More

    ಶಾಲಾ ಕಟ್ಟಡಕ್ಕೆ ಆಗ್ರಹಿಸಿ ಪ್ರತಿಭಟನೆ

    ಕಕ್ಕೇರಿ, ಬೆಳಗಾವಿ: ಕನ್ನಡ ಉಳಿಸಿ, ಮಕ್ಕಳಿಗೆ ಶಿಕ್ಷಣ ಕೊಡಿಸಿ, ಸೂಕ್ತ ಕಟ್ಟಡ ಒದಗಿಸಿಕೊಡಿ ಎಂದು ಆಗ್ರಹಿಸಿದ ಲಿಂಗನಮಠ ಗ್ರಾಮಸ್ಥರು ಹಾಗೂ ಕನ್ನಡ ಶಾಲೆ ಉಳಿಸಿ ಅಭಿಯಾನದ ಸದಸ್ಯರು ಗುರುವಾರ ತಾಳಗುಪ್ಪ-ಬೆಳಗಾವಿ ರಸ್ತೆ ರೋಖೋ ಚಳವಳಿ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

    ಗ್ರಾಮಸ್ಥ ಮಹಾಂತೇಶ ಸಂಗೊಳ್ಳಿ ಮಾತನಾಡಿ, 5 ಸಾವಿರ ಜನಸಂಖ್ಯೆ ಹೊಂದಿರುವ ಲಿಂಗನಮಠ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಒಟ್ಟು 200 ವಿದ್ಯಾರ್ಥಿಗಳಿದ್ದು ಶಿಕ್ಷಣ ಕಲಿಯಲು 5 ಕೊಠಡಿಗಳಿವೆ. ಅದರಲ್ಲಿ 2 ಕೊಠಡಿ ಶಿಥಿಲಗೊಂಡಿದ್ದು, ಮಕ್ಕಳು ದಿನನಿತ್ಯ ಮರದ ಕೆಳಗೆ ಶಿಕ್ಷಣ ಕಲಿಯುವ ಪರಿಸ್ಥಿತಿ ಇದೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಕೊಠಡಿ ವ್ಯವಸ್ಥೆ ಮಾಡಬೇಕೆಂದರು.

    ರಾಜು ರಪಾಟಿ ಮಾತನಾಡಿ, ಕನ್ನಡ ಮತ್ತು ಉರ್ದು ಶಾಲೆಯ ತಲಾ ಎರಡು ಕೊಠಡಿ ಒಮ್ಮೆಲೆ ನೆಲಸಮ ಮಾಡಿ ಇದೀಗ ಉರ್ದು ಶಾಲೆಗೆ ಮಾತ್ರ ನೂತನ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಿರುವುದು ಅನ್ಯಾಯ. ಉರ್ದು ಶಾಲೆಯಲ್ಲಿ 30 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು 3 ಶಿಕ್ಷಕರಿದ್ದಾರೆ. ಆದರೆ ಕನ್ನಡದ ಸರ್ಕಾರಿ ಶಾಲೆಯಲ್ಲಿ ಕೊಠಡಿ ಜತೆ ಶಿಕ್ಷಕರ ಕೊರತೆ ಇರುವ ಬಗ್ಗೆ ಶಿಕ್ಷಣಾಧಿಕಾರಿ ರಾಜೇಶ್ವರಿ ಕುಡಚಿಗೆ ಮನವಿ ಸಲ್ಲಿಸಿದರು.

    ಖಾನಾಪುರ ತಾಲೂಕು ಶಿಕ್ಷಣಾಧಿಕಾರಿ ರಾಜೇಶ್ವರಿ ಕುಡಚಿ ಮನವಿ ಸ್ವೀಕರಿಸಿ ಮಾತನಾಡಿ, ಮನವಿಯನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಆನಂದ ಮಾಟೋಳ್ಳಿ, ಬಾಬು ಬಿಜಾಪುರ, ಬಸನಗೌಡ ಪಾಟೀಲ, ತವನಪ್ಪ ರಪಾಟಿ, ಚಂದ್ರಗೌಡ ಪಾಟೀಲ, ಧರೆಪ್ಪ ಕುಕಡೊಳ್ಳಿ, ಬಸವರಾಜ ಮುಗಳಿಹಾಳ, ಪಡದಯ್ಯ ಹಿರೇಮಠ ಹಾಗೂ ವಿವಿಧ ಸಂಘಟನೆ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts