More

    ಶಿಕ್ಷಣ ಸಂಸ್ಥೆ ಉದ್ಯೋಗಿಯಿಂದ 7 ಮಂದಿಗೆ ವೈರಸ್

    ಧಾರವಾಡ: ಜಿಲ್ಲೆಯಲ್ಲಿ ಬುಧವಾರ 8 ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ವೈರಾಣು ಹರಡುವಿಕೆ ಮುಂದುವರಿದಿ ರುವುದನ್ನು ದೃಢಪಡಿಸಿದೆ.

    ಜೂ. 11ರಂದು ಸೋಂಕು ದೃಢಪಟ್ಟ ನವಲಗುಂದ ತಾಲೂಕಿನ ಮೊರಬ ಗ್ರಾಮದ 59 ವರ್ಷದ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ ಒಬ್ಬರಿಗೆ ಹಾಗೂ ಜೂ. 14ರಂದು ದೃಢಪಟ್ಟ ಧಾರವಾಡ ಕಟ್ಟಿ ಚಾಳದ ನಿವಾಸಿ 30 ವರ್ಷದ ಮಹಿಳೆಯ ಸಂಪರ್ಕ ಹೊಂದಿದ್ದ 7 ಜನರಿಗೆ ಬುಧವಾರ ಸೋಂಕು ದೃಢಪಟ್ಟಿದೆ. ಮೊರಬ ಗ್ರಾಮದ ವ್ಯಕ್ತಿ ಸಂಪರ್ಕ ಹೊಂದಿದ್ದ 55 ವರ್ಷದ ಪುರುಷ, ಧಾರವಾಡ ಕಟ್ಟಿ ಚಾಳದ ಮಹಿಳೆ ಸಂಪರ್ಕ ಹೊಂದಿದ್ದ 7 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಕಟ್ಟಿ ಚಾಳದ ಮಹಿಳೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಉದ್ಯೋಗಿ ಎಂದು ಹೇಳಲಾಗಿದೆ. ಈ ಸಂಸ್ಥೆಯ ಒಬ್ಬ ಉದ್ಯೋಗಿಯಲ್ಲಿ ಕೆಲವು ದಿನಗಳ ಹಿಂದೆ ಸೋಂಕು ಕಂಡುಬಂದಿತ್ತು. ಅದಕ್ಕಿಂತ ಮೊದಲು ಸಂಸ್ಥೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು. ಆ ಮಹಿಳೆಯಿಂದ

    7 ಜನರಿಗೆ ಕರೊನಾ ಬಂದಿದೆ ಎಂದು ಹೇಳಲಾಗಿತ್ತು. ಆ 7 ಜನರಲ್ಲಿ ಕಟ್ಟಿ ಚಾಳದ ಮಹಿಳೆ ಒಬ್ಬಳಾಗಿದ್ದು, ಈಗ ಮತ್ತೆ 7 ಜನರಿಗೆ ಹರಡಿದೆ. ಇದು ಕರೊನಾ ಸೋಂಕು ಹಬ್ಬುವಿಕೆಯ ಭೀಕರತೆಗೆ ಸಾಕ್ಷಿಯಾಗಿದೆ.

    ಮೊರಬ ಗ್ರಾಮದ 59 ವರ್ಷದ ಪುರುಷನಿಂದ ಈಗಾಗಲೇ ಆತನ ಕುಟುಂಬದವರು ಸೇರಿ ಅನೇಕರಿಗೆ ಸೋಂಕು ಹರಡಿದೆ. ಅಲ್ಲಿಯ ಒಬ್ಬ ವ್ಯಕ್ತಿ ಈಗಾಗಲೇ ಸಾವಿಗೀಡಾಗಿದ್ದಾನೆ. ಬುಧವಾರ ಮತ್ತೊಬ್ಬನಲ್ಲಿ ಸೋಂಕು ಖಚಿತವಾಗಿರುವುದು ಸಹ ಕರೊನಾ ಸೋಂಕು ಹರಡುವಿಕೆಯ ವೇಗದ ಬಗ್ಗೆ ಆತಂಕ ಉಂಟುಮಾಡುವಂತಿದೆ. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 171ಕ್ಕೆ ಏರಿಕೆಯಾಗಿದ್ದು, 50 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

    ಇಡೀ ಕುಟುಂಬಕ್ಕೆ ವಕ್ಕರಿಸಿದ ವೈರಾಣು!: ಧಾರವಾಡ ನಗರದ ಕಿಲ್ಲಾ ರಸ್ತೆ ಕಟ್ಟಿ ಚಾಳದ ಒಂದು ಕುಟುಂಬದಲ್ಲಿ ಒಬ್ಬರನ್ನು ಬಿಟ್ಟು ಉಳಿದ 8 ಜನರಿಗೆ ಕರೊನಾ ಸೋಂಕು ಹಬ್ಬಿದೆ. ಶಿಕ್ಷಣ ಸಂಸ್ಥೆಯೊಂದರ ಉದ್ಯೋಗಿಯಾಗಿರುವ 30 ವರ್ಷದ ಮಹಿಳೆಯಲ್ಲಿ 3 ದಿನದ ಹಿಂದೆ ವೈರಾಣು ದೃಢಪಟ್ಟಿತ್ತು. ಕುಟುಂಬದ ಉಳಿದವರ ಕಫ ಪರೀಕ್ಷಾ ವರದಿ ಬುಧವಾರ ಬಂದಿದ್ದು, ಕುಟುಂಬದ ಇತರ 7 ಜನರಿಗೆ ಸೋಂಕು ಹರಡಿರುವುದು ದೃಢವಾಗಿದೆ. ತಮ್ಮ ಪಾಡಿಗೆ ತಾವು ಎಂಬಂತೆ ನೆಮ್ಮದಿಯಿಂದ ಇದ್ದ 9 ಜನರ ಕೂಡು ಕುಟುಂಬದಲ್ಲಿ ಈಗ 80 ವರ್ಷದ ವೃದ್ಧೆ ಮಾತ್ರ ಆರೋಗ್ಯವಾಗಿದ್ದಾರೆ. 4, 5, 10 ವರ್ಷದ ಮಕ್ಕಳು, 30 ವರ್ಷದ ಮಹಿಳೆ, 33, 34, 59 ವರ್ಷದ ಪುರುಷರು ಹುಬ್ಬಳ್ಳಿ ಕಿಮ್ಸ್​ಗೆ ದಾಖಲಾಗಿದ್ದಾರೆ.

    ಗಂಡು ಮಗು ಜನನ: ಕಿಮ್ಸ್​ಗೆ ದಾಖಲಾಗಿ ಕರೊನಾ ಸೋಂಕು ಮುಕ್ತರಾಗಿದ್ದ ನವನಗರದ ಗರ್ಭಿಣಿ (28) ಇದೇ ಆಸ್ಪತ್ರೆಯ ಸ್ತ್ರೀರೋಗ ಹಾಗೂ ಪ್ರಸೂತಿ ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ತೂಕ 3.18 ಕೆಜಿ ಇದ್ದು ತಾಯಿ ಮತ್ತು ಮಗು ಆರೋಗ್ಯದಿಂದ ಇದ್ದಾರೆ. ಸೋಂಕು ತಗುಲಿದ್ದ ಈ ಮಹಿಳೆಗೆ ಕಿಮ್ಸ್​ನಲ್ಲಿ ಚಿಕಿತ್ಸೆ ನೀಡಿ ಗುಣಪಡಿಸಲಾಗಿತ್ತು. ಇದೇ ಆಸ್ಪತ್ರೆಗೆ ಬಂದು ಹೆರಿಗೆ ಮಾಡಿಸಿಕೊಳ್ಳುವುದಾಗಿ ವೈದ್ಯರಿಗೆ ವಾಗ್ದಾನ ಮಾಡಿದ್ದರು. ಅಂತೆಯೇ ಇದೇ ಆಸ್ಪತ್ರೆಯಲ್ಲಿ ಸಹಜ ಹೆರಿಗೆಯಾಗಿದೆ.

    ಸೀಲ್​ಡೌನ್ ಪ್ರದೇಶವಾದರೂ ಜನನಿಬಿಡ: ಹುಬ್ಬಳ್ಳಿ ನಗರದ ಗಣೇಶಪೇಟ ಕೊರವಿ ಪ್ಲಾಜಾ ಬಳಿ 100 ಮೀ. ಪ್ರದೇಶ ಮಾತ್ರ ಸೀಲ್​ಡೌನ್ ಆಗಿದ್ದು, ಪಕ್ಕದಲ್ಲೇ ಮಾರುಕಟ್ಟೆ ಚಟುವಟಿಕೆ ಸರಾಗವಾಗಿ ನಡೆಯುತ್ತಿವೆ.

    ಆರಂಭದಲ್ಲಿ ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಪ್ರದೇಶದಿಂದ 1 ಕಿ.ಮೀ. ಪ್ರದೇಶವನ್ನು ಸೀಲ್​ಡೌನ್ ಮಾಡಲಾಗುತ್ತಿತ್ತು. ಇದೀಗ 100 ಮೀ. ಮಾತ್ರ ಸೀಲ್​ಡೌನ್ ಮಾಡಲಾಗುತ್ತಿದೆ. ಕೊರವಿ ಪ್ಲಾಜಾದ ಎದುರು 100 ಮೀ. ಪ್ರದೇಶವನ್ನು ಬ್ಯಾರಿಕೇಡ್​ನಿಂದ ಸಂಪೂರ್ಣ ಬಂದ್ ಮಾಡಲಾಗಿದೆ. ಹಾಗಾಗಿ ಬ್ಯಾರಿಕೇಡ್ ಅಕ್ಕಪಕ್ಕದಲ್ಲೇ ಎಲ್ಲ ಅಂಗಡಿ- ಮುಗ್ಗಟ್ಟುಗಳು ಬಾಗಿಲು ತೆರೆದಿವೆ. ಸೀಲ್​ಡೌನ್ ಇದ್ದರೂ ಕೆಲವರು ಆಗಾಗ ಬ್ಯಾರಿಕೇಡ್​ನಿಂದ ನುಸುಳಿಕೊಂಡು ಓಡಾಡುತ್ತಿರುವುದು ಸಾಮಾನ್ಯವಾಗಿದೆ.

    ಸಾರ್ವಜನಿಕರೇ ಎಚ್ಚರ!: ಸೀಲ್​ಡೌನ್ ಪ್ರದೇಶಗಳಲ್ಲಿ ಓಡಾಡಿದ ಕೆಲವರಿಗೂ ಕರೊನಾ ಪಾಸಿಟಿವ್ ಪತ್ತೆಯಾದ ಉದಾಹರಣೆಗಳಿವೆ. ಹಾಗಾಗಿ, ಸೀಲ್​ಡೌನ್ ಪ್ರದೇಶಗಳಲ್ಲಿ ಅನಗತ್ಯವಾಗಿ ಓಡಾಡುವ ಮೂಲಕ ಸಮಸ್ಯೆಗೆ ಗುರಿಯಾಗದಿರಿ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ ಎಂಬುದನ್ನು ಮರೆಯದಿರಿ. ಆ ಮೂಲಕ ಕರೊನಾ ಸೋಂಕು ಹರಡುವಿಕೆ ತಡೆಗಟ್ಟಿ ಎಂಬುದು ‘ವಿಜಯವಾಣಿ’ ಕಳಕಳಿ.

    ಜ್ವರ, ಕೆಮ್ಮು ಇದ್ದರೆ ತಪಾಸಣೆ: ನಿಯಂತ್ರಿತ ಗಂಟಲ ದ್ರವ ಪರೀಕ್ಷೆಗೆ ಜಿಲ್ಲಾಡಳಿತ ಅನುವು ಮಾಡಿಕೊಟ್ಟಿದೆ. ತೀವ್ರ ತರಹದ ಉಸಿರಾಟ ಸಮಸ್ಯೆ ಮತ್ತು ಕೆಮ್ಮು-ಜ್ವರ ಇದ್ದವರಿಗೆ ಮಾತ್ರ ಮಾಡಬೇಕೆಂಬುದು ಮುಂದುವರಿದಿದೆ. ಹುಬ್ಬಳ್ಳಿ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಗರ್ಭಿಣಿಯರ ಗಂಟಲ ದ್ರವ ಪರೀಕ್ಷೆ ಮಾಡಲಾಗುತ್ತಿತ್ತು. ಕೆಲವು ದಿನಗಳ ಹಿಂದೆ ನಿಲ್ಲಿಸಲಾಗಿತ್ತು. ಈಗ ಮತ್ತೆ ಆರಂಭಿಸಲಾಗಿದೆ. ಜೂ. 16ರಿಂದ ಜೂ. 17ರ ಸಂಜೆ 5.30ರ ವರದಿಯಂತೆ ಜಿಲ್ಲೆಯ 18 ಕೇಂದ್ರಗಳಲ್ಲಿ ಒಟ್ಟು 18,819 ಜನರನ್ನು ಗಂಟಲ ದ್ರವ ಪರೀಕ್ಷೆಗೊಳಪಡಿಸಲಾಗಿದೆ.

    ಸಮಗ್ರ ಪರೀಕ್ಷೆಗೆ ಸೂಚನೆ: ಧಾರವಾಡ ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಪರಿಣಾಮಕಾರಿ ಸರ್ವೆಕ್ಷಣ ಮೂಲಕ ಸರ್ಕಾರದ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಸಮಗ್ರ ಪರೀಕ್ಷೆ ಮಾಡಬೇಕು ಎಂದು ಡಿಸಿ ದೀಪಾ ಚೋಳನ್ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯವಾಗಿ ಕೊಳಚೆ ಪ್ರದೇಶದ ನಿವಾಸಿಗಳು, ಶಾಪಿಂಗ್ ಮಾಲ್, ಮಾರ್ಕೆಟ್, ಫುಟ್​ಪಾತ್​ಗಳಲ್ಲಿ ಕೆಲಸ ಮಾಡುವ ವೆಂಡರ್, ಬಿಲ್​ಕಲೆಕ್ಟರ್, ಆಹಾರ ಮತ್ತು ಕೋರಿಯರ್ ಸರಬರಾಜು ಮಾಡುವ ಸಿಬ್ಬಂದಿ, 50 ವರ್ಷ ಮೇಲ್ಪಟ್ಟ ಹಾಗೂ ಮಾನಸಿಕ ಅಸ್ವಸ್ಥರಿಗೆ ಪರೀಕ್ಷೆಯಲ್ಲಿ ಆದ್ಯತೆ ನೀಡಬೇಕು ಎಂದರು. ನಿತ್ಯ ಸಂಗ್ರಹಿಸುವ ಮಾದರಿಗಳಲ್ಲಿ ಬಹು ಜನರೊಂದಿಗೆ ಸಂಪರ್ಕಕ್ಕೆ ಬರುವ ಮಾರ್ಕೆಟ್ ಮತ್ತು ಮಾಲ್​ಗಳಲ್ಲಿನ ವ್ಯಕ್ತಿಗಳ ಮಾದರಿಗಳಿಗೆ ಜಿಲ್ಲೆಯಲ್ಲಿನ ಪ್ರಯೋಗಾಲಯದ ಸಾಮರ್ಥ್ಯಕ್ಕೆ ಅನುಗುಣವಾಗಿ, ಆರೋಗ್ಯ ಇಲಾಖೆ ನೀಡಿರುವ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಪರೀಕ್ಷೆಗೆ ಆದ್ಯತೆ ನೀಡಬೇಕು ಎಂದರು. ಜಿಪಂ ಸಿಇಒ ಡಾ. ಬಿ.ಸಿ. ಸತೀಶ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಡಿಎಚ್​ಒ ಡಾ. ಯಶವಂತ ಮದೀನಕರ್, ಡಾ. ಲಕ್ಷ್ಮೀಕಾಂತ ಲೋಕರೆ, ಇತರರು ಇದ್ದರು.

    ಪೊಲೀಸರ ವರದಿ ನೆಗೆಟಿವ್: ಕರೊನಾ ಸೋಂಕಿತರ ಸಂಪರ್ಕದ ಹಿನ್ನೆಲೆಯಲ್ಲಿ ಕ್ವಾರಂಟೈನ್​ನಲ್ಲಿ ಇರಿಸಲಾಗಿದ್ದ ಹುಬ್ಬಳ್ಳಿ ನಗರದ ಐವರು ಪೊಲೀಸ್ ಸಿಬ್ಬಂದಿ ವರದಿ ನೆಗೆಟಿವ್ ಬಂದಿದ್ದು, ಖಾಕಿ ಪಡೆ ನಿರಾಳವಾಗಿದೆ.

    ದಾವಣಗೆರೆ ಮೂಲದ ಅನಾಥ ವೃದ್ಧೆಯ ಸಂಪರ್ಕದ ಹಿನ್ನೆಲೆಯಲ್ಲಿ ಬೆಂಡಿಗೇರಿಯ ಮಹಿಳಾ ಪಿಎಸ್​ಐ, ಎಎಸ್​ಐ, ಹೆಡ್ ಕಾನ್ಸ್​ಟೇಬಲ್ ಹಾಗೂ ಕಾನ್ಸ್​ಟೇಬಲ್​ರನ್ನು ಹೋಂ ಕ್ವಾರಂಟೈನ್​ಗೆ ಒಳಪಡಿಸಲಾಗಿತ್ತು. ನಾಲ್ವರು ಸಿಬ್ಬಂದಿ ಸೇರಿ ಠಾಣೆಯ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಯ ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಲಾಗಿತ್ತು. ಎಲ್ಲರ ವರದಿ ನೆಗೆಟಿವ್ ಬಂದಿದೆ. ಕ್ವಾರಂಟೈನ್ ಅವಧಿ ಪೂರೈಸಲು ಸೂಚಿಸಲಾಗಿದೆ. ಆನಂದನಗರದ ಸೋಂಕಿತನ ಸಂಪರ್ಕದ ಹಿನ್ನೆಲೆಯಲ್ಲಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್​ಟೇಬಲ್ ಒಬ್ಬರನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಅವರ ವರದಿಯೂ ನೆಗೆಟಿವ್ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts