More

    ವಾಕ್​ಥಾನ್, ಆದರ್ಶ ದಂಪತಿ ಸ್ಪರ್ಧೆಯೊಂದಿಗೆ ಮಹಿಳಾ ದಿನಾಚರಣೆ

    ಹುಬ್ಬಳ್ಳಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕನ್ನಡದ ನಂ. 1 ದಿನಪತ್ರಿಕೆ ‘ವಿಜಯವಾಣಿ’, ದಿಗ್ವಿಜಯ ನ್ಯೂಸ್ ಸುದ್ದಿ ವಾಹಿನಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳು ಸಾಕಷ್ಟು ಮಹಿಳೆಯರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.

    ವಾಕ್​ಥಾನ್, ಆದರ್ಶ ದಂಪತಿ ಹಾಗೂ ವೀರ ವನಿತೆ ಸ್ಪರ್ಧೆಗಳಲ್ಲಿ ನೂರಾರು ಮಹಿಳೆಯರು ಉತ್ಸಾಹ, ಸಂಭ್ರಮದಿಂದ ಪಾಲ್ಗೊಂಡರು. ಬೆಳಗ್ಗೆ ಏಳು ಗಂಟೆಯ ಹೊತ್ತಿಗೆ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಸೇರಿದ ಮಹಿಳೆಯರು ಹಳೇ ಕೋರ್ಟ್ ವೃತ್ತ, ಟಿ.ಬಿ. ರಸ್ತೆ, ದೇಶಪಾಂಡೆನಗರ ಮಾರ್ಗವಾಗಿ ಸವಾಯಿ ಗಂಧರ್ವ ಸಭಾಭವನದವರೆಗೆ ಸಮಾನತೆಗಾಗಿ ಹೆಜ್ಜೆ (ವಾಕ್​ಥಾನ್) ಹಾಕಿ ತಮ್ಮ ದಿನಕ್ಕಾಗಿ ಹೆಮ್ಮೆ ಪಟ್ಟರು.

    ಚಿತ್ರ ನಟಿ, ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧಾ ಹಾಗೂ ವಿಜಯಾನಂದ ಟ್ರಾವಲ್ಸ್ ಪ್ರೖೆವೇಟ್ ಲಿಮಿಟೆಡ್​ನ ಕಾರ್ಯಕಾರಿ ನಿರ್ದೇಶಕಿ ಶ್ರೀಮತಿ ವಾಣಿ ಆನಂದ ಸಂಕೇಶ್ವರ ವಾಕ್​ಥಾನ್​ಗೆ ಚಾಲನೆ ನೀಡಿದರು. ವಿಆರ್​ಎಲ್ ಸಮೂಹ ಸಂಸ್ಥೆಗಳ ಎಂಡಿ ಡಾ. ಆನಂದ ಸಂಕೇಶ್ವರ ಇದ್ದರು.

    ಹೆಣ್ಣು ಜಗದ ಕಣ್ಣು, ಸುಖಿ ಸಂಸಾರಕ್ಕೆ ಹಣ್ಣೇ ಭೂಷಣ, ನಾರಿಗೆ ಇದ್ದರೆ ನೆಮ್ಮದಿ ನಾಡಲ್ಲಿ ಸಮೃದ್ಧಿ, ನಾರಿ ಮುನಿದರೆ ಮಾರಿ… ಎಂಬಿತ್ಯಾದಿ ಘೊಷಣಾ ಫಲಕಗಳು ರಾರಾಜಿಸಿದವು. ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

    ಮೆಚ್ಚುಗೆ ಗಳಿಸಿದ ಆದರ್ಶ ದಂಪತಿ

    ಸವಾಯಿ ಗಂಧರ್ವ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮವನ್ನು ಮುಂಡಗೋಡ ಅತ್ತಿವೇರಿಯ ಬಸವಧಾಮದ ಶ್ರೀ ಬಸವೇಶ್ವರಿ ಮಾತಾಜಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಬಳಿಕ ನಡೆದ ಆದರ್ಶ ದಂಪತಿ-ವೀರ ವನಿತೆ ಸ್ಪರ್ಧೆ ಅಪಾರ ಸಂಖ್ಯೆಯಲ್ಲಿ ಸೇರಿದ ಮಹಿಳೆಯರಿಗೆ ಮುದ ನೀಡಿತು.

    ಮದುವೆಯಾಗಿ 20 ರಿಂದ 50 ವರ್ಷ ಮೇಲ್ಪಟ್ಟ ದಂಪತಿ ಹಾಡು ಮತ್ತು ಸಂಭಾಷಣೆಯೊಂದಿಗೆ ಸಿದ್ಧಪಡಿಸಿದ ಆಯ್ದ ಒಂದೂವರೆ ನಿಮಿಷದ ಉತ್ತಮ 20 ವಿಡಿಯೋ ಕ್ಲಿಪ್ಪಿಂಗ್​ನ್ನು ಕಾರ್ಯಕ್ರಮದ ವೇದಿಕೆಯಲ್ಲಿ ಎಲ್​ಇಡಿ ಪರದೆಯ ಮೇಲೆ ಪ್ರದರ್ಶಿಸಲಾಯಿತು. ಈ ಸ್ಪರ್ಧೆಗೆ ನೂರಕ್ಕೂ ಹೆಚ್ಚು ವಿಡಿಯೋ ಕ್ಲಿಪ್ಪಿಂಗ್​ಗಳು ಬಂದಿದ್ದವು. ಇಂಥದೊಂದು ವಿನೂತನ ಸ್ಪರ್ಧೆಯು ಅಪಾರ ಮೆಚ್ಚುಗೆ ಗಳಿಸಿತು. ವಿಡಿಯೋ ತುಣುಕುಗಳನ್ನು ಕಳುಹಿಸಿದವರಲ್ಲಿ ಆಯ್ದ 20 ದಂಪತಿಗಳಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

    ವೀರ ವನಿತೆ ಸ್ಪರ್ಧೆಯಲ್ಲಿ 4ರಿಂದ 94 ವರ್ಷದ ಮಹಿಳೆಯರು ಪಾಲ್ಗೊಂಡು ಬೆರಗು ಮೂಡಿಸಿದರು. ಓನಕೆ ಒಬ್ಬವ್ವ, ಕಿತ್ತೂರು ರಾಣಿ ಚನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಅಬ್ಬಕ್ಕ ಪಾತ್ರಗಳಲ್ಲಿ ಮಹಿಳೆಯರು ಮಿಂಚಿದರು. ಕಿರಿಯ ಹಾಗೂ ಹಿರಿಯ ಎರಡು ವಿಭಾಗಗಳಲ್ಲಿ ತಲಾ ಮೂವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

    ಇದೇ ವೇಳೆ ವಿಆರ್​ಎಲ್ ಸಂಸ್ಥೆಯ ಸಿಎಸ್​ಆರ್ ಚಟುವಟಿಕೆಯಡಿ 10 ಜನ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts