More

    ಶಿರಹಟ್ಟಿಯಲ್ಲಿ ಕಾಂಗ್ರೆಸ್​ಗೆ ಅಧಿಕಾರ ಸುಲಲಿತ

    ಶಿರಹಟ್ಟಿ: ಎರಡು ವರ್ಷಗಳಿಂದ ಅಧಿಕಾರ ಭಾಗ್ಯಕ್ಕಾಗಿ ಚಾತಕಪಕ್ಷಿಗಳಂತೆ ಕಾಯುತ್ತಿದ್ದ ಪುರಸಭೆ ಸದಸ್ಯರಿಗೆ ಕೊನೆಗೂ ಅವಕಾಶದ ಬಾಗಿಲು ತೆರೆದಿದೆ.

    ಸರ್ಕಾರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪಟ್ಟಿ ಪ್ರಕಟಿಸಿದೆ. ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಹಿಂದುಳಿದ ಬ ವರ್ಗ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಅಧಿಕಾರದ ಗದ್ದುಗೆಗೇರಲು ಆಕಾಂಕ್ಷಿಗಳಲ್ಲಿ ಹೊಸ ಹುರುಪು ಮೂಡಿದ್ದು, ರಾಜಕೀಯ ಚಟುವಟಿಕೆ ಗರಿಗೆದರಿದೆ.

    ಪಪಂಗೆ 2018 ರ ಆ. 31ರಂದು ಚುನಾವಣೆ ನಡೆದು ಸೆ. 3ರಂದು ಫಲಿತಾಂಶ ಪ್ರಕಟವಾಗಿತ್ತು. ಪಟ್ಟಣ ಪಂಚಾಯಿತಿಯ ಒಟ್ಟು 18 ಸ್ಥಾನಗಳ ಪೈಕಿ ಕಾಂಗ್ರೆಸ್- 10, ಬಿಜೆಪಿ-7 ಹಾಗೂ ಒಬ್ಬ ಪಕ್ಷೇತರ ಸದಸ್ಯರಿದ್ದಾರೆ. ಸ್ಪಷ್ಟ ಬಹುಮತ ಹೊಂದಿರುವ ಕಾಂಗ್ರೆಸ್ ನಿರ್ವಿಘ್ನವಾಗಿ ಅಧಿಕಾರದ ಗದ್ದುಗೆ ಏರುವುದು ಖಚಿತವಾಗಿದೆ. ಅಧ್ಯಕ್ಷ ಸ್ಥಾನಕ್ಕಾಗಿ 5ನೇ ವಾರ್ಡ್ ಸದಸ್ಯ ಪರಮೇಶ ಪರಬ ಮತ್ತು 13ನೇ ವಾರ್ಡ್ ಸದಸ್ಯೆ ಗಂಗವ್ವ ಆಲೂರ ಮಧ್ಯೆ ಪೈಪೋಟಿ ಇದೆ. ಉಪಾಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್​ನೊಂದಿಗೆ ಗುರುತಿಸಿಕೊಂಡ ಪಕ್ಷೇತರ ಸದಸ್ಯ ಸೇರಿ 9 ಸದಸ್ಯರಲ್ಲಿ ಪೈಪೋಟಿ ನಡೆದಿದೆ.

    ಪರಮೇಶನತ್ತ ಒಲವು?: ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಪರಮೇಶ ಪರಬ ಅವರು ಮೂರನೇ ಬಾರಿಗೆ ಪಟ್ಟಣ ಪಂಚಾಯಿತಿಗೆ ಆಯ್ಕೆಯಾಗಿದ್ದಾರೆ. ರಾಜಕೀಯ ಅನುಭವದೊಂದಿಗೆ ಸರಳ, ಸಜ್ಜನ ವ್ಯಕ್ತಿ ಎಂಬ ಮಾತುಗಳು ಪಕ್ಷದಲ್ಲಿ ಕೇಳಿ ಬಂದಿವೆ. ಅಧ್ಯಕ್ಷ ಸ್ಥಾನದ ಮತ್ತೊಬ್ಬ ಆಕಾಂಕ್ಷಿ ಗಂಗವ್ವ ಆಲೂರ ಮೊದಲ ಬಾರಿಗೆ ಪಟ್ಟಣ ಪಂಚಾಯಿತಿಗೆ ಆಯ್ಕೆಯಾಗಿದ್ದಾರೆ. ಆದರೆ, ಮೀಸಲಾತಿಗೆ ಒಳಪಟ್ಟಿದ್ದರಿಂದ ‘ನನಗೂ ಅವಕಾಶ ಕೊಡಿ’ ಎಂದು ನಾಯಕರನ್ನು ಕೋರಿದ್ದಾರೆ. ಪಕ್ಷದ ಮುಖಂಡರು ಒಬ್ಬರಿಗೇ ಒಲವು ತೋರುತ್ತಾರೋ ಅಥವಾ ಇಬ್ಬರಿಗೂ ಅಧಿಕಾರಾವಧಿ ಹಂಚಿಕೆ ಮಾಡುತ್ತಾರೋ ಎನ್ನುವುದು ಕುತೂಹಲ ಮೂಡಿಸಿದೆ. 7 ಸದಸ್ಯರನ್ನು ಹೊಂದಿದ ಬಿಜೆಪಿ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತು ಪಟ್ಟಣದ ಅಭಿವೃದ್ಧಿಗೆ ಸಹಕಾರ ನೀಡುವ ಇಂಗಿತ ವ್ಯಕ್ತಪಡಿಸಿದೆ.

    ಮೀಸಲಾತಿ ಅನ್ವಯ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಸದಸ್ಯರು ಆಕಾಂಕ್ಷಿಗಳಿದ್ದರೆ, ಸಾಮಾನ್ಯ ವರ್ಗಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಎಲ್ಲ ಸದಸ್ಯರ ಪೈಪೋಟಿ ಇದೆ. ಆದರೆ, ಪಕ್ಷದ ತತ್ತ್ವ ಸಿದ್ಧಾಂತಕ್ಕೆ ಒಳಪಟ್ಟು ಹಿರಿಯ ಮುಖಂಡರು ಹಾಗೂ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ವ ಸಮ್ಮತ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ.
    | ಎಚ್.ಡಿ. ಮಾಗಡಿ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

    ಪ್ರಕಟಗೊಂಡ ಅಧ್ಯಕ್ಷ ಸ್ಥಾನದ ಮೀಸಲಾತಿಗೆ ಬಿಜೆಪಿಯಿಂದ ಆಯ್ಕೆಯಾದ ಸದಸ್ಯರು ಇರದ ಕಾರಣ ಹಾಗೂ ಬಹುಮತಕ್ಕೆ ಅಗತ್ಯ ಸಂಖ್ಯಾಬಲ ಹೊಂದಿರದ ಕಾರಣ ನಾವು ಪ್ರತಿಪಕ್ಷ ಸ್ಥಾನದಲ್ಲಿ ಕುಳಿತು ಪಟ್ಟಣದ ಅಭಿವೃದ್ಧಿಗೆ ಸಹಕಾರ ನೀಡುತ್ತೇವೆ.
    | ಫಕೀರೇಶ ರಟ್ಟಿಹಳ್ಳಿ ಪಪಂ ಬಿಜೆಪಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts