More

    ವರ್ಷದಲ್ಲಿ ವಿಮಾನ ಹಾರಾಟ

    ಶಿವಮೊಗ್ಗ: ಶಿವಮೊಗ್ಗದಲ್ಲಿ ಇನ್ನೊಂದು ವರ್ಷದಲ್ಲಿ 160 ಜನರನ್ನು ಹೊತ್ತೊಯ್ಯುವ ವಿಮಾನ ಇಲ್ಲಿ ಹಾರಾಟ ಮಾಡಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದರು.

    ಸೋಗಾನೆಯಲ್ಲಿ ಸೋಮವಾರ ವಿಮಾನ ನಿಲ್ದಾಣ ಕಾಮಗಾರಿ ಶಂಕುಸ್ಥಾಪನೆ, ಲೋಕೋಪಯೋಗಿ ಇಲಾಖೆ ಕೇಂದ್ರ ವಲಯ ಕಚೇರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಭಾಗೀಯ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಎರಡು ಹಂತದಲ್ಲಿ ಕಾಮಗಾರಿ ನಡೆಯಲಿದೆ. ಮೊದಲ ಹಂತದಲ್ಲಿ 150 ಕೋಟಿ ರೂ. ವೆಚ್ಚದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಇನ್ನೊಂದು ವಾರದಲ್ಲಿ ಎರಡನೇ ಹಂತದ ಟೆಂಡರ್ ಪೂರ್ಣಗೊಳ್ಳಲಿದೆ. ಹಲವು ತಾಂತ್ರಿಕ ಸಮಸ್ಯೆಗಳಿಂದ ವಿಮಾನ ನಿಲ್ದಾಣ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಈಗ ‘ಉಡಾನ್’ ಯೋಜನೆ ಮೂಲಕ ಕಡಿಮೆ ದರದಲ್ಲಿ ಸಾಮಾನ್ಯ ಜನರೂ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ಲಭ್ಯವಾಗಲಿದೆ ಎಂದರು.

    ವಿಮಾನ ಸಂಪರ್ಕ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದ್ದು ಮುಂದಿನ ದಿನಗಳಲ್ಲಿ ಜಿಲ್ಲೆಯ ಕೈಗಾರಿಕೆ, ಪ್ರವಾಸೋದ್ಯಮ ವಲಯದಲ್ಲಿ ಮಹತ್ತರ ಬದಲಾವಣೆಗಳಾಗಲಿವೆ. ವಿಐಎಸ್​ಎಲ್ ಹಾಗೂ ಎಂಪಿಎಂ ಕಾರ್ಖಾನೆ ಬಳಿಕ ಶಿವಮೊಗ್ಗ ಜಿಲ್ಲೆಯಲ್ಲಿ ಯಾವುದೇ ಬೃಹತ್ ಕೈಗಾರಿಕೆಗಳು ಆರಂಭವಾಗಿಲ್ಲ. ಈಗ ವಿಐಎಸ್​ಎಲ್ ಹಾಗೂ ಎಂಪಿಎಂ ರೋಗಗ್ರಸ್ತ ಕಾರ್ಖಾನೆಗಳ ಪಟ್ಟಿಗೆ ಸೇರಿರುವುದರಿಂದ ನಾವು ಕೈಗಾರಿಕೆಗೆ ಹೆಚ್ಚು ಮಹತ್ವ ನೀಡಬೇಕಿದೆ. ವಿಮಾನ ಸಂಪರ್ಕದಿಂದ ಕೈಗಾರಿಕೋದ್ಯಮಿಗಳು ಜಿಲ್ಲೆಯತ್ತ ಮುಖ ಮಾಡಲು ಸಾಧ್ಯವಿದೆ ಎಂದರು.

    ಈಗಾಗಲೇ ಕೆಐಎಡಿಬಿಗೆ 450 ಎಕರೆ ಭೂಮಿ ಹಸ್ತಾಂತರವಾಗಿದೆ. ಈ ಭಾಗದಲ್ಲಿ ಕೈಗಾರಿಕೆ ಸ್ಥಾಪನೆಗೆ ಇದರಿಂದ ಅನುಕೂಲವಾಗಲಿದೆ. ಈ ಹಿಂದೆ ಬಿಎಸ್​ವೈ ಆಸಕ್ತಿಯಿಂದ ಶಾಹಿ ಗಾರ್ವೆಂಟ್ಸ್​ನ ಎರಡು ಘಟಕಗಳು ಶಿವಮೊಗ್ಗ ಹಾಗೂ ಸಾಗರದಲ್ಲಿ ಕಾರ್ಯ ನಿರ್ವಹಿಸುತ್ತಿವೆ. 17 ಸಾವಿರ ಮಂದಿಗೆ ಉದ್ಯೋಗ ಸಿಕ್ಕಿದೆ. ಶೀಘ್ರವೇ ಶಿಕಾರಿಪುರದಲ್ಲೂ ಒಂದು ಗಾರ್ವೆಂಟ್ಸ್ ಘಟಕ ಆರಂಭವಾಗಲಿದೆ. ವಿಮಾನ ಸಂಪರ್ಕದ ಬಳಿಕ ಕೈಗಾರಿಕೆಗಳಿಗೆ ಹೆಚ್ಚು ಶಕ್ತಿ ಬರಲಿದೆ ಎಂದು ಹೇಳಿದರು.

    ರೈತರ ತ್ಯಾಗ ದೊಡ್ಡದು: ವಿಮಾನ ನಿಲ್ದಾಣ ಹಾಗೂ ಕೈಗಾರಿಕೆಗಳ ಸ್ಥಾಪನೆಗೆ ಭೂಮಿ ನೀಡಿರುವ ರೈತರ ತ್ಯಾಗ ದೊಡ್ಡದು. ಅವರ ಮನಸ್ಸಿಗೆ ನೋವಾಗಲು ನಾವು ಬಿಡುವುದಿಲ್ಲ ಎಂದು ಬಿ.ವೈ.ರಾಘವೇಂದ್ರ ಹೇಳಿದರು. ಈ ಹಿಂದೆ ಬಗರ್​ಹುಕುಂ ಸಾಗುವಳಿದಾರರಿಗೂ ಎಕರೆ ಭೂಮಿಗೆ ಎರಡು ಲಕ್ಷ ರೂ. ಪರಿಹಾರವನ್ನು ಸಿಎಂ ನೀಡಿದ್ದರು. ಈಗ 25 ಎಕರೆ ಭೂಮಿ ನೀಡಿದ ರೈತರಿಗೆ ಪರಿಹಾರ ನೀಡಬೇಕಿದೆ. ಅವರಿಗೆ ಶೀಘ್ರವೇ ಸೂಕ್ತ ಪರಿಹಾರ ನೀಡಲು ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

    ಏನೇನು ಕಾಮಗಾರಿ? ವಿಮಾನ ನಿಲ್ದಾಣ ಕಾಮಗಾರಿಯನ್ನು ಎರಡು ಹಂತಗಳಲ್ಲಿ ಕೈಗೊಳ್ಳಲಾಗುತ್ತಿದ್ದು, ಪ್ರಥಮ ಹಂತದಲ್ಲಿ ರನ್​ವೇ, ಟ್ಯಾಕ್ಸಿ ವೇ, ಏಪ್ರಾನ್, ಪೂರಕ ಸಂಪರ್ಕ ರಸ್ತೆ, ಪೆರಿಫರಲ್ ರಸ್ತೆ ಹಾಗೂ ಕಾಂಪೌಂಡ್ ನಿರ್ವಣವಾಗಲಿದೆ. ಎರಡನೇ ಹಂತದಲ್ಲಿ ಟರ್ವಿುನಲ್ ಕಟ್ಟಡ, ಎಟಿಸಿ ಟವರ್, ಫೈರ್ ಸ್ಟೇಷನ್ ಕಟ್ಟಡ ನಿರ್ಮಾಣ ಕೈಗೊಳ್ಳಲಾಗುವುದು.

    ಕೈಗಾರಿಕೆಗಳಿಗೆ ಭೂಮಿ, ನೀರು, ವಿದ್ಯುತ್: ಶಿವಮೊಗ್ಗ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡುವವರಿಗೆ ಭೂಮಿ, ನೀರು, ವಿದ್ಯುತ್ ಸೇರಿದಂತೆ ಅಗತ್ಯ ಸೌಲಭ್ಯ ನೀಡುತ್ತೇವೆ. ಕೈಗಾರಿಕೋಧ್ಯಮಿಗಳು ಮುಂದೆ ಬಂದು ಇಲ್ಲಿ ಉದ್ಯಮ ಸ್ಥಾಪನೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಆಹ್ವಾನ ನೀಡಿದರು. ವಿಮಾನ ನಿಲ್ದಾಣ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿಮಾನ ನಿಲ್ದಾಣ ಕೈಗಾರಿಕೋದ್ಯಮಿಗಳಿಗೆ ಪೂರಕ ವಾತಾವರಣ ಕಲ್ಪಿಸಲಿದೆ. ದೇಶ, ವಿದೇಶಗಳ ಉದ್ಯಮಿಗಳು ಇಲ್ಲಿಗೆ ಬಂದು ತಮ್ಮ ಉದ್ಯಮವನ್ನು ವಿಸ್ತಾರ ಮಾಡಬೇಕು. ಮೂಲಕ ರಾಜ್ಯದ ಅಭಿವೃದ್ಧಿ ಜೊತೆಗೆ ಇಲ್ಲಿ ಉದ್ಯೋಗ ಅವಕಾಶ ಹೆಚ್ಚಿಸಬೇಕೆಂದರು.

    1998ರಲ್ಲೇ ಬಿಎಸ್​ವೈ ಚಿಂತನೆ: 2007ರಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಬಗ್ಗೆ ಬಿಎಸ್​ವೈ ಕ್ರಮ ಕೈಗೊಂಡಿದ್ದು ಎಲ್ಲರೂ ಬಲ್ಲ ಸಂಗತಿ. ಆದರೆ 1998ರಲ್ಲೇ ಯಡಿಯೂರಪ್ಪ ಇಂತಹದ್ದೊಂದು ಪ್ರಯತ್ನ ಮಾಡಿದ್ದರು. ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಈ ವಿಷಯ ತಿಳಿದ್ದಾರೆ. 1998ರಲ್ಲಿ ನಾನು ಲೋಕಸಭಾ ಸದಸ್ಯನಾಗಿದ್ದ ಅವಧಿಯಲ್ಲಿ ಅಂದಿನ ವಿಮಾನಯಾನ ಸಚಿವ ಅನಂತಕುಮಾರ್ ಅವರೊಂದಿಗೆ ಬಿಎಸ್​ವೈ ರ್ಚಚಿಸಿದ್ದ ಪರಿಣಾಮ ಕೇಂದ್ರ ಸರ್ಕಾರ ಜಿಲ್ಲೆಯಲ್ಲಿ ಮೂರು ಕಡೆ ಸ್ಥಳ ಪರಿಶೀಲನೆ ನಡೆಸಿತ್ತು. ಆದರೆ ಕೇಂದ್ರ ಸರ್ಕಾರ ಪಥನವಾದ ಕಾರಣ ಈ ಯೋಜನೆ ಕೈ ಬಿಡಲಾಗಿತ್ತು ಎಂದು ಆಯನೂರು ವಿಮಾನ ನಿಲ್ದಾಣ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಹೇಳಿದರು.

    ಬಿವೈಆರ್ ರೈಲ್ವೆ ಮಂತ್ರಿಯಾಗಲಿ: ಸಿಎಂ ಯಡಿಯೂರಪ್ಪ ಕಾಮಧೇನು, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಸುರಭಿ. ಕಾಮಧೇನು ಹಾಗೂ ಸುರಭಿ ಇರುವವರೆಗೂ ಜಿಲ್ಲೆಯ ಅಭಿವೃದ್ಧಿಗೆ ಸಮಸ್ಯೆಯಿಲ್ಲ. ಹೀಗೆಂದು ವ್ಯಾಖ್ಯಾನಿಸಿದ್ದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್. ಯಡಿಯೂರಪ್ಪ ಶಿವಮೊಗ್ಗ ಜಿಲ್ಲೆಗೆ ಎಲ್ಲವನ್ನೂ ನೀಡುವ ತವಕದಲ್ಲಿದ್ದರೆ, ಅವರ ಪುತ್ರ ಬಿ.ವೈ.ರಾಘವೇಂದ್ರ ಕೇಂದ್ರ ಸರ್ಕಾರದೊಂದಿಗೆ ಸತತವಾಗಿ ಸಂವಹನ ನಡೆಸಿ ಅನೇಕ ಯೋಜನೆ ತಂದಿದ್ದಾರೆ. ರೈಲ್ವೆ ಸಂಪರ್ಕದಲ್ಲಿ ಶಿವಮೊಗ್ಗ ಅಭೂತಪೂರ್ವ ಸಾಧನೆ ಮಾಡಿದೆ. ಸುರೇಶ್ ಅಂಗಡಿ ಬದಲು ಬಿ.ವೈ.ರಾಘವೇಂದ್ರ ರೈಲ್ವೆ ಸಚಿವರಾಗಬೇಕಿತ್ತು. ಮುಂದಿನ ದಿನಗಳಲ್ಲಿ ರಾಘವೇಂದ್ರಗೆ ಈ ಅವಕಾಶ ಒದಗಿಬರಲಿ ಎಂದು ಹೇಳಿದರು.

    ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕರಾದ ಆರಗ ಜ್ಞಾನೇಂದ್ರ, ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯರಾದ ಆರ್.ಪ್ರಸನ್ನಕುಮಾರ್, ಆಯನೂರು ಮಂಜುನಾಥ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಎಸ್ಪಿ ಕೆ.ಎಂ.ಶಾಂತರಾಜು, ಜಿಪಂ ಎಂ.ಎಲ್.ವೈಶಾಲಿ ಇತರರಿದ್ದರು. ಶಾಸಕ ಕೆ.ಬಿ.ಅಶೋಕ್ ನಾಯ್್ಕ ಅಧ್ಯಕ್ಷತೆ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts