More

    ಶಿರಹಟ್ಟಿ ತಾಪಂಗೆ ಈಶ್ವರಪ್ಪ ಅಧ್ಯಕ್ಷ, ಪವಿತ್ರಾ ಉಪಾಧ್ಯಕ್ಷೆ

    ಶಿರಹಟ್ಟಿ: ಹಳೇ ಮೀಸಲಾತಿಯನ್ವಯ ಬುಧವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಶಿರಹಟ್ಟಿ ತಾಪಂ ಕೊನೇ ಅಧಿಕಾರಾವಧಿಗೆ ಅಧ್ಯಕ್ಷರಾಗಿ ಕೊಂಚಿಗೇರಿ ಕ್ಷೇತ್ರದ ಬಿಜೆಪಿ ಸದಸ್ಯ ಈಶ್ವರಪ್ಪ ಲಮಾಣಿ, ಉಪಾಧ್ಯಕ್ಷರಾಗಿ ಹೆಬ್ಬಾಳ ಕ್ಷೇತ್ರದ ಬಿಜೆಪಿ ಸದಸ್ಯೆ ಪವಿತ್ರಾ ಶಂಕಿನದಾಸರ ಆಯ್ಕೆಯಾದರು.

    ಶಿರಹಟ್ಟಿ ತಾಪಂ ವಿಭಜನೆ ಮಾಡಿ ಲಕ್ಷ್ಮೇಶ್ವರ ಹೊಸ ತಾಲೂಕನ್ನಾಗಿ ಸೃಷ್ಟಿಸಿದ್ದರಿಂದ 15 ಸದಸ್ಯರ ಪೈಕಿ 8 ಸದಸ್ಯರು ಲಕ್ಷ್ಮೇಶ್ವರ ತಾಪಂಗೆ ಸೇರಿದ್ದರು. ಆ ಪೈಕಿ ಅಧ್ಯಕ್ಷೆ ಗಿರಿಜವ್ವ ಲಮಾಣಿ, ಉಪಾಧ್ಯಕ್ಷೆ ಹುಸೇನಬಿ ಅತ್ತಿಗೇರಿ ಅವರು ಲಕ್ಷ್ಮೇಶ್ವರ ತಾಪಂ ಕ್ಷೇತ್ರಗಳಿಗೆ ಸಂಬಂಧಿಸಿದ್ದರಿಂದ ಶಿರಹಟ್ಟಿ ತಾಪಂನಲ್ಲಿ ಆ ಸ್ಥಾನಗಳು ತೆರವಾಗಿದ್ದವು.

    ಪರಿಶಿಷ್ಟ ಜಾತಿಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಈಶ್ವರಪ್ಪ ಲಮಾಣಿ, ಕಾಂಗ್ರೆಸ್​ನಿಂದ ದೇವಪ್ಪ ಲಮಾಣಿ ನಾಮಪತ್ರ ಸಲ್ಲಿಸಿದರು. ಆದರೆ, ನಾಮಪತ್ರ ಹಿಂಪಡೆಯಲು ನೀಡಿದ್ದ ಅರ್ಧ ಗಂಟೆಯೊಳಗೆ ಕಾಂಗ್ರೆಸ್​ನ ದೇವಪ್ಪ ಲಮಾಣಿ ಮರಳಿ ಬಾರದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಇನ್ನು ಸಾಮಾನ್ಯ ವರ್ಗಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಪವಿತ್ರಾ ಶಂಕಿನದಾಸರ ಒಬ್ಬರೇ ನಾಮಪತ್ರ ಸಲ್ಲಿಸಿದರು. ಹಾಗಾಗಿ ಅವರು ಅವಿರೋಧವಾಗಿ ಆಯ್ಕೆಯಾದರು.

    ಈಗ ಆಯ್ಕೆಯಾಗಿರುವ ಈಶ್ವರಪ್ಪ ಲಮಾಣಿ ಮೊದಲ 20 ತಿಂಗಳ ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರೆ, ಪವಿತ್ರಾ ಶಂಕಿನದಾಸರ ಎರಡನೇ ಅವಧಿಯಲ್ಲಿ ಉಪಾಧ್ಯಕ್ಷರಾಗಿ 14 ತಿಂಗಳು ಕಾರ್ಯನಿರ್ವಹಿಸಿದ್ದರು. ಇನ್ನುಳಿದ 8 ತಿಂಗಳ ಕೊನೆಯ ಅಧಿಕಾರಾವಧಿಗೆ ಬುಧವಾರ ಮಧ್ಯಾಹ್ನ 2.30ಕ್ಕೆ ಚುನಾವಣೆ ಪ್ರಕ್ರಿಯೆ ಜರುಗಿತು.

    ಒಟ್ಟು 7 ಸದಸ್ಯರಲ್ಲಿ ಇಬ್ಬರು ಕಾಂಗ್ರೆಸ್ ಸದಸ್ಯರು ಬಂದಿರಲಿಲ್ಲ. ಬಿಜೆಪಿ 5 ಸದಸ್ಯರಲ್ಲಿ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿ ಉಮಾ ಹೊನಗಣ್ಣವರಗೆ ಅವಕಾಶ ದೊರಕದ ಲಕ್ಷಣ ಕಾಣದ್ದರಿಂದ ಅವರು ಚುನಾವಣೆಯಿಂದ ದೂರ ಉಳಿದರು. ಉಳಿದ 4 ಸದಸ್ಯರು ತಮ್ಮ ಬೆಂಬಲವನ್ನು ಚುನಾವಣಾಧಿಕಾರಿ ಸೂಚನೆಯಂತೆ ಈಶ್ವರಪ್ಪ ಲಮಾಣಿ ಪರ ಕೈ ಎತ್ತಿ ಬೆಂಬಲ ಸೂಚಿಸಿದರು.

    ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಕಾರ್ಯನಿರ್ವಹಿಸಿದರು.

    ಶಾಸಕ ರಾಮಣ್ಣ ಲಮಾಣಿ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಸನ್ಮಾನಿಸಿ, ಅಧಿಕಾರವನ್ನು ಕ್ಷೇತ್ರದ ಅಭಿವೃದ್ಧಿ, ಜನರ ಸಮಸ್ಯೆಗಳ ಪರಿಹಾರಕ್ಕೆ ಸದ್ಬಳಕೆ ಮಾಡಿಕೊಳ್ಳುವಂತೆ ಹೇಳಿದರು.

    ತಾಪಂ ಸದಸ್ಯ ತಿಪ್ಪಣ್ಣ ಕೊಂಚಿಗೇರಿ, ಮಂಜುನಾಥ ಜೋಗಿನ, ಮುಖಂಡ ವಿ.ವಿ. ಕಪ್ಪತ್ತನವರ, ರಾಮಣ್ಣ ಡಂಬಳ, ಶಿರಹಟ್ಟಿ ಬಿಜೆಪಿ ಮಂಡಳ ಅಧ್ಯಕ್ಷ ಫಕೀರೇಶ ರಟ್ಟಿಹಳ್ಳಿ, ನೀಲಪ್ಪ ಹತ್ತಿ, ತಿಮ್ಮರಡ್ಡಿ ಮರಡ್ಡಿ, ವಿರೂಪಾಕ್ಷ ಅಣ್ಣಿಗೇರಿ, ನಾಗರಾಜ ಲಕ್ಕುಂಡಿ, ಕೊಟ್ರೇಶ ಸಜ್ಜನರ, ಎಸ್.ಪಿ. ಕಂಠಿಗೌಡ್ರ, ಜಾನು ಲಮಾಣಿ, ಎನ್.ಬಿ. ಮಡಿವಾಳರ, ಶರೀಫ್​ಸಾಬ್ ನದಾಫ್, ಸಂದೇಶ ಯಲ್ಲಪ್ಪ ಇಂಗಳಗಿ, ಸಂದೇಶ ಗಾಣಿಗೇರ, ಮಹೇಶ ಲಮಾಣಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts