More

    ಶಿವಣ್ಣನಿಗೆ ಬೆಣ್ಣೆನಗರಿಯಲ್ಲಿ ಭರ್ಜರಿ ಸ್ವಾಗತ,ಮೆರವಣಿಗೆ 

    ದಾವಣಗೆರೆ: ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ 125ನೇ ಚಿತ್ರ ‘ವೇದ’ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಶಿವ ಸಂಭ್ರಮ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಣ್ಣೆನಗರಿಗೆ ಆಗಮಿಸಿದ್ದ ಶಿವಣ್ಣ-ಗೀತಾ ಶಿವರಾಜ್‌ಕುಮಾರ್ ಹಾಗೂ ಚಿತ್ರ ತಂಡಕ್ಕೆ ಅಭಿಮಾನಿಗಳು ಭರ್ಜರಿ ಸ್ವಾಗತ ನೀಡಿದರು.
    ನಿಟುವಳ್ಳಿಯ ದುರ್ಗಾಂಬಿಕಾ ದೇವಸ್ಥಾನಕ್ಕೆ ತಮ್ಮ ತಂಡದೊಂದಿಗೆ ಭೇಟಿ ನೀಡಿದ ಶಿವರಾಜ್‌ಕುಮಾರ್ ದೇವಿ ದರ್ಶನ ಪಡೆದರು. ಅಲ್ಲಿಂದ ತೆರೆದ ಕ್ಯಾಂಟರ್‌ನಲ್ಲಿ ಮೆರವಣಿಗೆ ನಡೆಸಲಾಯಿತು. ದಾರಿಯುದ್ದಕ್ಕೂ ಶಿವಣ್ಣ ಕೈಬೀಸಿದರು. ಪ್ರೇಕ್ಷಕರು ಶಿಳ್ಳೆ-ಕೇಕೆ ಹಾಕುತ್ತ ಸ್ವಾಗತ ನೀಡಿದರು. ಅಭಿಮಾನಿಗಳು 10-20 ರೂ. ನೋಟಿನ ಹಾರ ಹಾಕಿ ಸಂಭ್ರಮಿಸಿದರು. ಪಾಲಕರು ಮಕ್ಕಳನ್ನು ಶಿವಣ್ಣನ ಕೈಗೆ ನೀಡಿ ಫೋಟೋ ತೆಗೆಸಿಕೊಂಡರು.
    ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆ ವೇದ ಚಿತ್ರ ಪ್ರದರ್ಶನದ ಅಶೋಕ ಚಿತ್ರಮಂದಿರಕ್ಕೆ ತಲುಪಿತು. ಅಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಶಿವಣ್ಣ ‘ನೀವೆಲ್ಲರೂ ವೇದ ಚಿತ್ರ ಮೆಚ್ಚಿ, ತಂಡಕ್ಕೆ ಪ್ರೀತಿಯ ಆಶೀರ್ವಾದ ಮಾಡಿದ್ದು ಖುಷಿ ನೀಡಿದೆ. ಹೆಣ್ಣುಮಕ್ಕಳು ಯಾವುದಕ್ಕೂ ಹೆದರಬಾರದು ಎಂಬ ಸಂದೇಶ ಚಿತ್ರದಲ್ಲಿದೆ. ಯಾರೇ ಮಹಿಳೆಗೆ ತೊಂದರೆಯಾದರೂ ಅವರನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ’ ಎಂದು ಹೇಳಿದರು.
    ನೀವು ಸುಮ್ಮನಿದ್ದರೆ ನಮಗೆ ಬೆಣ್ಣೆದೋಸೆ ತರಹ ಕಾಣುತ್ತೀರಿ. ನಿಮ್ಮ ಸಹಕಾರದಿಂದ ವೇದ ಚಿತ್ರ ಶತದಿನೋತ್ಸವ ನಡೆಯಲಿ. ಮತ್ತೊಮ್ಮೆ ಇಲ್ಲಿಗೆ ಬಂದು ಕಾರ್ಯಕ್ರಮ ಮಾಡುತ್ತೆವೆ ಎಂದರು.
    ಸುದ್ದಿಗಾರರೊಂದಿಗೆ ಮಾತನಾಡಿದ ಶಿವಣ್ಣ ‘ವೇದ ಮಹಿಳಾ ಪ್ರಧಾನ ಚಿತ್ರವಾದರೂ ಕುಟುಂಬ ಸಮೇತ ನೋಡಬಹುದಾಗಿದೆ. ಇನ್ನೆರಡು ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಈಸೂರು ದಂಗೆ ಚಿತ್ರ ಇನ್ನೂ ಟೇಕಾಫ್ ಆಗಿಲ್ಲ. ಫ್ಯಾನ್ಸ್ ವಾರ್ ಬೇಡ. ಎಲ್ಲರೂ ಚೆನ್ನಾಗಿರೋಣ ಎಂದರು.
    ಚಿತ್ರದ ನಿರ್ದೇಶಕ ಶ್ರೀಹರ್ಷ ಮಾತನಾಡಿ, ಈ ವೇದ ಸಿನಿಮಾ ನಿಮಗೆ ಇಷ್ಟವಾಗಿದೆಯೇ, ಪಾರ್ಟ್-2 ಮಾಡಬೇಕಾ ಎಂದು ಪ್ರಶ್ನಿಸಿದಾಗ ಅಲ್ಲಿ ನೆರೆದವರು ಹ್ಞೂಂಗುಟ್ಟಿದರು.
    ನಿರ್ಮಾಪಕಿ ಗೀತಾ ಮಾತನಾಡಿ, ಗೀತಾ ಪ್ರೊಡಕ್ಷನ್ ಅಡಿ ಮೊದಲ ಚಿತ್ರ ಇದಾಗಿದೆ. ಮಹಿಳಾ ಪರ ಸಂದೇಶದ ಚಿತ್ರಕ್ಕೆ ಎಲ್ಲೆಡೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ ಎಂದು ಹೇಳಿದರು.
    ಚಿತ್ರದ ನಾಯಕಿ ಕನಕ ಪಾತ್ರದಾರಿ ಅದಿತಿ ಸಾಗರ್ ಚಿತ್ರದ ಸಂಭಾಷಣೆ ಹೇಳಿ ರಂಜಿಸಿದರು. ನಟಿ ಗಾನವಿ ಲಕ್ಷ್ಮಣ್, ಅಶೋಕ ಚಿತ್ರಮಂದಿರ ಮಾಲೀಕ ಲಕ್ಷೀಕಾಂತ ರೆಡ್ಡಿ, ವ್ಯವಸ್ಥಾಪಕ ಕರಿಸಿದ್ದಯ್ಯ, ಅಭಿಮಾನಿಗಳ ಸಂಘದ ಅಧ್ಯಕ್ಷ ಯೋಗೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts