More

    ವಾಹನಗಳ ಸಂಚಾರ ಪುನರಾರಂಭ

    ನರಗುಂದ: ಮಲಪ್ರಭಾ ಪ್ರವಾಹದಿಂದ ಕೊಚ್ಚಿಕೊಂಡು ಹೋಗಿದ್ದ ತಾಲೂಕಿನ ಕೊಣ್ಣೂರ ಗ್ರಾಮದ ಸೇತುವೆ ಹತ್ತಿರದ ಹುಬ್ಬಳ್ಳಿ- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿದೆ. ಹೀಗಾಗಿ ಬುಧವಾರದಿಂದ ಎಲ್ಲ ವಾಹನಗಳ ಸಂಚಾರ ಪುನರಾರಂಭವಾಗಿದೆ.

    ಜು. 24ರಂದು ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ ಹೆಚ್ಚುವರಿ ನೀರು ಹರಿಬಿಟ್ಟಿದ್ದರಿಂದ ತಾಲೂಕಿನ ಗಡಿಗ್ರಾಮ ಲಖಮಾಪುರ ಸಂಪೂರ್ಣ ನಡುಗಡ್ಡೆಯಾಗಿತ್ತು. ಕೊಣ್ಣೂರಿನ ನೂರಾರು ಮನೆಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಜಲಾಶಯದಿಂದ ಜು. 26ರಂದು ಮತ್ತೆ ಹೆಚ್ಚುವರಿ ನೀರು ಹರಿಬಿಟ್ಟಿದ್ದರಿಂದ ಕೊಣ್ಣೂರ ಸೇತುವೆ ಹತ್ತಿರದ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 500 ಮೀಟರ್​ನಷ್ಟು ಕೊಚ್ಚಿಕೊಂಡು ಹೋಗಿ ವಾಹನಗಳ ಸಂಚಾರ ಸ್ಥಗಿತವಾಗಿತ್ತು. ಅನಿವಾರ್ಯವಾಗಿ ಕುಳಗೇರಿ ಕ್ರಾಸ್, ರಾಮದುರ್ಗ, ಹೂಲಿಕಟ್ಟಿ, ನರಗುಂದ ಮಾರ್ಗವಾಗಿ 50 ಕಿಮೀ ಸುತ್ತುವರಿದು ಹುಬ್ಬಳ್ಳಿಗೆ ಪ್ರಯಾಣಿಸುವ ಪರಿಸ್ಥಿತಿ ನಿರ್ವಣವಾಗಿತ್ತು. ಆದರೀಗ ಕಳೆದೆರಡು ದಿನಗಳಿಂದ ನೀರು ಕಡಿಮೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ನಿಗಮದ ಅಧಿಕಾರಿಗಳು ಖಡಿ, ಮೋರಂ ಹಾಕಿ ಹೆದ್ದಾರಿಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಿಸಿದ್ದಾರೆ.

    ಕೊಣ್ಣೂರಿನ ಹೊಸ ಸೇತುವೆ ಅವೈಜ್ಞಾನಿಕವಾಗಿ ನಿರ್ವಿುಸಿದ್ದರಿಂದ ಕೊಣ್ಣೂರ ಗ್ರಾಮಕ್ಕೆ ಪ್ರತಿ ವರ್ಷವೂ ಪ್ರವಾಹದ ಆತಂಕ ಕಾಡುತ್ತಿದೆ. ಇದರಿಂದ ಬಹುತೇಕ ಮನೆಗಳು, ಅಪಾರ ಪ್ರಮಾಣದ ಜಮೀನುಗಳಿಗೆ ನೀರು ನುಗ್ಗಿ ಸಂಕಷ್ಟ ಅನುಭವಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇಲ್ಲಿನ ಸೇತುವೆಯನ್ನು ವೈಜ್ಞಾನಿಕವಾಗಿ ನಿರ್ವಿುಸಬೇಕು ಎಂದು ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಟಿ.ಬಿ. ಶಿರಿಯಪ್ಪಗೌಡ್ರ ಆಗ್ರಹಿಸಿದ್ದಾರೆ.

    ಚಾಲಕರು ನಿರಾಳ: ಕೊಣ್ಣೂರಿನ ಸೇತುವೆ ಹತ್ತಿರ ಹೆದ್ದಾರಿ ಕೊಚ್ಚಿಕೊಂಡು ಹೋಗಿದ್ದರಿಂದ ಮಾರ್ಗದುದ್ದಕ್ಕೂ ನೂರಾರು ಲಾರಿಗಳು ನಿಂತಿದ್ದವು. ಪ್ರವಾಹ ಸಮಸ್ಯೆಯಿಂದ ಸುತ್ತುವರಿದು ತೆರಳಿದರೆ ಲಾರಿ ಮಾಲೀಕರು ನಂಬುವುದಿಲ್ಲ. ಆಕಸ್ಮಾತ್ ತೆರಳಿದ್ದರೆ ಡೀಸೆಲ್ ಹಣವನ್ನು ನಾವೇ ಭರಿಸಬೇಕಾಗಿತ್ತು. ಹೀಗಾಗಿ, ವಿನಾಕಾರಣ ಎರಡ್ಮೂರು ದಿನಗಳವರೆಗೆ ಕಾಲಹರಣ ಮಾಡಿದ್ದೇವೆ. ಸಮಯಕ್ಕೆ ಸರಿಯಾಗಿ ಅನ್ನ, ಆಹಾರವಿಲ್ಲದೆ ದಿನ ದೂಡಿದ್ದೇವೆ. ಈಗ ಹೆದ್ದಾರಿಯನ್ನು ದುರಸ್ತಿಪಡಿಸಿದ್ದರಿಂದ ಸಂಚಾರ ಸುಗಮವಾಗಿದೆ ಎನ್ನುತ್ತಾರೆ ರಾಜಸ್ಥಾನ, ತಮಿಳುನಾಡು, ಆಂಧ್ರಪ್ರದೇಶ ಮತ್ತಿತರ ಕಡೆಗಳಿಂದ ಆಗಮಿಸಿದ್ದ ಲಾರಿ ಚಾಲಕರು.

    ಕೊಣ್ಣೂರ ಬಳಿ ವೈಜ್ಞಾನಿಕ ಸೇತುವೆ ನಿರ್ವಿುಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಈ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ 6.65 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಟೆಂಡರ್ ಪ್ರಕ್ರಿಯೆ ಕೂಡ ಮುಗಿದಿದೆ. ಮಳೆಗಾಲ ಮುಗಿದ ಬಳಿಕ 60 ಮೀಟರ್ ಹೆಚ್ಚುವರಿ ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಲಾಗುತ್ತದೆ.
    | ರಾಜೇಂದ್ರ, ಎಇಇ ರಾಷ್ಟ್ರೀಯ ಹೆದ್ದಾರಿ ನಿಗಮ

    ಕಾಳಜಿ ಕೇಂದ್ರಗಳಿಂದ ಮರಳಿ ಮನೆಯತ್ತ

    ನರಗುಂದ: ಮಲಪ್ರಭಾ ನದಿಯ ನೀರಿನ ಪ್ರಮಾಣ ಇಳಿಕೆಯಾಗಿದ್ದು ತಾಲೂಕಿನ ಬೆಳ್ಳೇರಿ ಮತ್ತು ಕೊಣ್ಣೂರ ಕಾಳಜಿ ಕೇಂದ್ರಗಳಿಗೆ ದಾಖಲಾಗಿದ್ದ ಸಂತ್ರಸ್ತರು ಬುಧವಾರ ಸಂಜೆ ಮರಳಿ ತಮ್ಮ ಮನೆಗಳಿಗೆ ತೆರಳಿದರು.

    ನವಿಲು ತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ ಜು. 24 ರಂದು 18000 ಕ್ಯೂಸೆಕ್ ನೀರನ್ನು ಹರಿ ಬಿಡಲಾಗಿತ್ತು. ಇದರಿಂದ ತಾಲೂಕಿನ ಗಡಿಗ್ರಾಮ ಲಖಮಾಪೂರದ 276 ಜನರು, 97 ಜಾನುವಾರುಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ಬೆಳ್ಳೇರಿ ಕೃಷಿ ಡಿಪ್ಲೊ›ಮಾ ಕಾಲೇಜ್​ನಲ್ಲಿ ತೆಗೆದಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಿದ್ದರು. ಕೊಣ್ಣೂರಿನ 80 ಜನರನ್ನು ಗ್ರಾಮದ ಕೆಇಎಸ್ ಹೈಸ್ಕೂಲ್​ನಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಜು.28 ರಂದು ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಎಲ್ಲರೂ ತಮ್ಮ ಜಾನುವಾರುಗಳೊಂದಿಗೆ ಸ್ವಗ್ರಾಮಕ್ಕೆ ತೆರಳಿದರು.

    ಅಧಿಕಾರಿಗಳ ಸಲಹೆಗಿಲ್ಲ ಸ್ಪಂದನೆ: ಮಲಪ್ರಭಾ ನದಿಪಾತ್ರದಲ್ಲಿ ಧಾರಾಕಾರ ಮಳೆಯಾಗಿ ಮತ್ತೆ ಪ್ರವಾಹದ ಆತಂಕ ಎದುರಿಸಬೇಕಾಗುತ್ತದೆ. ಆದ್ದರಿಂದ ಸದ್ಯಕ್ಕೆ ಯಾರೊಬ್ಬರೂ ಲಖಮಾಪೂರ ಗ್ರಾಮಕ್ಕೆ ತೆರಳದಂತೆ ಕಾಳಜಿ ಕೇಂದ್ರದ ಅಧಿಕಾರಿಗಳು ಮನವಿ ಮಾಡಿದರು. ಆದರೆ, ಅದಕ್ಕೆ ಕ್ಯಾರೆ ಎನ್ನದ ಜನರು ತಮ್ಮ ಅಗತ್ಯ ಸಾಮಗ್ರಿಗಳೊಂದಿಗೆ ಮನೆಗಳತ್ತ ಹೆಜ್ಜೆ ಹಾಕಿದರು. ಲಖಮಾಪೂರ ಸೇತುವೆ ಬಳಿ ಅಲ್ಪ ಪ್ರಮಾಣ ನೀರು ಹರಿಯುತ್ತಿದ್ದರೂ ಲೆಕ್ಕಿಸದೆ ಕೆಸರಲ್ಲೇ ನಡೆದುಕೊಂಡು ಹೋದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts