More

    ಶಿಗ್ಲಿ ಗ್ರಾಮದಲ್ಲಿ ಮೂಕರೋ‘ದನ’

    ಶಿಗ್ಲಿ: ಒಡೆಯರ ಮಲ್ಲಾಪುರ, ಉಳಟ್ಟಿ, ಶ್ಯಾಬಳ, ಸುವರ್ಣಗಿರಿ, ದೊಡ್ಡೂರು ಹಾಗೂ ಶಿಗ್ಲಿ ಸೇರಿದಂತೆ ಹಲವು ಗ್ರಾಮಗಳ ಸಾವಿರಾರು ಜಾನುವಾರುಗಳ ರಕ್ಷಣೆಯ ಹೊಣೆ ಹೊತ್ತ ಶಿಗ್ಲಿ ಗ್ರಾಮದ ಪಶು ವೈದ್ಯಕೀಯ ಆಸ್ಪತ್ರೆಗೆ ವೈದ್ಯರಿಲ್ಲದ ಕಾರಣ ಬೀಗ ಜಡಿಯಲಾಗಿದೆ.

    ಮೂರ್ನಾಲ್ಕು ವರ್ಷಗಳಿಂದಲೂ ಇದೇ ಸ್ಥಿತಿ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಪರಿಣಾಮ ರೈತರು ತಮ್ಮ ಜಾನುವಾರುಗಳಿಗೆ ಅನಾರೋಗ್ಯ ಉಂಟಾದಾಗ ದೂರದ ಲಕ್ಷೆ್ಮೕಶ್ವರದಿಂದ ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಬೇಕಿದೆ. ಅವರು ಕೂಡ ಸಕಾಲಕ್ಕೆ ಬಾರದಿದ್ದರೆ ದನ-ಕರುಗಳ ಸಾವಿಗೀಡಾಗುತ್ತವೆ.

    ಅನಾರೋಗ್ಯದಿಂದ ಬಳಲುತ್ತಿದ್ದ ಗ್ರಾಮದ ಗುರುಬಸಪ್ಪಜ್ಜ ನಗರದ ಚಿಕ್ಕನಗೌಡ ಶಿವನಗೌಡ ಪಾಟೀಲ ಎಂಬುವವರ ಆಕಳು ಸಕಾಲಕ್ಕೆ ಚಿಕಿತ್ಸೆ ಸಿಗದೇ ಮಂಗಳವಾರ ಬೆಳಗ್ಗೆ ಮೃತಪಟ್ಟಿದೆ. ನಿತ್ಯವೂ 10 ಲೀಟರ್ ಹಾಲು ಕೊಡುತ್ತಿದ್ದ ಹಸು ಮೃತಪಟ್ಟಿದ್ದರಿಂದ ಕರು ಅನಾಥವಾಗಿದೆ. ಅಲ್ಲದೆ, ರೈತನ ಆದಾಯಕ್ಕೂ ಭಾರಿ ಪೆಟ್ಟು ಬಿದ್ದಿದೆ. ‘ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿರುವ ಸಾವಿರಾರು ರೈತರ ಸಂಕಷ್ಟ ನೀಗಲು ಕೂಡಲೆ, ಪಶು ಆಸ್ಪತ್ರೆಗೆ ವೈದ್ಯರನ್ನು ನೇಮಿಸಬೇಕು. ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡಿ ಮೂಕಪ್ರಾಣಿಗಳು ಸಾವಿಗೀಡಾಗದಂತೆ ನೋಡಿಕೊಳ್ಳಬೇಕು’ ಎಂದು ಗ್ರಾಮಸ್ಥರಾದ ಗದಿಗೆಪ್ಪ ಮನಗೂಳಿ, ನಿಂಗಪ್ಪ ವಾರದ, ಕೃಷ್ಣ ಬಿದರಹಳ್ಳಿ, ಮಾದೇವಪ್ಪ ಮೂಲಿಮನಿ, ಸುರೇಶ ಉಳಟ್ಟಿ, ನೀಲಪ್ಪ ಕಳ್ಳಿ, ಚಂದ್ರು ತೋಟದ ಇತರರು ಆಗ್ರಹಿಸಿದ್ದಾರೆ.

    ಶಿಗ್ಲಿ ಗ್ರಾಮದಲ್ಲಿರುವ ಪಶು ಆಸ್ಪತ್ರೆಯಲ್ಲಿ ಕಳೆದ 4 ವರ್ಷಗಳಿಂದ ಪಶುವೈದ್ಯರೇ ಇಲ್ಲ. ಸಿಬ್ಬಂದಿ ಕೊರತೆ ಇದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದು ಕೂಡಲೆ, ಪಶು ವೈದ್ಯರನ್ನು ನೇಮಕ ಮಾಡಲಾಗುತ್ತದೆ.

    | ಡಾ ಎನ್.ಎ. ಹವಳದ ಪಶು ವೈದ್ಯಕೀಯ ಸಹಾಯಕ ನಿರ್ದೇಶಕ, ಲಕ್ಷ್ಮೇಶ್ವರ

    ನಮ್ ಊರಿಗೆ ಒಬ್ಬರು ದನದ ಡಾಕ್ಟರನ್ನು ನೇಮಿಸಿ ಪುಣ್ಯ ಕಟ್ಟಿಕೊಳಿ. ಮಳೆಗಾಲ್ದಾಗ ಜಾನುವಾರುಗಳ ಆರೋಗ್ಯದಲ್ಲಿ ಏರುಪೇರಾದರೆ ಚಿಕಿತ್ಸೆ ಕೊಡಲು ವೈದ್ಯರೇ ಇಲ್ಲ. ಇದರಿಂದಾಗಿ ಮೂಕ ಪ್ರಾಣಿಗಳು ಸಾಯುತ್ತಿವೆ. ಅವುಗಳ ಮೂಕರೋಧನ ಯಾರಿಗೂ ಕೇಳಿಸುತ್ತಿಲ್ಲ.

    | ಚಿಕ್ಕನಗೌಡ ಶಿವನಗೌಡ ಪಾಟೀಲ, ಶಿಗ್ಲಿ ಗ್ರಾಮದ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts