More

    ಶಿಕ್ಷಕನ ಸ್ವಂತ ಖರ್ಚಿನಲ್ಲಿ ನಿರ್ಮಾಣಗೊಂಡ ಗಣಿತ ಲ್ಯಾಬ್​

    ಯಾದಗಿರಿ: ಇದು ಸರ್ಕಾರಿ ಶಾಲೆ. ಇಲ್ಲಿನ ಒಂದು ಕೋಣೆಯಲ್ಲಿ ಕಾಲಿಟ್ಟರೆ ಸಾಕು, ಯಾವುದೋ ದೊಡ್ಡ ಪ್ರಯೋಗಾಲಯಕ್ಕೆ ಬಂದ ಅನುಭವ. ಹಿಂದೆ ಓದಿದ ಕೆಲ ಪಾಠಗಳು ನಿಮ್ಮ ಸ್ಮತಿಪಟಲದಿಂದ ಥಟ್ ಅಂತ ಹೊರಬಂದು ಹೋದಂತಾಗುತ್ತದೆ.

    ಹೌದು, ಈ ದೃಶ್ಯ ಕಾಣಸಿಗುವುದು ಶಹಾಪುರ ತಾಲೂಕಿನ ಸಗರ ಗ್ರಾಮದ ಸಕರ್ಾರಿ ಪ್ರೌಢಶಾಲೆಯಲ್ಲಿ. ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡ ಯಾದಗಿರಿಯ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಭಾಷಾವಾರು ವಿಷಯದಲ್ಲಿ ಹೆಚ್ಚು ಅಂಕ ಗಳಿಸಲು ಸಾಧ್ಯವಾಗುತ್ತಿಲ್ಲ. ಅದರಲ್ಲೂ ಗಣಿತ ಎಂದರೆ ಅಕ್ಷರಶಃ ಕಬ್ಬಿಣದ ಕಡಲೆ ಎನ್ನುವಂತಿದೆ. ಮಕ್ಕಳಲ್ಲಿನ ಈ ಅಂತರಂಗ ಸಮಸ್ಯೆ ಹಾಗೂ ಆತಂಕ ಅರಿತ ಶಿಕ್ಷಕ ವಿಶ್ವನಾಥ ಅವರು ಸ್ವಂತ ಖರ್ಚಿನಲ್ಲಿ ವಿಶಿಷ್ಟವಾದ ಗಣಿತ ಲ್ಯಾಬ್ ನಿರ್ಮಿಸಿದ್ದಾರೆ.

    ಕೋವಿಡ್ ಮೊದಲ ಅಲೆ ವೇಳೆ ಮಕ್ಕಳ ಆರೋಗ್ಯ ಗಮನದಲ್ಲಿಟ್ಟುಕೊಂಡ ಸರ್ಕಾರ ತಕ್ಷಣ ಶಾಲಾ-ಕಾಲೇಜುಗಳ ಬಾಗಿಲಿಗೆ ಬೀಗ ಹಾಕಿತ್ತು. ಆದರೆ ಸರ್ಕಾರಿ ಶಿಕ್ಷಕರಿಗೆ ಸಂಬಳ ಕೊಡುವುದನ್ನು ನಿಲ್ಲಿಸಲಿಲ್ಲ. ಪಾಠ ಮಾಡುವ ಕೈಗಳಿಗೆ ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದಿದ್ದಾಗ ವಿಶ್ವನಾಥ ತಲೆಯಲ್ಲಿ ಹೊಳೆದ ಐಡಿಯಾನೇ ತಾನು ಸೇವೆ ಸಲ್ಲಿಸುವ ಶಾಲೆ ವಿದ್ಯಾರ್ಥಿಗಳಿಗೆ ಗಣಿತ ವಿಷಯ ಸಲೀಸು ಎಂದು ಮನದಟ್ಟು ಮಾಡಿಕೊಡುವುದು.

    ಇದ್ಹೇಗೆ ಸಾಧ್ಯ ಎಂದು ನೂರೆಂಟು ವಿಚಾರಗಳು ಸುಳಿದಾಡಿದ ಸಂದರ್ಭದಲ್ಲಿ ಕಣ್ಣಿಗೆ ಬಿದ್ದದ್ದು ಮನೆಯಲ್ಲಿನ ರಟ್ಟಿನ (ಕಾಟನ್) ಡಬ್ಬಾಗಳು. ಆಗಲೇ ಅವರಿಗೆ ಕನ್ನಡದಲ್ಲಿನ ಪ್ರಖ್ಯಾತ ಗಾದೆ `ಕಸದಿಂದ ರಸ ತೆಗೆ’ ನೆನಪಾಗಿದ್ದು. ಸರಿ ಇನ್ನೇಕೆ ತಡ ಎಂದವರೆ ರಟ್ಟಿನ (ಕಾಟನ್) ಡಬ್ಬಿ, ದಿನಪತ್ರಿಕೆ, ಮುರಿದು ಬಿದ್ದಿದ್ದ ಪೈಪ್ ಹಾಗೂ ಕಾಪರೇಂಟರ್ ಶಾಪ್ನಲ್ಲಿ ಅನುಪಯುಕ್ತವಾದ ಕಟ್ಟಿಗೆಗಳು ಹೀಗೆ ಇಂಥವನ್ನೆಲ್ಲ ಸಂಗ್ರಹಿಸತೊಡಗಿದರು.

    ಗಣಿತ ಲ್ಯಾಬ್ ನಿರ್ಮಾಣಕ್ಕಾಗಿ ಮೊದಲು ಶಾಲೆ ಕೋಣೆಯೊಂದನ್ನು ಗುರುತಿಸಿ ಕಚ್ಚಾ ವಸ್ತುಗಳನ್ನೆಲ್ಲ ಅಲ್ಲಿ ಸಂಗ್ರಹಿಸಿದರು. ಮೊದಮೊದಲು ಇದನ್ನು ಗಮನಿಸಿದ ಸ್ಥಳೀಯರಿಗೆ ಈ ಮಾಸ್ತರ್ ಸಾಬ್ ಏನ್ ಮಾಡ್ಲಿಕತಾರ್ ರ್ರೀ ಲಾಕ್ಡೌನ್ ಟೇಮನಾಗ ಎಂಬ ಪ್ರಶ್ನೆ ಮೂಡಿದ್ದು ಸಹಜ. ಸರಿಸುಮಾರು ಒಂದು ತಿಂಗಳು ಲ್ಯಾಬ್ ನಿಮರ್ಾಣಕ್ಕೆ ಸ್ಕೆಚ್ ತಯಾರಿಸಿದ ವಿಶ್ವನಾಥ ಅವರಿಗೆ ಮೊದಲು ಸಾಕಷ್ಟು ವಿಷಯಾಧಾರಿತ ಸಣ್ಣಪುಟ್ಟ ಕಿರಿಕಿರಿಗಳು ಎದುರಾದವು. ಕಾರಣ ಮಕ್ಕಳಿಗೆ ವಿದ್ಯೆಯಲ್ಲಿ ಎಂದಿಗೂ ತಪ್ಪಾದ ಮಾಹಿತಿ ಕೊಡಬಾರದು. ಹೀಗಾಗಿ ಜಾಗರೂಕತೆಯಿಂದ ಲಾಬ್ ನಿರ್ಮಾಣಕ್ಕೆ ಅಣಿಯಾದ ಇವರಿಗೆ ಕಂಡ ಕನಸು ನನಸಾಗಲು ಹಿಡಿದ ಸಮಯ ಬರೋಬ್ಬರಿ ಒಂದು ವರ್ಷ.

    ಕರ್ತವ್ಯ ನಿರ್ವಹಣೆ ಜತೆ ಪಟ್ಟಣ ಪ್ರದೇಶಕ್ಕೆ ಬಂದು ಕೆಲ ಪಠ್ಯಗಳ ಝರಾಕ್ಸ್, ಕಲರ್ ಪ್ರಿಂಟ್ ತೆಗೆಸಿ ಬಣ್ಣಬಣ್ಣದ ಹಾಳೆಗಳು ಹೀಗೆ ಕೆಲ ವಸ್ತುಗಳ ಖರೀದಿಗೆ ತಮ್ಮ ಕೈಯಿಂದ 48 ಸಾವಿರ ರೂ. ಖರ್ಚು ಮಾಡಿಕೊಂಡ ವಿಶ್ವನಾಥ ಅವರು ಒಬ್ಬ ಅಂಗವಿಕಲ ಶಿಕ್ಷಕ ಎಂಬುದು ಗಮನಾರ್ಹ.

    ಹೀಗೆ ಹಿಡಿದ ಕೆಲಸ ಒಂದು ವರ್ಷದಲ್ಲಿ ಮುಗಿಸಿ ಮಂಗಳವಾರ ಜಿಲ್ಲೆಗೆ ಮಾದರಿ ಎನಿಸುವಂಥ ಗಣಿತ ಲ್ಯಾಬ್ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಲೋಕಾರ್ಪಣೆ ಮಾಡಿದ್ದಾರೆ. ಈ ಮಹತ್ಕಾರ್ಯವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಾಂತಗೌಡ ಪಾಟೀಲ್ ನೆರವೇರಿಸಿ ಶಿಕ್ಷಕನ ಸಾಧನೆಯನ್ನು ಮನಸಾರೆ ಕೊಂಡಾಡಿದ್ದಾರೆ.

    ಬೆಳಗ್ಗೆ ಶಾಲೆಗೆ ಹಾಜರಾಗಿ ಒಂದೇ ತಾಸಿನಲ್ಲಿ ಆ ಸಂಘ, ಈ ಸ್ಕೀಮ್, ಪುಢಾರಿ ಲೀಡರ್ಗಳ ಹಿಂದೆ ಅಲೆದಾಡುವ ಕೆಲ ಶಿಕ್ಷಕರು ನಮ್ಮಲ್ಲಿದ್ದಾರೆ. ಅಂಥವರ ಮಧ್ಯೆಯೂ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ನಿಸ್ವಾರ್ಥದಿಂದ ದುಡಿಯುವ ಪ್ರಜ್ಞ ಚೇತನರೂ ಸಿಗುತ್ತಾರೆ ಎಂಬುದಕ್ಕೆ ಗಣಿತ ಶಿಕ್ಷಕ ವಿಶ್ವನಾಥ ಅವರಿಗಿಂತ ಮತ್ತೊಂದು ಉದಾಹರಣೆ ಬೇಕೆ?

    ಏನೇನಿದೆ ಗಣಿತ ಲ್ಯಾಬ್ನಲ್ಲಿ ?
    ಸಗರ ಸಕರ್ಾರಿ ಪ್ರೌಢಶಾಲೆ ಗಣಿತ ಲ್ಯಾಬ್ನಲ್ಲಿ ಪ್ರಮೇಯಗಳು, ರೇಖಾ ಗಣಿತದ ಮಾದರಿ, ರೋಬಾಸ್ ಕಂಪಾಸ್ ಟೂಲ್ಸ್, ಸ್ಕೇಲ್ಗಳು, ತ್ರಿಭುಜದ ಮಾದರಿಗಳು, ಪ್ರಮೇಯಗಳಲ್ಲಿನ ವ್ಯಾಖ್ಯಾನಗಳು, ಗಣಿತ ವಿಷಯದಲ್ಲಿ ಪಾಂಡಿತ್ಯ ಸಾಧಿಸಿದ ಹಲವು ಸಾಧಕರ ಜೀವನ, ಚಾಣಕ್ಯ, ಆರ್ಯಭಟ್ಟರಂಥವರ ಜೀವನ ಚರಿತ್ರೆ ಒಳಗೊಂಡ ಸಂಕ್ಷಿಪ್ತ ಪರಿಚಯವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts