More

    ಶಾರ್ವರಿ ಸ್ವಾಗತಕ್ಕೂ ಸೋಂಕು ಕಂಟಕ


    ಬಾಬುರಾವ ಯಡ್ರಾಮಿ ಕಲಬುರಗಿ
    ಭಾರತೀಯರ ಪಾಲಿಗೆ ಹೊಸ ವರ್ಷ ಯುಗಾದಿ ಹಬ್ಬದ ಸಂಭ್ರಮಕ್ಕೂ ಕರೊನಾ ಕೊಳ್ಳಿ ಇಟ್ಟಿದೆ. ವಿಕಾರಿನಾಮ ಸಂವತ್ಸರ ಕೊನೆಯ ಹೊತ್ತಿನಲ್ಲಿ ಒಕ್ಕರಿಸಿರುವ ಚೀನಿ ವೈರಸ್ `ಶಾರ್ವರಿ’ಯನ್ನು ಸಡಗರದಿಂದ ಸ್ವಾಗತಿಸಲು ಹಿಂದೆ ಮುಂದೆ ನೋಡುವಂಥ ಸ್ಥಿತಿ ಸೃಷ್ಟಿಯಾಗಿದೆ.
    ತನ್ನ ಹೆಸರಿನಲ್ಲೇ ವಿಕಾರ ಹೊತ್ತು ಬಂದಿದ್ದ ನಿರ್ಗಮಿತ ಸಂವತ್ಸರ ಭಾರತವಷ್ಟೇ ಅಲ್ಲ, ಇಡಿ ವಿಶ್ವವನ್ನು ಕರೊನಾದಿಂದ ತಲ್ಲಣಿಸುವಂತೆ ಮಾಡಿದೆ. ಯುಗಾದಿ ನಾಡಿನ ದೊಡ್ಡ ಹಬ್ಬ. ಆದರೆ ಇದರ ಸಂಭ್ರಮವನ್ನು ಕರೊನಾ ಕಸಿದುಕೊಂಡಿದೆ. ಹೊಸ ಬಟ್ಟೆ ತೊಡುವ ಭಾಗ್ಯವೂ ಮಕ್ಕಳಿಗೆ ಸಿಗದಂತಾಗಿದೆ.
    ಕರೊನಾವನ್ನು ಕಟ್ಟಿ ಹಾಕಲು ರಾಜ್ಯ ಸರ್ಕಾರ ಕರ್ನಾಟಕ ಲಾಕ್ಡೌನ್ ಘೋಷಣೆ ಮಾಡಿದ್ದರಿಂದ ಕಲಬುರಗಿ ನಗರ ಸೇರಿ ಜಿಲ್ಲಾದ್ಯಂತ ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲವೂ ಬಂದ್ ಆಗಿವೆ. ಹೊಸ ಬಟ್ಟೆ, ಬೇವು ತಯಾರಿಸುವ ಸಲಕರಣೆಗಳು ಸಿಗದೆ ಹಬ್ಬದ ಸಂಭ್ರಮ ಈ ಸಲ ಕೈತಪ್ಪಿದೆ.
    ಯುಗಾದಿ ಸಿದ್ಧತೆ ಕುರಿತು ಹಲವರನ್ನು ವಿಜಯವಾಣಿ ಮಾತನಾಡಿಸಿದಾಗ, ಏನ್ ಮಾಡೋದ್ರಿ? ಕರೊನಾ ಬಂದು ನಮ್ಮನ್ನು ಮನೆಯಲ್ಲೇ ಕಟ್ಟಿ ಹಾಕಿಬಿಟ್ಟಿದೆ. ಇಂಥದರಲ್ಲಿ ಸಂಭ್ರಮ ಎಲ್ಲಿಂದ? ಮೆಡಿಕಲ್ ಏಮರ್ಜೆನ್ಸಿ ಇರುವುದರಿಂದ ಮನೆಯಲ್ಲೇ ಬೇವು-ಬೆಲ್ಲ ತಿಂದು, ಹಂಚಿ ಸರಳವಾಗಿ ಆಚರಿಸುತ್ತೇವೆ ಎಂದು ಹೇಳಿಕೊಂಡರು.
    ಕರೊನಾ ಸೋಂಕಿತರು ಮತ್ತು ಶಂಕಿತರು ಸೇರಿ ನಾಡಿನ ಜನರು ಸಮಸ್ಯೆ ಎದುರಿಸುತ್ತಿರುವಾಗ ನಾವು ಖುಷಿಪಡುವುದು ಸರಿಯಲ್ಲ. ಹೀಗಾಗಿ ಸರಳವಾಗಿ ಆಚರಿಸಿದ್ದಷ್ಟು ಚೆನ್ನಾಗಿರುತ್ತದೆ ಎಂದು ವೀರಭದ್ರೇಶ್ವರ ಕಾಲನಿಯ ರೇವಣಸಿಪ್ಪ ಗೌಡರ ಮತ್ತು ಮಹಾಂತೇಶ ಪುರಾಣಿಕ ಹೇಳುತ್ತಾರೆ.
    ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಒಂದು ವರ್ಷ ಹಬ್ಬವನ್ನು ಭರ್ಜರಿಯಾಗಿ ಆಚರಿಸದಿದ್ದರೆ ಏನೂ ಫರಕ್ ಬೀಳಲ್ಲ. ಆದರೆ ಹಬ್ಬ ಆಚರಿಸಲು ಹೂವು-ಹಣ್ಣು, ಕಬ್ಬು ಮೊದಲಾದವನ್ನು ಖರೀದಿಸಲು ಮಾರುಕಟ್ಟೆಗೆ ಬಂದು ಜನರು ಗುಂಪಾಗುವುದರಿಂದ ಜನಸಂದಣಿ ಆಗುತ್ತದೆ. ದುರ್ದೈವಕ್ಕೆ ಅವರಲ್ಲಿ ಯಾರೊಬ್ಬರಿಗೆ ಕರೊನಾ ಸೋಂಕು ಇದ್ದರೆ, ಅದು ಅಲ್ಲಿಗೆ ಬಂದವರಿಗೂ ಅಂಟಿಕೊಳ್ಳುತ್ತದೆ. ಹೀಗಾಗಿ ಮುಂಜಾಗ್ರತೆ ಮುಖ್ಯ. ಹೊಸ ವರ್ಷ ಬೇವು-ಬೆಲ್ಲದೊಂದಿಗೆ ಬಂದರೂ ಹೆಚ್ಚು ಬೆಲ್ಲದ ಸಿಹಿಯನ್ನೇ ಪಸರಿಸಲಿ ಎಂಬ ಆಶಯ ಜನರಲ್ಲಿದೆ.


    ಹೊಸ ವರ್ಷ ಯುಗಾದಿ ಹಬ್ಬವನ್ನು ಸರಳವಾಗಿ ಆಚರಿಸಿ. ಅಬ್ಬರ ಬೇಡ. ಅಲ್ಲದೆ ಯುಗಾದಿ ಹಬ್ಬದಂದು ಶರಣಬಸವೇಶ್ವರ ದೇವಾಲಯಕ್ಕೆ ಲಕ್ಷಾಂತರ ಭಕ್ತರು ಬರುವ ವಾಡಿಕೆ ಇದೆ. ಈ ಸಲ ಕರೊನಾದಿಂದಾಗಿ ಮುಂಜಾಗ್ರತಾ ಕ್ರಮವಾಗಿ ಭಕ್ತರು ಶರಣರ ಸನ್ನಿಧಿಗೆ ಬರಬೇಡಿ. ಬಂದು ಜಮಾಗೊಳ್ಳಬೇಡಿ. ನಿಮ್ಮ ಮನೆಯಿಂದಲೇ ಪ್ರಾಥರ್ಿಸಿರಿ. ಶರಣಬಸವೇಶ್ವರರು ಎಲ್ಲರಿಗೂ ಒಳ್ಳೆಯದು ಮಾಡುತ್ತಾನೆ.
    | ಶ್ರೀ ಡಾ.ಶರಣಬಸವಪ್ಪ ಅಪ್ಪ
    ಮಹಾದಾಸೋಹಿ ಶರಣಬಸವೇಶ್ವರ ಸಂಸ್ಥಾನ ಪೀಠಾಧಿಪತಿ ಹಾಗೂ ಎಸ್ಬಿಯು ಕುಲಾಧಿಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts