More

    ಅಂಧ, ಅನಾಥರ ಪಾಲಿಗೆ ದೇವರು

    ಗಂಗಾವತಿ: ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಪಂ.ಡಾ.ಪುಟ್ಟರಾಜ ಗವಾಯಿಗಳಂತಹ ಮಹಾತ್ಮರನ್ನು ಪಡೆದಿದ್ದು ನಾಡಿನ ಪುಣ್ಯವಾಗಿದ್ದು, ಸಮಾಜಮುಖಿ ಚಟುವಟಿಕೆಗಳು ನಿತ್ಯ ಸ್ಮರಣೀಯವಾಗಿವೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

    ನಗರದ ಐಎಂಎ ಹಾಲ್‌ನಲ್ಲಿ ಡಾ.ಪುಟ್ಟರಾಜ ಗವಾಯಿಗಳ ಜನ್ಮದಿನ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಸಂಗೀತೋತ್ಸವ ಮತ್ತು ಪುಟ್ಟರಾಜ ಸಮ್ಮಾನ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಂಧ, ಅನಾಥರ ಪಾಲಿಗೆ ದೇವರಾಗಿದ್ದ ಗವಾಯಿಗಳು ಹಲವು ಭಾಷೆಗಳಲ್ಲಿ ಪರಿಣಿತರಾಗಿದ್ದರು. ಸ್ವತಃ ಸಂಗೀತ ಕಲಾವಿದರಾಗಿದ್ದು, ಅಮೂಲ್ಯ ಸಾಹಿತ್ಯಗಳು ಸಾಧಕರಿಗೆ ಪ್ರೇರಣೆಯಾಗಿವೆ. ಸಂಗೀತ ಕಲಿಸುವ ಮೂಲಕ ಅಪಾರ ಶಿಷ್ಯ ಬಳಗವನ್ನು ಸೃಷ್ಟಿಸಿದ್ದು, ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ಎಂದರು.

    ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಮಾತನಾಡಿ, ಪುಟ್ಟರಾಜ ಗವಾಯಿಗಳು ನಡೆದಾಡುವ ದೇವರಾಗಿದ್ದು, ಸಂಗೀತ ಮತ್ತು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಶ್ರೇಷ್ಟ ಸಂತ ಎಂದರು.

    ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಪುಟ್ಟರಾಜ ಸಮ್ಮಾನ್-2024 ಪ್ರಶಸ್ತಿಯನ್ನು ಸಂಗೀತ ಕಲಾವಿದ ಗದಗಿನ ಪಂ.ಡಾ.ರಾಜಗುರು ಗುರುಸ್ವಾಮಿ ಕಲಕೇರಿ ಅವರಿಗೆ 1 ಲಕ್ಷ ರೂ. ನಗದು ಮತ್ತು ಸ್ಮರಣಿಕೆಯೊಂದಿಗೆ ವಿತರಿಸಲಾಯಿತು.

    ಪ್ರತಿಷ್ಠಾನದ ಕಾರ್ಯ ಮತ್ತು ಪ್ರಶಸ್ತಿ ಕುರಿತು ಅಧ್ಯಕ್ಷ ಮಹಾಬಲೇಶ್ವರ ಹಾಸಿನಾಳ್ ಮಾಹಿತಿ ನೀಡಿದರು. ವೀರೇಶ್ವರ ಪುಣ್ಯಾಶ್ರಮದ ಸಂಚಾಲಕ ಡಾ.ಕಲ್ಲಯ್ಯಜ್ಜ, ಶಾಸಕ ಗಾಲಿ ಜನಾರ್ದನರೆಡ್ಡಿ, ಮಾಜಿ ಸಂಸದ ಎಸ್.ಶಿವರಾಮನಗೌಡ, ಮಾಜಿ ಸಚಿವ ಎಂ. ಮಲ್ಲಿಕಾರ್ಜುನ ನಾಗಪ್ಪ ಸೇರಿ ಪ್ರತಿಷ್ಠಾನದ ಪದಾಧಿಕಾರಿಗಳಿದ್ದರು. ನಂತರ ವಿವಿಧ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts