More

    ವಿಶ್ವ ಕನ್ನಡ ಸಮ್ಮೇಳನ ಸಂಬಂಧ ನಿಯೋಗ  – ಸಚಿವ ಮಲ್ಲಿಕಾರ್ಜುನ್ ಹೇಳಿಕೆ – ಮಹಲಿಂಗರಂಗ ಪ್ರಶಸ್ತಿ ಪ್ರದಾನ

    ದಾವಣಗೆರೆ: ದಾವಣಗೆರೆಯಲ್ಲಿ ಶಿಸ್ತುಬದ್ಧವಾಗಿ ಮೂರನೇ ವಿಶ್ವ ಕನ್ನಡ ಸಮ್ಮೇಳನ ನಡೆಸಲು ಸಂಪೂರ್ಣ ಸಹಕಾರ ನೀಡಲಾಗುವುದು. ಮುಂದಿನ ವರ್ಷದ ಬಜೆಟ್‌ನಲ್ಲಿ ಅನುದಾನ ನಿಗದಿಗೆ ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
    ಕುವೆಂಪು ಕನ್ನಡ ಭವನದಲ್ಲಿ ಭಾನುವಾರ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಹಾಗೂ ಗೌರಮ್ಮ ಪಿ.ಮೋತಿ ರಾಮರಾವ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ನೀಡುವ ಮಹಲಿಂಗರಂಗ ಜಿಲ್ಲಾ ಕನ್ನಡ ಸಾಹಿತ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಜಿಲ್ಲೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸುವ ಸಂಬಂಧ 2017ನೇ ಇಸವಿಯಲ್ಲಿ 20 ಕೋಟಿ ರೂ. ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿತ್ತು. ಕಾರಣಾಂತರಗಳಿಂದ ಸಮ್ಮೇಳನ ನಡೆಯಲಿಲ್ಲ ಎಂದರು.
    ಈ ಬಾರಿ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಅನುದಾನ ಸರಿದೂಗಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅನುದಾನ ಸಿಗುವುದು ಕಷ್ಟ.
    ಸಮ್ಮೇಳನ ನಡೆಸುವ ಸಂಬಂಧ ಮುಂದಿನ ವರ್ಷದ ಮಾರ್ಚ್‌ನಲ್ಲಿ ಕಸಾಪ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಮುಖ್ಯಮಂತ್ರಿ ಬಳಿ ನಿಯೋಗ ತೆರಳಿ ಮನವಿ ಮಾಡೋಣ. ಮುಖ್ಯಮಂತ್ರಿ ಹಾಗೂ ಸಾಹಿತ್ಯಾಸಕ್ತರು ಕೂಡ ಇದಕ್ಕೆ ನೆರವಾಗುವ ಭರವಸೆ ನನಗಿದೆ ಎಂದು ಹೇಳಿದರು.
    ಕಾಂಗ್ರೆಸ್ ಸರ್ಕಾರವಿದ್ದಾಗ ಕನ್ನಡ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಜಮೀನು ಹಾಗೂ ರಸ್ತೆ ಸೌಕರ್ಯ ಒದಗಿಸಲಾಗಿದೆ. ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಿಗೆ ಮುಂದೆಯೂ ಸರ್ಕಾರದ ಸಹಕಾರ ಇದೆ ಎಂದರು.
    ರಂಗಕರ್ಮಿ ಟಿ.ಎಸ್.ನಾಗಾಭರಣ ಮಾತನಾಡಿ ಇಂದಿನ ಫೇಸ್‌ಬುಕ್ ಅಬ್ಬರ ಹಾಗೂ ನೆನಪುಗಳು ಮಾಸಿಹೋಗುವ ಈ ಕಾಲದಲ್ಲಿ ಬದುಕು ನೆನಪಿನ ಆಧಾರದಲ್ಲಿ ಹೋಗುತ್ತದೆ. 16ನೇ ಶತಮಾನದ ನೆನಪಿನ ಶಕ್ತಿ ಸಮಾಜದ ಕಳಕಳಿ, ಕನ್ನಡದ ಭಾಷೆ ಅದ್ಭುತ ಮಾದರಿ ಅದನ್ನು ಕೈಬಿಡುವಂತಿಲ್ಲ ಎಂದು ಹೇಳಿದರು.
    ಭವಿಷ್ಯದ ಕನ್ನಡ ಹಾಗೂ ಸಾರಸ್ವತ ಲೋಕಕ್ಕೆ ಕೊಡುಗೆ ನೀಡಲು ಬಹುಮುಖಿ ವ್ಯಕ್ತಿತ್ವದಿಂದ ಮಾತ್ರ ಸಾಧ್ಯ. ಭವಿಷ್ಯದ ಕನ್ನಡ ಕಟ್ಟುವ ಪೀಳಿಗೆ ಸೃಷ್ಟಿಯಾಗುವುದೇ ಇಂತಹ ವೇದಿಕೆಗಳಲ್ಲಿ. ಸೌಹಾರ್ದ, ಸಹೃದಯ ಕಳೆದುಕೊಳ್ಳುತ್ತಿರುವ ಇಂದಿನ ದಿನಮಾನದಲ್ಲಿ ಪ್ರೀತಿ, ವಿಶ್ವಾಸ, ಹುಟ್ಟುಹಾಕುವಲ್ಲಿ ಮಹಲಿಂಗರಂಗ ಅವರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಶ್ಲಾಘನೀಯ ಎಂದರು.
    ಕಲಾವಿದರಿಗೆ ಯಾವುದೇ ಜಾತಿ ಭೇದವಿಲ್ಲ. ಸ್ವಸ್ಥ ಸಮಾಜ ಕ್ರೋಡೀಕರಣಕ್ಕೆ ಸಾಂಸ್ಕೃತಿಕ ಸಮಾಜದಲ್ಲಿರುವ ಪಕ್ಷಾತೀತ, ಜಾತ್ಯತೀತ ಮನಸ್ಸುಗಳು ಬೇಕು ಎಂದು ಆಶಿಸಿದರು.
    ರಂಗಕರ್ಮಿ ಬಾ.ಮ. ಬಸವರಾಜಯ್ಯ ಹಾಗೂ ಸಾಹಿತಿ ಕೆ.ಎನ್.ಸ್ವಾಮಿ ಅವರಿಗೆ 15 ಸಾವಿರ ನಗದು, ಸ್ಮರಣಿಕೆ ಒಳಗೊಂಡ ಮಹಲಿಂಗರಂಗ ಸಾಹಿತ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
    ಪ್ರಶಸ್ತಿ ಪುರಸ್ಕೃತರ ಕುರಿತು ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಮೋತಿ ಆರ್.ಪರಮೇಶ್ವರ ರಾವ್, ಜಾನಪದ ತಜ್ಞ ಡಾ.ಎಂ.ಜಿ. ಈಶ್ವರಪ್ಪ, ಡಾ.ಮಂಜುನಾಥ್ ಕುರ್ಕಿ, ಸುಮತಿ ಜಯಪ್ಪ ಇದ್ದರು. ಬಿ.ದಿಳ್ಯೆಪ್ಪ ಸ್ವಾಗತಿಸಿದರು. ಕೆ.ರಾಘವೇಂದ್ರ ನಾಯರಿ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts