More

    ವರ್ತಮಾನದ ಸಮಸ್ಯೆಗೆ “ಸತ್ಯಮೇವ ಜಯತೇ’ ಉತ್ತರ

    ಬೆಳಗಾವಿ: ಪೊಲೀಸ್​ ಎಂದರೆ ಭ್ರಮೆ ಅಲ್ಲ, ಬದುಕಿನ ಭರವಸೆ. ಪೊಲೀಸರು ಸುಖ&ಸಂತೋಷ ಬದಿಗಿಟ್ಟು ಕರ್ತವ್ಯ ನಿರ್ವಹಿಸುತ್ತಿರುವುದು ಶ್ಲಾನೀಯ ಎಂದು ಸಾಹಿತಿ ಡಾ.ಬಸವರಾಜ ಜಗಜಂಪಿ ಮೆಚ್ಚುಗೆ ವ್ಯಕ್ತಪಡಿಸಿದರು.

    ನಗರದ ಎಸ್​.ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಸೆಮಿನಾರ್​ ಹಾಲ್​ನಲ್ಲಿ ನಾಗನೂರು ರುದ್ರಾಮಠ ಹಾಗೂ ಶಂಕರ ಬಿದರಿ ಅಭಿಮಾನಿ ಬಳಗದಿಂದ ಸೋಮವಾರ ಆಯೋಜಿಸಿದ್ದ ನಿವೃತ್ತ ಪೊಲೀಸ್​ ಮಹಾನಿರ್ದೇಶಕ ಶಂಕರಿ ಬಿದರಿ ಅವರ ಆತ್ಮಚರಿತ್ರೆ “ಸತ್ಯಮೇವ ಜಯತೇ’ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಗ್ರಂಥ ಪರಿಚಯಿಸಿ ಮಾತನಾಡಿದರು.

    ಶಂಕರ ಬಿದರಿ ಅವರು ತಮ್ಮ “ಸತ್ಯಮೇವ ಜಯತೇ’ಗ್ರಂಥದಲ್ಲಿ ಬದುಕಿನ ಎಲ್ಲ ತತ್ವಗಳನ್ನು ಕಟ್ಟಿಕೊಟ್ಟಿದ್ದಾರೆ. 624 ಪುಟಗಳ ಬೃಹತ್​ ಗ್ರಂಥದಲ್ಲಿ ತಮ್ಮ ಹುಟ್ಟಿನಿಂದ ಇಲ್ಲಿಯವರೆಗೆ ಬದುಕಿನ ಎಲ್ಲ ಮಗ್ಗುಲಗಳನ್ನು ಮಾರ್ಮಿಕವಾಗಿ ವಿವರಿಸಿದ್ದಾರೆ. ಓದಿದವರು ಆತ್ಮಾವಲೋಕನ ಮಾಡಿಕೊಳ್ಳುವ ಹಾಗೆ ಗ್ರಂಥ ಮೂಡಿಬಂದಿದೆ. ವರ್ತಮಾನದ ಸಮಸ್ಯೆಗಳಿಗೆ ಗ್ರಂಥವು ಉತ್ತರವಾಗಿದೆ ಎಂದರು. ಶಂಕರಿ ಬಿದರಿ ಅವರು ಅಪರೂಪದ ಪೊಲೀಸ್​ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಕಾನೂನು ಪರಿಪಾಲನೆ ಮಾಡುವುದು ಎಂದರೆ ಧರ್ಮ ಪರಿಪಾಲನೆ ಮಾಡಿದಂತೆ ಎಂದು ಪ್ರತಿಪಾದಿಸುತ್ತ ಬಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಹಿರಿಯ ಸಾಹಿತಿ ಡಾ. ಸರಜೂ ಕಾಟ್ಕರ್​ ಮಾತನಾಡಿ, ಶಂಕರ ಬಿದರಿ ಅವರ ಆತ್ಮಚರಿತ್ರೆ ಯುವಕರಿಗೆ ಮಾರ್ಗದರ್ಶಿಯಾಗಿದೆ. ಹಳ್ಳಿಯಲ್ಲಿ ಹುಟ್ಟಿದ ಕನ್ನಡ ಮಾಧ್ಯಮದ ಯುವಕ ಪೊಲೀಸ್​ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿರುವುದು ಹೆಮ್ಮೆಯ ಸಂಗತಿ. ಸತ್ಯ ಮಾರ್ಗದಲ್ಲಿ ಸಾಗುವ ಪ್ರತಿಯೋಬ್ಬ ಯುವಕ ಗೆಲ್ಲಲು ಅವರ ಜೀವನ ಮಾದರಿಯಾಗಿದೆ. ಇಡೀ ಕರ್ನಾಟಕದ ಆಡಳಿತ, ರಾಜಕೀಯ ಕತೆಯನ್ನು ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ ಎಂದರು.

    ನಿವೃತ್ತ ಪೊಲೀಸ್​ ಮಹಾನಿರ್ದೇಶಕ ಶಂಕರಿ ಬಿದರಿ ಮಾತನಾಡಿ, ಈ ಹಿಂದೆ ಹಳ್ಳಿ ಅಭ್ಯರ್ಥಿಗಳು ಐಎಎಸ್​, ಐಪಿಎಸ್​ ಆಗುವುದು ವಿರಳವಾಗಿತ್ತು. ಪ್ರಸ್ತುತ ಪ್ರತಿ ವರ್ಷ ಗ್ರಾಮೀಣ ಪ್ರದೇಶದ ಸುಮಾರು 50 ಅಭ್ಯರ್ಥಿಗಳು ಐಎಎಸ್​, ಐಪಿಎಸ್​ಗಳಾತ್ತಿರುವುದು ಒಳ್ಳೆಯ ಬೆಳವಣಿಗೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಗ್ರಂಥ ಬರೆದಿದ್ದೇನೆ ಎಂದರು.

    ನನ್ನ ಇಡೀ ಜೀವನ ಪೊಲೀಸ್​ ಸೇವೆಯಲ್ಲೇ ಮುಂದುವರಿದಿದ್ದು ನನ್ನ ಸುದೈವ. ನನ್ನ ಸೇವಾವಧಿಯಲ್ಲಿ ಬೆಂಗಳೂರಿನಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ್ದೇವೆ. ಬೆಂಗಳೂರಿನಲ್ಲಿ ಆಗುತ್ತಿದ್ದ ಕಳ್ಳತನ ಪ್ರಕರಣಗಳಲ್ಲಿ
    ಶೇ. 90 ಚಿನ್ನಾಭರಣಗಳು ರಿಕವರಿ ಆಗುತ್ತಿದ್ದವು. ಅಷ್ಟೊಂದು ಪರಿಶ್ರಮದಿಂದ ಸೇವೆ ಸಲ್ಲಿಸಿದ್ದೇವೆ ಎಂದರು.

    ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸತ್ಯಮೇವ ಜಯತೇ ಕೃತಿ ಲೋಕಾರ್ಪಣೆಗೊಳಿಸಿದರು ನಾಗನೂರು ರುದ್ರಾ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ವಹಿಸಿದ್ದರು. ಕಡೋಲಿಯ ಗುರುಬಸವಲಿಂಗ ಸ್ವಾಮೀಜಿ, ಮುದಗಲ್ಲ ಮಹಾಂತ ಸ್ವಾಮೀಜಿ, ಕಮತೇನಹಟ್ಟಿಯ ಗುರುದೇವಾರ್ಯರು, ಪೊಲೀಸ್​ ಆಯುಕ್ತ ಡಾ. ಎಂ.ಬಿ. ಬೋರಲಿಂಗಯ್ಯ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ
    ಡಾ. ಸಂಜೀವ್​ಪಾಟೀಲ, ಬಿ.ಎಸ್​.ನೇಮಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts