More

    ವೈದ್ಯರ ಮೇಲೆ ಹಲ್ಲೆಗೈದರೆ ಹುಷಾರ್!

    ರಾಣೆಬೆನ್ನೂರ: ಸರ್ಕಾರಿ ಆಸ್ಪತ್ರೆಯಲ್ಲಿ ಕರೊನಾ ಸೋಂಕಿತರು ಚಿಕಿತ್ಸೆಗೆ ಸ್ಪಂದಿಸದಿದ್ದರೆ, ವೈದ್ಯರೊಂದಿಗೆ ಅನುಚಿತವಾಗಿ ವರ್ತಿಸಿದರೆ ಅಥವಾ ಅವರ ಕುಟುಂಬಸ್ಥರು ವಿವಿಧ ಕಾರಣದಿಂದ ವೈದ್ಯರ ಮೇಲೆ ಹಲ್ಲೆಗೆ ಮುಂದಾದರೆ ಕೇಸ್ ಬೀಳುತ್ತದೆ ಹುಷಾರ್! ಅಂಥ ಘಟನೆ ಇನ್ಮುಂದೆ ನಡೆದರೆ ವೈದ್ಯರು, ವೈದ್ಯಕೀಯ ಸಿಬ್ಬಂದಿ ನೆರವಿಗೆ ತಕ್ಷಣ ಕೋವಿಡ್ ತುರ್ತು ಸ್ಪಂದನಾ ಪೊಲೀಸ್ ಪಡೆ ಬರಲಿದೆ.

    ಕೋವಿಡ್ ಆಸ್ಪತ್ರೆ, ಕೋವಿಡ್ ಕಾಳಜಿ ಕೇಂದ್ರ (ಕೋವಿಡ್ ಕೇರ್ ಸೆಂಟರ್)ದಲ್ಲಿ ಸೋಂಕಿತರು ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿಯೊಂದಿಗೆ ವಿನಾಕಾರಣ ಜಗಳ ತೆಗೆದು ಅವರ ಮೇಲೆ ಹಲ್ಲೆ ನಡೆಸುತ್ತಿರುವ ಪ್ರಕರಣ ರಾಜ್ಯದಲ್ಲಿ ಹೆಚ್ಚುತ್ತಿವೆ. ಅಂಥ ಪ್ರಕರಣ ತಡೆಗಟ್ಟಲು ಪೊಲೀಸ್ ಇಲಾಖೆ ಕೋವಿಡ್ ತುರ್ತು ಸ್ಪಂದನಾ ಪೊಲೀಸ್ ಪಡೆ ರಚಿಸಿದೆ. ಈ ತಂಡದಲ್ಲಿ ಜಿಲ್ಲಾ ಮಟ್ಟದ ನುರಿತ, ಕೋವಿಡ್ ಕುರಿತು ತರಬೇತಿ ಪಡೆದ 12 ಸದಸ್ಯರಿದ್ದಾರೆ. ಇವರು 24 ತಾಸು ಸೇವೆ ಸಲ್ಲಿಸಲಿದ್ದಾರೆ. ಜಿಲ್ಲೆಯ ಯಾವುದೇ ಕೋವಿಡ್ ಕಾಳಜಿ ಕೇಂದ್ರ, ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರು ಚಿಕಿತ್ಸೆಗೆ ಸ್ಪಂದಿಸದೆ ಹಾಗೂ ಅನುಚಿತವಾಗಿ ನಡೆದುಕೊಂಡರೆ ಈ ಬಗ್ಗೆ ವೈದ್ಯರು, ಸಿಬ್ಬಂದಿ ಕೋವಿಡ್ ತುರ್ತು ಸ್ಪಂದನಾ ಪಡೆ ಸಹಾಯವಾಣಿ ಮೊ.ನಂ. 94808 04500ಗೆ ಕರೆ ಮಾಡಿ ಮಾಹಿತಿ ನೀಡಿದರೆ ಕೂಡಲೆ ಪೊಲೀಸರು ಸ್ಥಳಕ್ಕಾಗಮಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ.

    ತಂಡದ ಸದಸ್ಯರಿಗೆ ಸೌಲಭ್ಯ

    ಕೋವಿಡ್ ತುರ್ತು ಸ್ಪಂದನಾ ಪೊಲೀಸ್ ಪಡೆಯ ಸಿಬ್ಬಂದಿಗೆ ಈಗಾಗಲೇ ಎರಡು ಡೋಸ್ ಕೋವಿಡ್ ಲಸಿಕೆ ಹಾಕಲಾಗಿದೆ. ಎಲ್ಲರಿಗೂ ಪೊಲೀಸ್ ಎಂಬ ಹೆಸರು ನಮೂದಿಸಿದ ಪಿಪಿಇ ಕಿಟ್ ನೀಡಲಾಗಿದೆ. ಇದರಿಂದ ತಂಡದ ಸದಸ್ಯರು ನೇರವಾಗಿ ಕೋವಿಡ್ ಆಸ್ಪತ್ರೆ ಒಳಗೆ ನುಗ್ಗಿ ವೈದ್ಯರಿಗೆ ಹಾಗೂ ವೈದ್ಯಕೀಯ ಸಿಬ್ಬಂದಿಗೆ ತೊಂದರೆ ಕೊಡುವವರ ವಿರುದ್ಧ ಕ್ರಮ ಜರುಗಿಸಲಿದ್ದಾರೆ.

    ಎಸ್ಪಿ ಮಾರ್ಗದರ್ಶನದಲ್ಲಿ ಕೋವಿಡ್ ತುರ್ತು ಸ್ಪಂದನಾ ಪೊಲೀಸ್ ಪಡೆ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರು, ಸಿಬ್ಬಂದಿಗೆ ಮಾಹಿತಿ ನೀಡಿದೆ. ವೈದ್ಯರ ಮೇಲಿನ ಹಲ್ಲೆಯಂಥ ಪ್ರಕರಣ ತಡೆಯುವ ನಿಟ್ಟಿನಲ್ಲಿ ಈ ಪಡೆಯು ಕಾರ್ಯ ನಿರ್ವಹಿಸಲಿದೆ. ಕೋವಿಡ್ ರೋಗಿಗಳಿಂದ ತೊಂದರೆಯಾದರೆ ಕೂಡಲೆ ಕೋವಿಡ್ ತುರ್ತು ಸ್ಪಂದನಾ ಪೊಲೀಸ್ ಪಡೆಯ ಮೊ.ನಂ. 94808 04500ಗೆ ಕರೆ ಮಾಡಬಹುದು.

    | ಟಿ.ವಿ. ಸುರೇಶ ಡಿವೈಎಸ್ಪಿ, ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts