ ಶಿಕ್ಷಣದಲ್ಲಿ ತಂತ್ರಜ್ಞಾನವನ್ನೂ ಅಳವಡಿಸಿರುವುದರಿಂದ ಕಂಪ್ಯೂಟರ್​ಗಳ ಅಗತ್ಯವಿದೆ. ಅದಕ್ಕಾಗಿ ಸರ್ಕಾರ ಈ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ವಿದ್ಯಾರ್ಥಿಗಳು ಲ್ಯಾಪ್​ಟಾಪ್​ಗಳನ್ನು ಸದ್ಬಳಕೆ ಮಾಡಿಕೊಂಡರೆ ಮಾತ್ರ ಸರ್ಕಾರದ ಯೋಜನೆಗಳು ಸಾರ್ಥಕವಾಗುತ್ತವೆ ಎಂದರು.

    ದ್ವಿತೀಯ ಹಾಗೂ ತೃತೀಯ ವರ್ಷದ ಪದವಿ ವಿದ್ಯಾರ್ಥಿಗಳು ತಮಗೂ ಉಚಿತ ಲ್ಯಾಪ್​ಟಾಪ್ ವಿತರಿಸುವಂತೆ ಶಾಸಕ ಸಿ.ಎಂ. ಉದಾಸಿ ಅವರಿಗೆ ಮನವಿ ಸಲ್ಲಿಸಿದರು. ಪ್ರಾಚಾರ್ಯ ಮಹ್ಮದ್​ಶರೀಫ್ ಹಾನಗಲ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಂವಸಗಿ ಗ್ರಾಪಂ ಅಧ್ಯಕ್ಷೆ ಸಾಲೇಹಾಬಾನು ಮುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಮಾಲತೇಶ ಸೊಪ್ಪಿನ, ತಾಪಂ ಸದಸ್ಯ ಬಸವರಾಜ ಬೂದಿಹಾಳ, ಕಲ್ಯಾಣಕುಮಾರ ಶೆಟ್ಟರ ಪಾಲ್ಗೊಂಡಿದ್ದರು. ಪ್ರಾಧ್ಯಾಪಕ ಬಿ. ಹನುಮಂತಪ್ಪ ಕಾರ್ಯಕ್ರಮ ನಿರೂಪಿಸಿದರು. ಎಚ್.ಬಿ. ವಿಜಯಕುಮಾರ ವಂದಿಸಿದರು.

    ಬಡ ವಿದ್ಯಾರ್ಥಿಗಳಿಗೂ ಸೌಲಭ್ಯ ಕಲ್ಪಿಸಿ: ಹಿರೇಕೆರೂರ: ಇಂದು ತಂತ್ರಜ್ಞಾನದ ಶಿಕ್ಷಣ ಮುಂದುವರಿದಿದ್ದು, ಅದಕ್ಕೆ ತಕ್ಕಂತೆ ಬಡ ವಿದ್ಯಾರ್ಥಿಗಳಿಗೆ ಸರ್ಕಾರ ಮೂಲ ಸೌಲಭ್ಯ ಕಲ್ಪಿಸುವುದು ಅವಶ್ಯವಾಗಿದೆ ಎಂದು ಶಾಸಕ ಬಿ.ಸಿ. ಪಾಟೀಲ ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ನ ಆವರಣದಲ್ಲಿ ಬುಧವಾರ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್​ಟಾಪ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಾಚಾರ್ಯ ಡಾ.ಎಸ್.ಪಿ. ಗೌಡರ್ ಮಾತನಾಡಿ, ಕಾಲೇಜಿನ ಬಿ.ಎ., ಬಿಎಸ್​ಸಿ, ಬಿ.ಕಾಂ. ಪ್ರಥಮ ವರ್ಷದ ಒಟ್ಟು 277 ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್ ವಿತರಿಸಲಾಗುತ್ತಿದೆ ಎಂದರು. ಪ.ಪಂ. ಸದಸ್ಯ ಅಶೋಕ ಜಾಡಬಂದಿ, ಪ್ರಾಧ್ಯಾಪಕರಾದ ಎಂ.ಬಿ. ಬದನಿಕಾಯಿ, ಎಸ್.ಎಚ್. ದೊಡ್ಡಗೌಡರ್, ಹೇಮಲತಾ ಕೆ., ಯತೀಶ ಎನ್.ಎ., ರಾಮಚಂದ್ರಪ್ಪ ಬಿ.ಎಂ., ಸುಜಾತಾ.ಕೆ, ಮೀನಾಕ್ಷಿ ಬಿ. ವಿದ್ಯಾರ್ಥಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts