More

    ವೈರ್‌ಲೆಸ್ ಪೊಲೀಸರಿಗಿಲ್ಲ ಬಡ್ತಿ ಭಾಗ್ಯ, 371 ಜೆ ಅನ್ಯಾಯ

    ರಮೇಶ ಮೇಳಕುಂದಾ ಕಲಬುರಗಿ
    ಕಲ್ಯಾಣ ಕರ್ನಾಟಕ ಜನರಿಗೆ ನ್ಯಾಯ ಒದಗಿಸಲು ೩೭೧(ಜೆ) ವಿಧಿ ಅನುಷ್ಠಾನಗೊಂಡಿದ್ದರೂ ಅನ್ಯಾಯ ಮುಂದುವರಿದಿದ್ದು, ನಿಯಮಗಳಲ್ಲಿನ ದೋಷದಿಂದಾಗಿ ವೈರ್‌ಲೆಸ್ ವಿಭಾಗದ ಎಎಸ್‌ಐಗಳು ಬಡ್ತಿಯಿಂದ ವಂಚಿತರಾಗುವAತಾಗಿದೆ.
    ೩೭೧(ಜೆ)ಯಲ್ಲಿನ ಲೋಪಗಳಿಂದ ಈ ಭಾಗದ ಪೇದೆಗಳಿಗಿಂತ ೧೦ ವರ್ಷ ಕಿರಿಯರಾದ ಬೇರೆ ವಿಭಾಗದವರು ಪದೋನ್ನತಿ ಹೊಂದಿದ್ದಾರೆ. ಆದರೆ ಇಲ್ಲಿನ ಮುಖ್ಯ ಪೇದೆಗಳಿಗೆ ಸೇವಾ ಜ್ಯೇಷ್ಠತೆ ಮಾತ್ರ ನೀಡಿದ್ದು, ಬಡ್ತಿ ಕೊಡಲು ಆಗುತ್ತಿಲ್ಲ. ಈ ಬಗ್ಗೆ ಪರಿಶೀಲಿಸಿ ಸ್ಪಂದಿಸಬೇಕಿದ್ದ ಅಧಿಕಾರಿಗಳು, ವಿಶೇಷವಾಗಿ ಜನಪ್ರತಿನಿಧಿಗಳು ಬಾಯಿಗೆ ಬೀಗ ಹಾಕಿಕೊಂಡು ಕುಳಿತಿರುವುದೇ ಸಮಸ್ಯೆಗೆ ಕಾರಣವಾಗಿದೆ.
    ಪೊಲೀಸ್ ಇಲಾಖೆ ನಿಸ್ತಂತು ವಿಭಾಗ (ವೈರ್‌ಲೆಸ್ ಪೊಲೀಸ್) ಪ್ರತಿ ಜಿಲ್ಲಾ ಕೇಂದ್ರದಲ್ಲಿ ಕಚೇರಿ ಹೊಂದಿದ್ದು, ೩೦-೪೦ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಎಲ್ಲ ಸಿಬ್ಬಂದಿ ವೇತನ ಬಡ್ತಿ, ಮುಂಬಡ್ತಿ, ವರ್ಗಾವಣೆ ವಿಷಯವನ್ನು ಬೆಂಗಳೂರಿನ ಎಸ್‌ಪಿ ವೈರ್‌ಲೆಸ್ ಕಚೇರಿಯಿಂದಲೇ ನಿರ್ವಹಿಸಲಾಗುತ್ತದೆ. ಆದರೆ ೩೭೧(ಜೆ) ವಿಧಿಯಡಿ ಮುಂಬಡ್ತಿ ನಿಯಮ ಪಾಲಿಸಲು ಆಸಕ್ತಿ ತೋರುತ್ತಿಲ್ಲ.
    ಈ ಬಗ್ಗೆ ಬೆಂಗಳೂರಿನ ಕಚೇರಿಗೆ ಸಿಬ್ಬಂದಿ ಅರ್ಜಿ ಸಲ್ಲಿಸಿದರೂ ಹಿಂಬರಹ ನೀಡಲು ಸಹ ಹಿಂಜರಿಯುತ್ತಿದ್ದು, ನಿಸ್ತಂತು ಕಚೇರಿಗಳಲ್ಲಿ ಅರ್ಜಿಗೆ ಮರ್ಯಾದೆಯೇ ಇಲ್ಲದಂತಾಗಿದೆ. ಮಹಾನಿರ್ದೇಶಕರ (ಡಿಜಿ) ಕಚೇರಿಯಿಂದ ಲೋಪ ಸರಿಪಡಿಸುವಂತೆ ಹೊರಡಿಸಿದ್ದ ಆದೇಶ ಭಾಗಶಃ ಪಾಲನೆ ಆಗುತ್ತಿದ್ದು, ಮೂಲ ಸಮಸ್ಯೆ ಯಥಾಪ್ರಕಾರ ಮುಂದುವರಿದಿದೆ.
    ಏನಾಗಿದೆ ಸಮಸ್ಯೆ?: ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಅನುಮೋದಿತ ಎಎಸ್‌ಐ ರ‍್ಯಾಂಕಿAಗ್ ವೈರ್‌ಲೆಸ್ ಹುದ್ದೆ ೪೭ ಇದ್ದವು. ಈ ಪೈಕಿ ೩೭೧(ಜೆ) ಪ್ರಕಾರ ಶೇ.೮೦ ಅಂದರೆ ೩೮ ಹುದ್ದೆ ಸ್ಥಳೀಯ ವೃಂದದಲ್ಲಿ ಬರುತ್ತಿದ್ದವು. ೨೦೧೩-೧೪ರಲ್ಲಿ ೩೭೧(ಜೆ) ಅನುಷ್ಠಾನ ವೇಳೆ ರಾಜ್ಯಾದ್ಯಂತ ಕೆಲಸ ಮಾಡುತ್ತಿರುವವರಿಗೆ ಸ್ಥಳೀಯ ಅಥವಾ ಮಿಕ್ಕುಳಿದ ವೃಂದಕ್ಕೆ ಸೇರುವ ಬಗ್ಗೆ ಆಯ್ಕೆಗೆ ಅವಕಾಶ ನೀಡಲಾಗಿತ್ತು. ಈ ವೇಳೆ ಶೇ.೮೦ ಅಂದ್ರೆ ೩೮ ಹುದ್ದೆ ಮಾತ್ರ ಸ್ಥಳೀಯ ವೃಂದದಲ್ಲಿ ಪರಿಗಣಿಸಬೇಕಿತ್ತು. ಆದರೆ ಹಿರಿಯ ಅಧಿಕಾರಿಗಳ ಎಡವಟ್ಟಿನಿಂದ ಸ್ಥಳೀಯ ವೃಂದಕ್ಕೆ ಬರೆದುಕೊಟ್ಟವರಿಗೆಲ್ಲ ೫೬ (ಶೇ.೧೦೦ಕ್ಕಿಂತ ಹೆಚ್ಚು) ಜನರನ್ನು ಪರಿಗಣಿಸಿದ್ದು, ಬಡ್ತಿ ನೀಡಲು ಅವಕಾಶವೇ ಇಲ್ಲದಂತಾಗಿದೆ. ಆಯ್ಕೆಗೆ ಅವಕಾಶ ಕೇಳುವಾಗ ಸ್ಪಷ್ಟತೆ ನೀಡಬೇಕಿತ್ತು. ತರಾತುರಿಯಲ್ಲಿ ನಿಯಮಬಾಹಿರವಾಗಿ ಎಲ್ಲರನ್ನು ಸೇರಿಸಿದ್ದು ಸಮಸ್ಯೆಗೆ ಕಾರಣವಾಗಿದೆ.

    ಲಭ್ಯತೆಗಿಂತ ಹೆಚ್ಚು ಪರಿಗಣಿಸಿದ್ದೆ ಪ್ರಾಬ್ಲಮ್
    ೨೦೧೪ರಲ್ಲಿ ಆಗಿರುವ ಎಡವಟ್ಟು ಸರಿಪಡಿಸುವುದು ಅಧಿಕಾರಿ ಮತ್ತು ಜನಪ್ರತಿನಿಧಿಗಳ ಕೈಯಲ್ಲಿದ್ದು, ಸ್ಥಳೀಯ ವೃಂದದ ಲಭ್ಯತೆಗಿಂತ ಹೆಚ್ಚಿನವರನ್ನು ಪರಿಗಣಿಸಿರುವುದನ್ನು ಕೈಬಿಟ್ಟು ಅವರನ್ನು ಮಿಕ್ಕುಳಿದ ವೃಂದಕ್ಕೆ ಕಳುಹಿಸಬೇಕು. ಆಗ ಸ್ಥಳೀಯ ವೃಂದವರಿಗೆ ಅವಕಾಶ ದೊರೆತು ಬಡ್ತಿ ನೀಡಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಇನ್ನೂ ಕನಿಷ್ಠ ೧೦ ವರ್ಷ ಬಡ್ತಿ ಇಲ್ಲದೆ ಜ್ಯೇಷ್ಠತೆಯಲ್ಲೇ ದಿನದೂಡಬೇಕಿದೆ. ೩೭೧(ಜೆ) ಪರಾಮರ್ಶೆ ಸಮಿತಿಯೂ ಲೋಪದೋಷದ ಬಗ್ಗೆ ಒಂದು ಪತ್ರ ಬರೆದು ಪೊಲೀಸ್ ಇಲಾಖೆಗೆ ಸೂಚನೆ ನೀಡಿದರೆ ಸಮಸ್ಯೆಗೆ ಪರಿಹಾರ ದೊರೆಯುತ್ತದೆ ಎಂಬುದು ನೊಂದವರ ಅಳಲು.


    ನುಣುಚಿಕೊಳ್ಳುತ್ತಿರುವ ಹಿರಿಯ ಅಧಿಕಾರಿಗಳು?
    ವೈರ್‌ಲೆಸ್ ಯುನಿಟ್ ಸಿಬ್ಬಂದಿ ಬಡ್ತಿ, ವೇತನ, ವರ್ಗಾವಣೆ ಸೇರಿ ವಿವಿಧ ಬೇಡಿಕೆಗಳಿಗೆ ಸ್ಪಂದಿಸಬೇಕಾದ ಹಿರಿಯ ಅಧಿಕಾರಿಗಳು ಐಪಿಎಸ್ ಕೆಡರ್‌ನವರು. ಆರು ತಿಂಗಳು, ವರ್ಷದಲ್ಲಿ ವರ್ಗಾವಣೆ ಆಗುವ ನಮಗೇಕೆ ಬೇಕು ಇದರ ಉಸಾಬರಿ ಎಂದು ನುಣುಚಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಎಲ್ಲ ಸಮಸ್ಯೆ ತಿಳಿದಿದ್ದರೂ ಕೋರ್ಟ್ಗೆ ಅಲೆದಾಡುವುದೇಕೆ ಎಂದು ದಿನದೂಡುತ್ತಿದ್ದಾರೆ ಎನ್ನಲಾಗಿದೆ. ಇದರಲ್ಲಿ ನಿಯಮಗಳ ಸಮಸ್ಯೆ ಇದ್ದು, ನಾವಾಗಿಯೇ ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಸರ್ಕಾರದಿಂದ ಆದೇಶ ಮಾಡಿಸಿ ತಿದ್ದುಪಡಿ ಮಾಡಬೇಕು. ಆಗ ಮಾತ್ರ ಸಮಸ್ಯೆಗೆ ಪರಿಹಾರ ಸಿಗಲಿದೆ ಎನ್ನುತ್ತಾರೆ ಹಿರಿಯ ಅಧಿಕಾರಿಗಳು.

    ೩೭೧(ಜೆ)ಯಿಂದ ನಮಗೆ ಅನುಕೂಲ ಆಗುತ್ತದೆ ಎಂದು ಸ್ಥಳೀಯ ವೃಂದ ಆಯ್ಕೆ ಮಾಡಿಕೊಂಡಿದ್ದೇವೆ. ಇದೀಗ ಅದೇ ನಮಗೆ ಮಾರಕವಾಗಿದ್ದು, ಬಡ್ತಿ ದೊರೆಯುತ್ತಿಲ್ಲ. ಹಿರಿಯ ಅಧಿಕಾರಿಗಳು ಮನಸ್ಸು ಮಾಡಿ ನಿಯಮದಲ್ಲಿ ಅಲ್ಪ ಬದಲಾವಣೆ ಮಾಡಿದರೆ ಬಡ್ತಿ ಸಿಗುತ್ತದೆ. ಆದರೆ ನಮಗೇಕೆ ಉಸಾಬರಿ ಎನ್ನುವಂತೆ ವರ್ತಿಸುತ್ತಿದ್ದಾರೆ. ನಮಗಿಂತ ೧೦ ವರ್ಷ ಕಿರಿಯರು ಬೇರೆ ಕಡೆ ಬಡ್ತಿ ಹೊಂದಿದ್ದಾರೆ. ನಾವಿನ್ನು ಅಲ್ಲೇ ಉಳಿದಿದ್ದೇವೆ.
    | ಹೆಸರು ಹೇಳಲು ಇಚ್ಛಿಸದ ವೈರ್‌ಲೆಸ್ ಪೊಲೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts