More

    ಶುದ್ಧ ಮನಸ್ಸಿನಿಂದ ದೈವ ಸಾಕ್ಷಾತ್ಕಾರ – ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

    ದಾವಣಗೆರೆ: ಮನಸ್ಸಿನಲ್ಲಿ ಪ್ರಕಟಗೊಳ್ಳುವ ಭಾವನೆಗಳನ್ನು ಸಾಕ್ಷಿಪ್ರಜ್ಞೆಯಿಂದ ನೋಡುವುದು ಅರಿವಿನ ಮೊದಲ ಹೆಜ್ಜೆ. ಶುದ್ಧ ಮನಸ್ಸಿನಿಂದ ಮಹಾದೇವನ ಸಾಕ್ಷಾತ್ಕಾರ ಸಾಧ್ಯ ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
    ನಗರದ ವೆಂಕಾಭೋವಿ ಕಾಲನಿಯ ಭೋವಿ ಗುರುಪೀಠ ಶಾಖಾಮಠದ ಆವರಣದಲ್ಲಿ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ದೇವರ 61ನೇ ರಥೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಧರ್ಮಧ್ವಜಾರೋಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ದೇವರ ನಿಜಸ್ವರೂಪ ನಮ್ಮ ಇಂದ್ರಿಯ, ಮನಸ್ಸು, ಬುದ್ಧಿಗಳಿಗಿಂತ ಸೂಕ್ಷ್ಮವಾದುದು. ಔನ್ನತ್ಯದಲ್ಲಿ ಯಾವ ಎಣಿಕೆಗೂ ನಿಲುಕದ್ದು. ಹಾಗಿರುವಾಗ ಅತಿಸೂಕ್ಷ್ಮವಾದ ಪರಮಾಣುವನ್ನು ನಮ್ಮ ಕಣ್ಣು ಹೇಗೆ ನೋಡಲಾರದೋ ಹಾಗೆಯೇ ಎಲ್ಲ ಸೂಕ್ಷ್ಮ ವಸ್ತುಗಳಿಗಿಂತ ಸೂಕ್ಷ್ಮವಾಗಿರುವ ಭಗವಂತನನ್ನು ನಮ್ಮ ಯಾವ ದೈಹಿಕ ಯಂತ್ರಗಳೂ ಗ್ರಹಿಸಲಾರವು ಎಂದು ತಿಳಿಸಿದರು.
    ಭಗವಂತನನ್ನು ಕಾಣಲು ಸಾಮಾನ್ಯ ಕಣ್ಣು, ಮನಸ್ಸು ಸಾಲದು. ಇದಕ್ಕಾಗಿ ವಿಶೇಷ ಮನಸ್ಸು ಹಾಗೂ ಬುದ್ದಿ ಬೇಕು. ಅಂಥ ಹೊಸ ದೃಷ್ಟಿ ಬರಬೇಕಾದರೆ ಆಧ್ಯಾತ್ಮಿಕ ಸಾಧನೆ, ದೈಹಿಕ ಮತ್ತು ಮಾನಸಿಕ ಪರಿಶುದ್ಧತೆ ಅಗತ್ಯ ಎಂದರು.
    ಸತ್ಯದ ಬೆಳಕಲ್ಲಿ ತೆರೆದುಕೊಳ್ಳುವ ಮನಸ್ಸುಗಳು ಶುಭ್ರವಾಗಿರುತ್ತವೆ. ತಮ್ಮನ್ನು ಅಳೆದು ತೂಗಿ ನೋಡುವ, ವಿಮರ್ಶೆಯಿಂದ ಪರೀಕ್ಷಿಸಿಕೊಳ್ಳುವ ಅಪರೂಪದ ಗುಣ ಬೆಳೆಸಿಕೊಂಡವರು ಮಾತ್ರ ಮನಸ್ಸಿನಿಂದ ಮಹಾದೇವನ ಸಾಕ್ಷಾತ್ಕಾರ ಸಂಪಾದಿಸಿಕೊಳ್ಳುತ್ತಾರೆ ಎಂದು ಹೇಳಿದರು.
    ಭೋವಿ ಸಮಾಜದ ಮುಖಂಡರಾದ ಡಿ. ಬಸವರಾಜ, ಇಂಜಿನಿಯರ್ ವೆಂಕಟೇಶ, ನಾಗರಾಜ, ಹೇಮರಾಜ್, ಶ್ರೀನಿವಾಸ, ಮಂಜುನಾಥ, ಗಣೇಶ, ಮಲೆಬೆನ್ನೂರು ಮಂಜಣ್ಣ, ಹರಿಹರ ಭದ್ರಪ್ಪ, ಶಿವಣ್ಣ, ಶೇಖರಪ್ಪ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts