More

    ವೀಕೆಂಡ್ ಕರ್ಫ್ಯೂಗೆ ವ್ಯಾಪಕ ಸ್ಪಂದನೆ

    ಹುಬ್ಬಳ್ಳಿ: ಕರೊನಾ ಸರಪಳಿಯನ್ನು ತುಂಡರಿಸುವ ನಿಟ್ಟಿನಲ್ಲಿ ಸರ್ಕಾರ ಘೊಷಿಸಿರುವ ವಾರಾಂತ್ಯದ ಕರ್ಫ್ಯೂ ಆದೇಶಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿ, ವಿದ್ಯಾನಗರಿ ಧಾರವಾಡದಲ್ಲಿ ಭಾರಿ ಸ್ಪಂದನೆ ವ್ಯಕ್ತವಾಯಿತು.

    ಶನಿವಾರ ಬೆಳಗ್ಗೆ 10 ಗಂಟೆಯವರೆಗೆ ಮಾತ್ರ ಹಾಲು, ಹಣ್ಣು, ತರಕಾರಿ, ದಿನಸಿ ಸಾಮಗ್ರಿ ಖರೀದಿಗೆ ಅವಕಾಶ; ನಂತರ ಯಾರೂ ಮನೆ ಹೊರಗೆ ಬರಬಾರದು ಎಂದು ಶುಕ್ರವಾರವೇ ಸಾರಿ ಹೇಳಿದ್ದನ್ನು ಅವಳಿ ನಗರ ಸೇರಿದಂತೆ ಧಾರವಾಡ ಜಿಲ್ಲೆಯ ಸಾರ್ವಜನಿಕರು ಗಂಭೀರವಾಗಿಯೇ ಪರಿಗಣಿಸಿರುವುದು ಕಂಡುಬಂತು. ಬಹಳಷ್ಟು ಜನರು ಅಗತ್ಯ ವಸ್ತುಗಳನ್ನು ಮೊದಲೇ ಖರೀದಿಸಿ ಇಟ್ಟುಕೊಂಡಿದ್ದರಿಂದ ಶನಿವಾರ ಮನೆ ಬಿಟ್ಟು ಹೊರಗಡೆ ಬರಲಿಲ್ಲ. ಉಳಿದವರು ಸಹ ಸಮೀಪದ ಅಂಗಡಿಗಳಲ್ಲೇ ಖರೀದಿ ಪೂರ್ಣಗೊಳಿಸಿಕೊಂಡು ಬೇಗ ಬೇಗ ಮನೆ ಸೇರಿದರು.

    ಹುಬ್ಬಳ್ಳಿಯ ಪ್ರಮುಖ ದುರ್ಗದಬೈಲ್, ಬ್ರಾಡವೇ, ಜನತಾ ಬಜಾರ್, ಕೊಪ್ಪಿಕರ ರಸ್ತೆ, ದಾಜಿಬಾನ ಪೇಟೆ, ಸ್ಟೇಶನ್ ರಸ್ತೆ ಮೊದಲಾದ ಕಡೆಗಳಲ್ಲಿ ಅಂಗಡಿಗಳು ಬಾಗಿಲು ತೆರೆಯಲೇ ಇಲ್ಲ. ಗ್ರಾಮಾಂತರದಿಂದ ಜನರು ಪಟ್ಟಣಕ್ಕೆ ಬರಲಿಲ್ಲ.

    9.30ರ ಸುಮಾರಿಗೆಲ್ಲ ಪ್ರಮುಖ ಬೀದಿ, ವೃತ್ತ, ಬಡಾವಣೆಗಳಲ್ಲಿ ಪೊಲೀಸ್ ವಾಹನಗಳ ಸಂಚಾರ ಚುರುಕುಗೊಂಡಿತು. ಮನೆ ಸೇರಿಕೊಳ್ಳಿ ಎಂದು ಮೈಕ್​ನಲ್ಲಿ ಸಾರಿ ಹೇಳಿದ್ದನ್ನು ಜನರು ಶ್ರದ್ಧೆಯಿಂದಲೇ ಪಾಲಿಸಿದರು. ಅಂಗಡಿಗಳಿಗೆ ಬಂದವರೆಲ್ಲ 10 ಗಂಟೆ ಹೊತ್ತಿಗೆ ಮನೆಯ ದಾರಿ ಹಿಡಿದಿದ್ದರು. ನಂತರವೂ ಅಲ್ಲೊಬ್ಬ ಇಲ್ಲೊಬ್ಬ ಎಂದು ನಿಂತಿದ್ದವರನ್ನು ಪೊಲೀಸರು ವಿಚಾರಿಸಿ ಎಚ್ಚರಿಕೆ ನೀಡಿ ಮನೆಗೆ ಕಳುಹಿಸಿದರು. ಹಲವಾರು ಕಡೆ ಪೊಲೀಸ್ ಬ್ಯಾರಿಕೇಡ್ ಅಳವಡಿಸಿ, ಅನಗತ್ಯವಾಗಿ ಸಂಚರಿಸುವವರಿಗೆ ತಡೆ ಹಾಕಲಾಗಿತ್ತು. ಮಾಸ್ಕ್ ಧರಿಸದೇ ಇದ್ದವರಿಗೆ ದಂಡಾಸ್ತ್ರ ಪ್ರಯೋಗವೂ ಅಲ್ಲಲ್ಲಿ ನಡೆಯಿತು.

    ರಾಣಿ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಹಳೇ ಬಸ್ ನಿಲ್ದಾಣ ಸೇರಿ ಸದಾ ವಾಹನ ಮತ್ತು ಜನಜಂಗುಳಿ ಇರುತ್ತಿದ್ದ ಪ್ರದೇಶಗಳೆಲ್ಲ ಮಧ್ಯಾಹ್ನದ ಹೊತ್ತಿಗೆ ಸಂಪೂರ್ಣ ಖಾಲಿ ಖಾಲಿಯಾಗಿದ್ದವು. ಪ್ರಮುಖ ಮಾರುಕಟ್ಟೆಗಳು ನಿರ್ವನುಷವಾಗಿದ್ದವು. ಜನರೇ ಇಲ್ಲದ್ದರಿಂದ ಸಾರಿಗೆ ಸಂಸ್ಥೆಯವರು ಬಸ್​ಗಳ ಸಂಚಾರ ಸ್ಥಗಿತಗೊಳಿಸಿದರು. ಪ್ರಯಾಣಿಕರಿಲ್ಲ ಎಂದು ಆಟೋ ರಿಕ್ಷಾ ಮತ್ತಿತರ ಖಾಸಗಿ ವಾಹನದವರು ಸಹ ಮನೆಗೆ ಮರಳಿದರು. ಸದಾ ಚಟುವಟಿಕೆ, ಗೌಜು ಗದ್ದಲದಿಂದ ಕೂಡಿರುತ್ತಿದ್ದ ವಾಣಿಜ್ಯ ನಗರಿ ಅಕ್ಷರಶಃ ಸ್ತಬ್ಧವಾಗಿತ್ತು. ಭಾನುವಾರ ಸಹ ಇದೇ ಪರಿಸ್ಥಿತಿ ಇರುವುದು ನಿರೀಕ್ಷಿತವಾಗದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts