More

    ವಾರಾಂತ್ಯದೊಳಗೆ ಐಪಿಎಲ್ ವೇಳಾಪಟ್ಟಿ ಪ್ರಕಟ ನಿರೀಕ್ಷೆ; ಹೀಗಿದೆ ಬಿಸಿಸಿಐ ಯೋಜನೆ…

    ನವದೆಹಲಿ: ಐಪಿಎಲ್ 15ನೇ ಆವೃತ್ತಿ ಆರಂಭಕ್ಕೆ ಮುನ್ನ ಭಾರತ ತಂಡ ಕೊನೆಯದಾಗಿ ಪ್ರವಾಸಿ ಶ್ರೀಲಂಕಾ ವಿರುದ್ಧ ಟಿ20 ಮತ್ತು ಟೆಸ್ಟ್ ಸರಣಿ ಆಡಲಿದೆ. ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕ ಇದೀಗ ಎಲ್ಲ 10 ತಂಡಗಳು ಐಪಿಎಲ್ ಮೂಡ್‌ನಲ್ಲೇ ಇದ್ದು, ವಾರಾಂತ್ಯದಲ್ಲಿ ಟೂರ್ನಿಯ ವೇಳಾಪಟ್ಟಿಯನ್ನು ಬಿಸಿಸಿಐ ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆ ಇದೆ.

    ಈ ಸಲದ ಐಪಿಎಲ್ ಟೂರ್ನಿಯನ್ನು ಭಾರತದ 6 ಕ್ರೀಡಾಂಗಣಗಳಲ್ಲಿ ಆಯೋಜಿಸಲು ಬಿಸಿಸಿಐ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ. ಇದರಲ್ಲಿ ಮುಂಬೈನ ರಿಲಯನ್ಸ್ ಜಿಯೋ ಸ್ಟೇಡಿಯಂ ಅನ್ನು 6ನೇ ತಾಣವಾಗಿ ಸೇರಿಸಲಾಗಿದೆ. ಮುಂಬೈನ 3 ಕ್ರೀಡಾಂಗಣಗಳಾದ ವಾಂಖೆಡೆ, ಬ್ರಬೋರ್ನ್ ಮತ್ತು ಡಿವೈ ಪಾಟೀಲ್ ಸ್ಟೇಡಿಯಂ ಮತ್ತು ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ಟೂರ್ನಿಯ ಲೀಗ್ ಹಂತದ ಪಂದ್ಯಗಳು ನಡೆಯಲಿವೆ ಎಂದು ಈ ಮೊದಲೇ ವರದಿಯಾಗಿತ್ತು. ಅಹಮದಾಬಾದ್‌ನ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಸಹಿತ ಪ್ಲೇಆಫ್​ ಪಂದ್ಯಗಳು ನಡೆಯಲಿವೆ ಎನ್ನಲಾಗಿದೆ.

    2 ಹೊಸ ತಂಡಗಳ ಸೇರ್ಪಡೆಯಿಂದ ಲೀಗ್ ಹಂತದಲ್ಲಿ ಒಟ್ಟು 70 ಪಂದ್ಯಗಳು ನಡೆಯಲಿವೆ. ಎಲ್ಲ ತಂಡಗಳು ಲೀಗ್ ಹಂತದಲ್ಲಿ ತಲಾ 14 ಪಂದ್ಯಗಳನ್ನು ಆಡಲಿವೆ. 2011ರ ಐಪಿಎಲ್ ಸ್ವರೂಪದ ಅನ್ವಯ, 10 ತಂಡಗಳು ತಲಾ 5ರಂತೆ 2 ಗುಂಪುಗಳಲ್ಲಿ ಇರಲಿವೆ. ಆಯಾ ಗುಂಪಿನ ತಂಡಗಳ ವಿರುದ್ಧ ತವರು ಮತ್ತು ಎದುರಾಳಿ ನೆಲದಲ್ಲಿ ಒಟ್ಟು 2 ಬಾರಿ ಮುಖಾಮುಖಿ ಆಗಲಿದ್ದರೆ, ಮತ್ತೊಂದು ಗುಂಪಿನ 1 ತಂಡದ ವಿರುದ್ಧ ಮಾತ್ರ 2 ಪಂದ್ಯ ಆಡಲಿದೆ. ಉಳಿದ 4 ತಂಡಗಳ ವಿರುದ್ಧ ತವರು ಅಥವಾ ಎದುರಾಳಿ ನೆಲದಲ್ಲಿ ತಲಾ ಒಮ್ಮೆ ಸೆಣಸಲಿದೆ.

    ಮಾರ್ಚ್ 26 ಅಥವಾ 27ಕ್ಕೆ ಆರಂಭ?
    ಐಪಿಎಲ್ ಟೂರ್ನಿಯನ್ನು ಮಾರ್ಚ್ 27ರಂದು (ಭಾನುವಾರ) ಚಾಲನೆ ನೀಡಲು ಬಿಸಿಸಿಐ ಬಯಸಿದೆ. ಆದರೆ ಟೂರ್ನಿಯ ನೇರಪ್ರಸಾರ ವಾಹಿನಿ ಸ್ಟಾರ್ ಸ್ಪೋರ್ಟ್ಸ್, ಮಾರ್ಚ್ 26ರಂದೇ (ಶನಿವಾರ) ಆರಂಭಿಸಬೇಕೆಂದು ಬಿಸಿಸಿಐಗೆ ಮನವಿ ಸಲ್ಲಿಸಿದೆ. ಈ ಮೂಲಕ ವಾರಾಂತ್ಯದ ದಿನಗಳಲ್ಲಿ ಐಪಿಎಲ್‌ಗೆ ಜೋಶ್‌ನ ಆರಂಭ ನೀಡುವುದು ಅದರ ಉದ್ದೇಶವಾಗಿದೆ. ಈ ಬಗ್ಗೆ ಪ್ರಸಕ್ತ ವಾರ ನಿರ್ಧರಿಸಿದ ಬೆನ್ನಲ್ಲೇ ಬಿಸಿಸಿಐ ವೇಳಾಪಟ್ಟಿ ಪ್ರಕಟಿಸುವ ನಿರೀಕ್ಷೆ ಇದೆ. ಮೇ 28ರಂದು ಐಪಿಎಲ್ ಫೈನಲ್ ನಡೆಯಲಿದೆ ಎನ್ನಲಾಗಿದೆ.

    ಐಪಿಎಲ್ ಹರಾಜುಗಾರ ಕುಸಿದುಬಿದ್ದಾಗ ಚಾರು ಶರ್ಮಗೆ ಅವಕಾಶ ಒಲಿದುಬಂದಿದ್ದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts