More

    ವ್ಯಾಪಾರಸ್ಥರಿಂದ ಸುಲಿಗೆ

    ಕಾರವಾರ: ಕರೊನಾ ಲಾಕ್​ಡೌನ್​ನಲ್ಲಿ ಮನೆಗಳಿಗೆ ಬರುತ್ತಿರುವ ವ್ಯಾಪಾರಿಗಳು ಜನರ ಸುಲಿಗೆ ಮಾಡುತ್ತಿದ್ದಾರೆ ಎಂಬ ಆರೋಪ ಎಲ್ಲೆಡೆಯಿಂದ ಕೇಳಿ ಬಂದಿದೆ. ಕರೊನಾ ಲಾಕ್​ಡೌನ್​ನಲ್ಲಿ ಜನರಿಗೆ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಬಾರದು ಎಂಬ ಕಾರಣಕ್ಕೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮನೆಗಳಿಗೆ ಸಾಮಗ್ರಿ ಪೂರೈಕೆ ವ್ಯವಸ್ಥೆ ಮಾಡಲಾಗಿದೆ.

    ರಾಜ್ಯದಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತ ಉತ್ತಮ ಹೆಜ್ಜೆ ಇಟ್ಟು ಮಾದರಿ ಕಾರ್ಯ ಕೈಗೊಂಡಿದೆ. ನಗರ ಪ್ರದೇಶದಲ್ಲಿ ಆಯಾ ನಗರ ಸ್ಥಳೀಯ ಸಂಸ್ಥೆಗಳಿಂದ, ಗ್ರಾಮೀಣ ಭಾಗದಲ್ಲಿ ಆಯಾ ಗ್ರಾಪಂಗಳಿಂದ ತರಕಾರಿ, ಹಣ್ಣು, ದಿನಸಿ ವಸ್ತುಗಳ ಮಾರಾಟಕ್ಕೆ ಪಾಸ್ ವಿತರಿಸಲಾಗಿದೆ. ವ್ಯಾಪಾರಸ್ಥರು ಇದನ್ನು ಬಂಡವಾಳ ಮಾಡಿಕೊಂಡು ಜನರನ್ನು ದೋಚುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.ಆಯಾ ದಿನದ ಬೆಲೆಯನ್ನೂ ಆಡಳಿತವೇ ನಿಗದಿ ಮಾಡಿ ಪ್ರಕಟ ಮಾಡುತ್ತಿದೆ. ಆದರೆ, ಆ ಬೆಲೆಗೆ ಎಲ್ಲೂ ಮಾರಾಟವಾಗುತ್ತಿಲ್ಲ. ದುಪ್ಪಟ್ಟು ಬೆಲೆ ಪಡೆಯಲಾಗುತ್ತಿದೆ. ಉದಾಹರಣೆಗೆ ಕಾರವಾರದಲ್ಲಿ ಒಂದು ಕೆಜಿ ಬೆಂಡೆಕಾಯಿ ಬೆಲೆ 30 ರೂ. ಎಂದು ಬುಧವಾರ ಪ್ರಕಟಿಸಲಾಗಿದೆ. ಆದರೆ, ವ್ಯಾಪಾರಸ್ತರು ಕಾಲು ಕೆಜಿ ಬೆಂಡೆಕಾಯಿಯನ್ನು 20 ರೂ.ಗೆ ನೀಡುತ್ತಿದ್ದಾರೆ. ಅಂಕೋಲಾ ತಾಲೂಕಿನ ಬ್ರಹ್ಮೂರು ಭಾಗದಲ್ಲಿ 1200 ರೂ. ಮುಖ ಬೆಲೆಯ 50 ಕೆಜಿ ಜಾನುವಾರು ಹಿಂಡಿ ಚೀಲವನ್ನು 1500 ರೂ.ಗೆ

    ಮಾರಾಟ ಮಾಡಲಾಗುತ್ತಿದೆ. ಈ ಕುರಿತು ಜನ ಪ್ರಶ್ನಿಸಿದರೆ ‘ಇನ್ನು ಅಗತ್ಯ ವಸ್ತು ಸಿಗೋದೇ ಕಷ್ಟವಿದೆ. ಬೇಕಾದರೆ ತಗೊಳ್ಳಿ ಇಲ್ಲದಿದ್ದರೆ ಇಲ್ಲ ’ ಎಂದು ಉಡಾಫೆಯ ಮಾತುಗಳನ್ನು ವ್ಯಾಪಾರಸ್ಥರು ಆಡುತ್ತಿದ್ದಾರೆ.

    ದೇಶಾದ್ಯಂತ ಲಾಕ್​ಡೌನ್ ಇರುವುದರಿಂದ ಮುಂದೆ ಅಗತ್ಯ ವಸ್ತುಗಳ ಸಿಗುತ್ತವೋ ಇಲ್ಲವೋ ಎಂಬ ಆತಂಕದಿಂದ ಜನ ಹೇಳಿದ ಬೆಲೆ ಕೊಟ್ಟು ಕೊಳ್ಳುತ್ತಿದ್ದಾರೆ. ‘ಜಿಲ್ಲೆಗೆ ಧಾರವಾಡ ಜಿಲ್ಲೆಯಿಂದ ಧಾನ್ಯ, ತರಕಾರಿ ಪೂರೈಕೆಯಾಗುತ್ತದೆ. ಅಲ್ಲೇ ಬೆಲೆ ಹೆಚ್ಚಿದೆ. ಬೇಕಾದ ಮಾಲು ಸಿಗುತ್ತಿಲ್ಲ. ಆಡಳಿತ ನೀಡುವ ಬೆಲೆಯಲ್ಲಿ ಮಾರಾಟ ಮಾಡಿದರೆ, ನಮಗೆ ನಷ್ಟವಾಗುತ್ತದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ವ್ಯಾಪಾರಸ್ಥರೊಬ್ಬರು.

    ಸಂಕಷ್ಟದ ಸಂದರ್ಭದಲ್ಲಿ ಮಾನವೀಯತೆಯಿಂದ ಆಡಳಿತ ಮಾಡಿದ ವ್ಯವಸ್ಥೆಯನ್ನು ವ್ಯಾಪಾರಸ್ಥರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಜನರನ್ನು ವಂಚಿಸುವ ಕಾರ್ಯ ಮಾಡುತ್ತಿದ್ದಾರೆ. ಕೇಳಲು ಹೋದರೆ, ಬೇಕಾದರೆ ತಗೊಳ್ಳಿ ಎಂಬ ಮಾತನಾಡುತ್ತಾರೆ.
    | ನಾರಾಯಣ ಹೆಗಡೆ ಗ್ರಾಮಸ್ಥ

    ನಗರ ಭಾಗದಲ್ಲಿ ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮೀಣ ಭಾಗದಲ್ಲಿ ಗ್ರಾಪಂಗಳು ಅಗತ್ಯ ವಸ್ತು ಪೂರೈಕೆದಾರರಿಗೆ ಪಾಸ್ ನೀಡಿವೆ. ಬೆಲೆ ಹೆಚ್ಚಿಗೆ ಪಡೆದ ಬಗ್ಗೆ ಅಧಿಕೃತ ದೂರು ನೀಡಿದಲ್ಲಿ ಪರವಾನಗಿ ರದ್ದು ಮಾಡಿ ಕ್ರಮ ವಹಿಸಲು ಸೂಚಿಸಲಾಗುವುದು.
    | ಡಾ.ಹರೀಶ ಕುಮಾರ ಕೆ. ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts