More

    ವಸ್ತುನಿಷ್ಠ ವರದಿಗಾರಿಕೆ ಅಗತ್ಯ

    ಬೆಳಗಾವಿ: ಬದಲಾವಣೆಗೆ ತಕ್ಕಂತೆ ಪತ್ರಿಕೋದ್ಯಮದ ಆದ್ಯತೆ ಕೂಡ ಬದಲಾಗಿದೆ. ಹಿಂದೆ ದೇಶಪ್ರೇಮವೇ ಪತ್ರಿಕೋದ್ಯಮದ ಬಂಡವಾಳವಾಗಿತ್ತು. ಇದೀಗ ಆ ಪ್ರೇಮ
    ಕಡಿಮೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಕಳವಳ ವ್ಯಕ್ತಪಡಿಸಿದರು.

    ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಬೆಳಗಾವಿ ಜಿಲ್ಲಾ ಘಟಕದಿಂದ ಜೆಎನ್‌ಎಂಸಿ ಕ್ಯಾಂಪಸ್‌ನ ಜೀರಗೆ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಮೂರು ವರ್ಷಗಳ ಮುನ್ನೋಟ ಮತ್ತು ಮಾಧ್ಯಮ ಹಾಗೂ ಕಾನೂನು ಕಾರ್ಯಾಗಾರ’ ಉದ್ಘಾಟಿಸಿ ಅವರು ಮಾತನಾಡಿದರು. ಮಹಾತ್ಮ ಗಾಂಧೀಜಿ ಹಾಗೂ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಕೂಡ ಪತ್ರಕರ್ತರಾಗಿದ್ದವರು. ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ ಅವರು ಪತ್ರಿಕೋದ್ಯಮವನ್ನು ಅಸ್ತ್ರವಾಗಿ ಬಳಸಿಕೊಂಡರು. ಅದೇ ರೀತಿ ಡಾ.ಬಾಬಾಸಾಹೇಬರು ಸಾಮಾಜಿಕ ಸಮಾನತೆಯನ್ನು ಪತ್ರಿಕೋದ್ಯಮದ ಮೂಲಕವೇ ತರಲು ಶ್ರಮಿಸಿದರು ಎಂದರು.

    ಕಾಂಗ್ರೆಸ್ ರಾಜಕೀಯ ಪಕ್ಷವಲ್ಲ: ದೇಶದ ಸ್ವಾತಂತ್ರ್ಯಕ್ಕಾಗಿ ಆರಂಭಿಸಲಾಗಿದ್ದ ಕಾಂಗ್ರೆಸ್‌ಅನ್ನು ಸ್ವಾತಂತ್ರ್ಯದ ಬಳಿಕ ವಿಸರ್ಜಿಸಬೇಕು ಎಂಬುದು ಮಹಾತ್ಮ ಗಾಂಧೀಜಿ ಅವರ ಆಶಯವಾಗಿತ್ತು. ತಮ್ಮ ‘ಹರಿಜನ’ ಪತ್ರಿಕೆಯಲ್ಲಿ ಬರೆದ ಕೊನೆಯ ಸಂಪಾದಕೀಯ ಬರಹದಲ್ಲೂ ಅದನ್ನು ವ್ಯಕ್ತಪಡಿಸಿದ್ದರು. ಪತ್ರಕರ್ತರು ಕೂಡ ಸಾಹಿತಿಗಳೇ. ಕೆಲವರು ವಸ್ತು ನಿಷ್ಠ ವರದಿ ಮಾಡಿದರೆ ಕೆಲವರು ಸುದ್ದಿ ಸೃಷ್ಟಿಸುತ್ತಾರೆ. ಆದರೆ, ವಸ್ತುನಿಷ್ಠ ವರದಿಗಾರಿಕೆಯೇ ನಿಜವಾದ ಪತ್ರಿಕಾಧರ್ಮವಾಗಿದೆ ಎಂದು ಅಭಿಪ್ರಾಯಪಟ್ಟರು.
    ಜಾಗೃತಿ ಮೂಡಿಸುವ ಕೆಲಸವಾಗಲಿ: ಪೀತ ಪತ್ರಿಕೋದ್ಯಮ ಈಗ ಇಲ್ಲವಾಗಿದೆ. ಈ ಕಾಲಘಟ್ಟದಲ್ಲಿ ಆಧುನಿಕ ತಂತ್ರಜ್ಞಾನ ಲಭ್ಯವಿದೆ. ಪತ್ರಿಕಾಧರ್ಮ ಉಳಿಸುವ ಕೆಲಸವನ್ನು ಪತ್ರಕರ್ತರು ಮಾಡಬೇಕು. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದು ಗುರುತಿಸಲಾಗುವ ಪತ್ರಿಕೋದ್ಯಮಕ್ಕೆ ವಿಶಿಷ್ಟ ಸ್ಥಾನವಿದೆ. ಸತ್ಯ ತಿಳಿಸುವ ಮೂಲ ಜನರ ಜಾಗೃತಿ ಮಾಡುವ ಕೆಲಸವಾಗಬೇಕು.

    ಅಭಿವೃದ್ಧಿ, ದೇಶದ ಕಲೆ-ಸಾಹಿತ್ಯ, ಸಂಸ್ಕೃತಿ ಪ್ರೋತ್ಸಾಹಿಸುವ ಕೆಲಸವನ್ನು ಪತ್ರಕರ್ತರು ಮಾಡಬೇಕು ಎಂದು ಕರೆ ನೀಡಿದರು.

    ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರ ಸಂಘದ ಮೂರು ವರ್ಷಗಳ ಮುನ್ನೋಟ ಕುರಿತ ಕಿರುಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿ, ಬಿ.ಆರ್.ಅಂಬೇಡ್ಕರ್‌ಅವರ ಹೆಸರಿನಲ್ಲಿ ಪ್ರಶಸ್ತಿ ಆರಂಭಿಸಬೇಕು ಎಂಬುದು ಸಂಘದ ಕನಸಾಗಿತ್ತು. ಅದಕ್ಕೆ ಬಾಗಲಕೋಟೆಯ ಸುಭಾಷ ಹೊದ್ಲೂರ ಅವರು ಎರಡೂವರೆ ಲಕ್ಷ ರೂ.ನೀಡುವ ಮೂಲಕ ಚಾಲನೆ ನೀಡಿದರು. ಗಾಂಧೀಜಿ ಹೆಸರಿನಲ್ಲಿ ಪ್ರಶಸ್ತಿ ಆರಂಭಿಸಲು ಸಚಿವ ಗೋವಿಂದ ಕಾರಜೋಳ ಕೂಡ ಸಮ್ಮತಿ ವ್ಯಕ್ತಪಡಿಸಿದ್ದಾರೆ ಎಂದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿಲೀಪ ಕುರಂದವಾಡೆ, ಸಂಘದ ರಾಜ್ಯಮಟ್ಟದ ಪದಾಧಿಕಾರಿಗಳು ಮತ್ತು ಬೆಳಗಾವಿ ಜಿಲ್ಲಾ ಪದಾಧಿಕಾರಿಗಳು ಮತ್ತು ಪತ್ರಕರ್ತರು ಇದ್ದರು.

    ಪತ್ರಕರ್ತರು ಯಾಂತ್ರೀಕೃತ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತಿವೆ. ಹಾಗಾಗಿ, ಆರೋಗ್ಯದ ಕಡೆ ಗಮನಹರಿಸಬೇಕು. ವೃತ್ತಿ ಹಾಗೂ ಕೌಟುಂಬಿಕ ಜೀವನ ಸಮತೋಲನದಲ್ಲಿರುವಂತೆ ನೋಡಿಕೊಳ್ಳಬೇಕು.
    | ಗೋವಿಂದ ಕಾರಜೋಳ ಜಿಲ್ಲಾ ಉಸ್ತುವಾರಿ ಸಚಿವ

    ಮನೆ ಗೆದ್ದು ಮಾರು ಗೆಲ್ಲಬೇಕು ಎಂಬ ಮಾತನ್ನು ಅರಿತು ಪತ್ರಕರ್ತರು, ತಮ್ಮ ಕುಟುಂಬವನ್ನು ಗಮನದಲ್ಲಿಟ್ಟುಕೊಂಡು ವೃತ್ತಿ ಮುನ್ನಡೆಸಿಕೊಂಡು ಹೋಗಬೇಕು. ಸಾಮಾಜಿಕ ಜಾಲತಾಣ ಸಕ್ರಿಯವಾಗಿರುವ ಈ ಸಂದರ್ಭದಲ್ಲಿ ಸುಳ್ಳು ಸುದ್ದಿ ಭರಾಟೆ ಹೆಚ್ಚಾಗಿದೆ. ಇಂತಹ ಸನ್ನಿವೇಶದಲ್ಲಿ ಪತ್ರಕರ್ತರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಪ್ರಸಕ್ತ ವರ್ಷದ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ವಿಜಯಪುರ ಜಿಲ್ಲೆಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.
    | ಶಿವಾನಂದ ತಗಡೂರ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts