More

    ಶಿಕ್ಷಕರ ನಡೆ ಮಕ್ಕಳ ಮನೆ ಕಡೆ

    ರಾಜೇಂದ್ರ ಶಿಂಗನಮನೆ ಶಿರಸಿ

    ಕೋವಿಡ್ ಕಾರಣಕ್ಕೆ ಆರಂಭವಾಗದ ಶಾಲೆಗಳತ್ತ ವಿದ್ಯಾರ್ಥಿಗಳು ಮುಖ ಮಾಡದ ಕಾರಣ ಸ್ವತಃ ಶಿಕ್ಷಕರೇ ವಿದ್ಯಾರ್ಥಿಗಳ ಮನೆಯತ್ತ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಮೊಬೈಲ್​ಫೋನ್ ನೆಟ್​ವರ್ಕ್ ಇಲ್ಲದ ಹಳ್ಳಿಗಳಲ್ಲಿ ಆಫ್ ಲೈನ್ ಪಾಠ ಆರಂಭವಾಗಿದೆ.

    ಶಿರಸಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯ ಸಾಲಕಣಿ ಕ್ಲಸ್ಟರ್ ವ್ಯಾಪ್ತಿಯ ನೈಗಾರ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ವರ್ಕ್ ಫ್ರಂ ಹೋಮ್ ಜತೆ ‘ಶಿಕ್ಷಕರ ನಡೆ ಮಕ್ಕಳ ಮನೆ ಕಡೆ’ ಎಂಬ ಆಫ್ ಲೈನ್ ಪಾಠ ಆರಂಭಿಸಿದ್ದಾರೆ. ಈ ಭಾಗದಲ್ಲಿನ ಒಳ ಹಳ್ಳಿಗಳಲ್ಲಿ ಮೊಬೈಲ್​ಫೋನ್ ನೆಟ್ ವರ್ಕ್ ಇಲ್ಲದ ಜಾಗದಲ್ಲಿ ಆನ್​ಲೈನ್ ಪಾಠ ಅಸಾಧ್ಯ. ಹಾಗಾಗಿ, ಶಾಲೆಗೆ ಬರಬೇಕಿದ್ದ ಮಕ್ಕಳನ್ನು ಆಯಾ ಗ್ರಾಮದ ಮುಖ್ಯಸ್ಥರ ಮನೆಯಂಗಳದಲ್ಲಿ ಸೇರಿಸಿ ಶಾರೀರಿಕ ಅಂತರ ಕಾಯ್ದುಕೊಳ್ಳುವ ಮೂಲಕ ಪಾಠ ಮಾಡುತ್ತಿದ್ದಾರೆ.

    ವಾರಕ್ಕೆರಡು ತರಗತಿ: ತರಗತಿವಾರು ವಿದ್ಯಾರ್ಥಿಗಳ ತಂಡ ರಚಿಸಿಕೊಂಡು ಎಲ್ಲ ವಿಷಯಗಳ ಮೇಲೆ ಪುಟ್ಟ ಪಾಠ ಕಲಿಸಿ, ಅವಕ್ಕೆ ಸಂಬಂಧಪಟ್ಟ ಮನೆಗೆಲಸ ನೀಡಲಾಗುತ್ತದೆ. ಮುಂದಿನ ಮೂರು ದಿನಗಳೊಳಗೆ ಕಲಿಸಿದ ಪಾಠ ಮನನ, ಪ್ರಶ್ನೋತ್ತರ ಬರೆಯುವುದು, ಪಾಠದ ಮೇಲೆ ಪ್ರಶ್ನೆ ರಚನೆ, ಕಾಫಿ ಲೇಖನ, ಶಬ್ದ ರಚನೆ, ಶಬ್ದ ಗುರುತಿಸುವಿಕೆ, ಕೂಡಿಸುವಿಕೆ, ಕಳೆಯುವಿಕೆಯಂಥ ಚಟುವಟಿಕೆ ಮಾಡಲು ಸೂಚಿಸಲಾಗುತ್ತದೆ. ಜತೆ, ಈ ಮೊದಲು ಮಾಡಿದ ವಿಡಿಯೋ ಪಾಠಗಳನ್ನು ಮೊಬೈಲ್​ನಿಂದ ಮೊಬೈಲ್​ಗೆ ಸ್ಥಳದಲ್ಲೇ ಹಂಚಿ ಅವುಗಳ ಮೂಲಕವೂ ಪಾಠ ಕಲಿಕೆಗೆ ಅವಕಾಶ ನೀಡಲಾಗಿದೆ. ವಾರದಲ್ಲಿ 2 ದಿನ ಈ ಪಾಠ ಹಳ್ಳಿಯ ಮನೆಯಂಗಳದಲ್ಲಿ ನಡೆಯುತ್ತಿದೆ.

    ದೂರದ ನಡಿಗೆ: ಶಾಲೆಯ ಮುಖ್ಯಶಿಕ್ಷಕ ಸುರೇಶ ನಾಯ್ಕ, ಸಹಶಿಕ್ಷಕಿಯರಾದ ಪೂರ್ಣಿಮಾ ಹೆಗಡೆ, ಗೀತಾಂಜಲಿ ಭಟ್ಟ ಅವರು ಶಾಲೆಯಿಂದ ಮೂರ್ನಾಲ್ಕು ಕಿಲೋ ಮೀಟರ್ ದೂರದ ಹಾಸಣಗಿ, ಜಡ್ಡಿಗದ್ದೆ, ಕಣಿಗಾರ, ಪಾಳ್ಯದಬಯಲು, ಮುರೇಗಾರ, ತೆಪಗಿ ಭಾಗದ ವಿದ್ಯಾರ್ಥಿಗಳ ಮನೆಯಂಗಳಕ್ಕೇ ಕಾಲ್ನಡಿಗೆ ಮೂಲಕ ತೆರಳಿ ಪಾಠ ಮಾಡುತ್ತಿದ್ದಾರೆ. ಇವರಿಗೆ ಮಾರ್ಗದರ್ಶನ ನೀಡುತ್ತಿರುವ ಸಿಆರ್​ಪಿ ನಾಗರತ್ನಮ್ಮ ಡಿ. ಅವರು ಸ್ಥಳಕ್ಕೇ ತೆರಳಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪಟ್ಟಿ, ಪೆನ್ನು, ಮಾಸ್ಕ್ ವಿತರಿಸುವ ಕಾರ್ಯ ಮಾಡಿದ್ದಾರೆ. ಜತೆಗೆ, ದಾನಿಗಳ ಮೂಲಕ ಶೈಕ್ಷಣಿಕ ಚಟುವಟಿಕೆಗೆ ಪೂರಕ ವಸ್ತುಗಳನ್ನೂ ದೇಣಿಗೆಯಾಗಿ ನೀಡಲಾಗುತ್ತಿದೆ. ಸಾಲಕಣಿ ಕ್ಲಸ್ಟರ್​ನ ಶಿಗೇಹಳ್ಳಿ, ಕಡಬಾಳ ಸೇರಿದಂತೆ 14 ಶಾಲೆಗಳ ವ್ಯಾಪ್ತಿಯಲ್ಲಿ ಈ ಪ್ರಯತ್ನ ಆರಂಭವಾಗಿದೆ.

    ಶಾಲೆಗಳು ಆರಂಭವಾಗದ ಕಾರಣ ವಿದ್ಯಾರ್ಥಿಗಳು ತರಗತಿಗಳಿಂದ ದೂರ ಉಳಿದಿದ್ದಾರೆ. ಪ್ರಸ್ತುತ ವ್ಯವಸ್ಥೆಯು ಶೈಕ್ಷಣಿಕವಾಗಿ ಹಿನ್ನಡೆಗೆ ಕಾರಣವಾಗಬಾರದು ಎಂಬ ಉದ್ದೇಶದಿಂದ ವಿದ್ಯಾರ್ಥಿಗಳಿರುವ ಸ್ಥಳಕ್ಕೇ ತೆರಳಿ ಪಾಠ ಮಾಡಲು ಕೆಲ ಶಿಕ್ಷಕರು ಮುಂದಾಗಿದ್ದಾರೆ. ಇದು ಉತ್ತಮ ಕಾರ್ಯವಾಗಿದೆ. | ದಿವಾಕರ ಶೆಟ್ಟಿ ಡಿಡಿಪಿಐ ಶಿರಸಿ ಶೈಕ್ಷಣಿಕ ಜಿಲ್ಲೆ

    ಕೋವಿಡ್ ಕಾರಣಕ್ಕೆ ಶಿಕ್ಷಕರಿಗೆ ವರ್ಕ್ ಫ್ರಂ ಹೋಮ್ ವ್ಯವಸ್ಥೆಯಿದೆ. ಆದರೆ, ನೈಗಾರ ಶಾಲೆ ವ್ಯಾಪ್ತಿಯಲ್ಲಿ ಮೊಬೈಲ್​ಫೋನ್ ನೆಟ್​ವರ್ಕ್ ಸಮಸ್ಯೆ ಇದೆ. ಹೀಗಾಗಿ, ಪಾಠವನ್ನು ಚಿತ್ರೀಕರಿಸಿ ಪಾಲಕರ ಮೊಬೈಲ್​ಫೋನ್​ಗಳಿಗೆ ಕಳುಹಿಸಲು ಸಾಧ್ಯವಿಲ್ಲ. ಕಾರಣ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆದು ಮಕ್ಕಳ ಮನೆಗೇ ಹೋಗಿ ಮುಖಾಮುಖಿ ಪಾಠ ಮಾಡಲಾಗುತ್ತಿದೆ. ಆನ್​ಲೈನ್ ಪಾಠದ ವ್ಯವಸ್ಥೆಗೆ ಅವಕಾಶವಿಲ್ಲದ ಕಡೆ ಇಂಥ ಆಫ್​ಲೈನ್ ವ್ಯವಸ್ಥೆ ಅಳವಡಿಸಿಕೊಂಡರೆ ಗುಣಮಟ್ಟದ ಕಲಿಕೆ ಸಾಧ್ಯವಾಗುತ್ತದೆ. | ಗೀತಾಂಜಲಿ ಭಟ್ಟ ಸಹಶಿಕ್ಷಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts