More

    ಶಿರಸಿ ಸಿಟಿ ಸರ್ವೆ ನಡೆಯದೇ 72 ವರ್ಷ ಆಗೋಯ್ತು..!

    ರಾಜೇಂದ್ರ ಶಿಂಗನಮನೆ

    ಶಿರಸಿ: ಸರ್ಕಾರದ ನಿಯಮಾವಳಿಯಂತೆ ಪ್ರತಿ 10 ವರ್ಷಗಳಿಗೊಮ್ಮೆ ಕಡ್ಡಾಯವಾಗಿ ಮಾಡಬೇಕಿದ್ದ ನಗರ ಮಾಪನಾ ವ್ಯಾಪ್ತಿ (ಸಿಟಿ ಸರ್ವೆ ಬೌಂಡರಿ) ವಿಸ್ತರಣೆ ಕಾರ್ಯವು ಶಿರಸಿ ನಗರ ವ್ಯಾಪ್ತಿಯಲ್ಲಿ 72 ವರ್ಷಗಳಿಂದ ಬಾಕಿಯುಳಿದಿದೆ! ಇದರಿಂದ ನಗರದ ಶೇಕಡಾ 75ರಷ್ಟು ಆಸ್ತಿದಾರರು ನಿತ್ಯವೂ ಸಮಸ್ಯೆ ಅನುಭವಿಸುವಂತಾಗಿದೆ.

    ಏಳು ದಶಕದ ಹಿಂದೆ ಶಿರಸಿಯ ಅಂದಿನ ಜನಸಂಖ್ಯೆ ಹಾಗೂ ವಸತಿ ಪ್ರದೇಶದ ವ್ಯಾಪ್ತಿಯನ್ನು ಗಮನದಲ್ಲಿಟ್ಟುಕೊಂಡು ಸಿಟಿಎಸ್ ವ್ಯಾಪ್ತಿಯನ್ನು ಘೊಷಣೆ ಮಾಡಲಾಗಿತ್ತು. 1937ರಲ್ಲಿ ಆರಂಭವಾದ ನಗರದ ಸರ್ವೆ ಕಾರ್ಯವು 1939ರಲ್ಲಿ ಪೂರ್ಣಗೊಂಡಿತ್ತು. ಆನಂತರ ನಗರ ನೂರಾರುಪಟ್ಟು ಬೆಳೆದರೂ ಒಮ್ಮೆಯೂ ನಗರ ಮಾಪನಾ ವ್ಯಾಪ್ತಿ ವಿಸ್ತರಣೆ ಕಾರ್ಯವಾಗಿಲ್ಲ.

    ಪ್ರಸ್ತುತ ನಗರಸಭೆ ವ್ಯಾಪ್ತಿಯಲ್ಲಿ 18 ಸಾವಿರ ದಷ್ಟು ಆಸ್ತಿಗಳಿವೆ. ಆದರೆ ನಗರ ಪ್ರದೇಶದಲ್ಲಿನ ಹಲವು ಆಸ್ತಿಗಳು ಇಂದಿಗೂ ಸಿಟಿ ಸರ್ವೆ ವ್ಯಾಪ್ತಿ ಸೇರಿಲ್ಲ. ಹೀಗಾಗಿ ನಗರಸಭೆ ವ್ಯಾಪ್ತಿಯೊಳಗೆ ಸೇರಿದ ಭೂ ಮಾಲಿಕರು ಸಿಟಿಎಸ್ ವ್ಯಾಪ್ತಿಯೊಳಗೆ ಬರದೆ ಖಾತಾ ಬದಲಾವಣೆ, ಫಾರಂ ನಂ.3 ಸಮಸ್ಯೆ ಸೇರಿ ವಿವಿಧ ಸಮಸ್ಯೆಗಳನ್ನು ಅನುಭವಿಸುವಂತಾಗಿದೆ.

    ದಶಕಗಳ ಹಿಂದಿನ ನಕ್ಷೆ, ಮಾಹಿತಿ: ನಗರ ವ್ಯಾಪ್ತಿಯ ಆಸ್ತಿಗಳ ಲೆಕ್ಕ ಹಾಗೂ ನಕ್ಷೆಗೆ ಪೂರಕವಾಗಿ ಕಂದಾಯ ಇಲಾಖೆ ಅಧೀನದ ಭೂ ಮಾಪನಾ ಇಲಾಖೆಯು ಪ್ರತಿ 10 ವರ್ಷಕ್ಕೊಮ್ಮೆ ನಗರ ಮಾಪನಾ ವ್ಯಾಪ್ತಿ ವಿಸ್ತರಣೆ ಮಾಡುವ ಕಾರ್ಯ ಮಾಡಬೇಕು. ಆದರೆ ಸರ್ವೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ ಧೋರಣೆಯಿಂದ ಸರ್ವೆ ಕಾರ್ಯ ನಡೆದಿಲ್ಲ ಎಂಬ ಆರೋಪ ವ್ಯಕ್ತವಾಗಿದೆ. 2008ರಲ್ಲಿ ಭೂಮಾಪನಾ ಇಲಾಖೆ ಆಯುಕ್ತರು ಸಿಟಿಎಸ್ ವಿಸ್ತೀರ್ಣದ ಕುರಿತು ಸರ್ವೆಯರ್​ಗಳನ್ನು ನೇಮಿಸುವಂತೆ ಸ್ಥಳೀಯ ತಹಸೀಲ್ದಾರರಿಗೆ ಆದೇಶಿಸಿದ್ದರು. ಆ ಪ್ರಕಾರ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರರು ಸೂಚಿಸಿದ್ದರೂ ಸರ್ವೆ ಕಾರ್ಯ ಈವರೆಗೆ ನಡೆದಿಲ್ಲ. ಇದರಿಂದ ಪ್ರಸ್ತುತ ನಗರದ ವ್ಯಾಪ್ತಿಯ ಆಸ್ತಿಗಳ ಮಾಹಿತಿ, ಮಾಲೀಕತ್ವದ ಹೊಣೆಗಾರಿಕೆ, ಆಸ್ತಿ ಮಾರಾಟ ಹಾಗೂ ಖರೀದಿ ಲೆಕ್ಕ, ಖಾಸಗಿ ಹಾಗೂ ಸರ್ಕಾರಿ ಜಾಗದ ವಿಸ್ತೀರ್ಣ ಹಾಗೂ ನಕ್ಷೆಯೇ ಇಲ್ಲದಂತಾಗಿದೆ. ಒಂದೊಮ್ಮೆ ಇದ್ದರು ಕೂಡ ಏಳು ದಶಕದ ಹಿಂದಿನ ನಕ್ಷೆ ಹಾಗೂ ಮಾಹಿತಿಯೇ ಆಗಿದೆ!

    50 ಲಕ್ಷ ರೂ. ಬಜೆಟ್: ಕಳೆದೆರಡು ವರ್ಷಗಳ ಹಿಂದೆ ಅಂದಿನ ಕಂದಾಯ ಸಚಿವರಾಗಿದ್ದ ಆರ್.ವಿ.ದೇಶಪಾಂಡೆ ಅವರು ಸಿಟಿ ಸರ್ವೆ ನಡೆಸಿ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆ ಪ್ರಕಾರ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಸೂಕ್ತ ನಿರ್ದೇಶನಕ್ಕಾಗಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ರವಾನಿಸಿದ್ದರು. ಆಪ್ರಕಾರ ಶಿರಸಿ ಸಿಟಿ ಸರ್ವೆ ಹಾಗೂ ಇತರ ಕೆಲಸಗಳಿಗಾಗಿ ಬೇಕಾಗುವ ಅಂದಾಜು 50 ಲಕ್ಷ ರೂಪಾಯಿ ಬಜೆಟ್​ನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದ್ದರೂ ಯಾವುದೇ ಬೆಳವಣಿಗೆಯಾಗಿಲ್ಲ. ಹೀಗಾಗಿ ಲೋಪದೋಷಗಳಿಂದ ಕೂಡಿದ್ದರೂ ಈ ಹಿಂದಿನ ಸಿಟಿ ಸರ್ವೆಯ ಮಾನದಂಡವನ್ನೇ ಇಂದಿಗೂ ಅನುಸರಿಸಲಾಗುತ್ತಿದೆ. ಇದು ಹಲವು ಜ್ವಲಂತ ಸಮಸ್ಯೆಗಳಿಗೆ ಮೂಲವಾಗಿ ಮಾರ್ಪಟ್ಟಿದೆ ಎಂಬುದು ಆಸ್ತಿದಾರರ ಅಭಿಪ್ರಾಯ.

    ಸಿಟಿಎಸ್ ಆದರೆ ಕೆಲಸ ಸುಲಭ

    ಏಳು ದಶಕಗಳಲ್ಲಿ ಶಿರಸಿ ನಗರ ಸಾಕಷ್ಟು ಬೆಳೆದಿದೆ. ಸೂಕ್ತ ನಕ್ಷೆ ಹಾಗೂ ಆಸ್ತಿಗಳ ಸರ್ವೆ ಆಗದ ಕಾರಣ ಫಾರಂ ನಂಬರ್ 3 ಹಾಗೂ ಖಾತಾ ಸಮಸ್ಯೆ ತೀವ್ರವಾಗಿದೆ. ಸಾರ್ವಜನಿಕರು ನಿತ್ಯವೂ ಪರದಾಡುವ ಸನ್ನಿವೇಶವಿದೆ. ಈ ಸಮಸ್ಯೆ ನಿವಾರಣೆಯಾಗಲು ನಗರಸಭೆ ವ್ಯಾಪ್ತಿಯನ್ನು ಸಿಟಿಎಸ್ ಪ್ರದೇಶ ಎಂದು ಘೊಷಿಸಬೇಕು. ಸಿಟಿಎಸ್ ಆದರೆ ಅದರ ವ್ಯಾಪ್ತಿಯೊಳಗೆ ಬರುವ ಎಲ್ಲ ಭೂಮಿಗಳು ಕೃಷಿಯೇತರ ಭೂಮಿ ಎಂದು ಮಾನ್ಯತೆಯಾಗುತ್ತವೆ. ಇದರಿಂದ ಫಾರಂ ನಂಬರ್ 3 ಕೊಡಲು ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ಭೂ ದಾಖಲೆಗಳ ಆಯುಕ್ತರು ಗಮನ ನೀಡಬೇಕು.

    | ಮಾದೇವ ನಾಯ್ಕ- ಸಾಮಾಜಿಕ ಕಾರ್ಯಕರ್ತ

    ಸರ್ವೆಯರ್​ಗಳ ಅಸಹಕಾರ

    2008 ಹಾಗೂ 2018ರಲ್ಲಿ ಸಿಟಿ ಸರ್ವೆ ನಡೆಸುವಂತೆ ಇಲಾಖೆಗೆ ಸೂಚನೆ ಬಂದಿತ್ತು. ಅಂದಿನ ಸಚಿವರು ಮೌಖಿಕವಾಗಿ ಹೇಳಿದ್ದು ಬಿಟ್ಟರೆ ಸರ್ಕಾರದಿಂದ ಇಲಾಖೆಗೆ ಅನುದಾನ ಬಿಡುಗಡೆ ಮಾಡಿರಲಿಲ್ಲ. ಜತೆ, ಜಿಲ್ಲಾ ಮಟ್ಟದ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಸ್ಥಳೀಯ ಸರ್ವೆಯರ್​ಗಳ ಅಸಹಕಾರದ ಕಾರಣಕ್ಕೆ ಕಾರ್ಯಕ್ಕೆ ಹಿನ್ನಡೆಯಾಗಿತ್ತು. ತೀರಾ ತುರ್ತಲ್ಲದ ಕಾರಣಕ್ಕೆ ಸಿಟಿ ಸರ್ವೆ ಕಾರ್ಯವನ್ನೇ ಕೈಬಿಡಲಾಗಿತ್ತು.

    – ಹೆಸರು ಹೇಳಲಿಚ್ಛಿಸದ ಭೂ ಮಾಪನಾ ಇಲಾಖೆ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts