More

  ಬಿಜೆಪಿ ಪದಾಧಿಕಾರಿಗಳ ಪಟ್ಟಿ ವಿಸರ್ಜನೆಗೆ ಮಾಜಿ ಶಾಸಕ ಪಟ್ಟಣಶೆಟ್ಟಿ ಆಗ್ರಹ

  ಬಾದಾಮಿ: ಮೂರು ಬಾರಿ ಶಾಸಕರಾದ ನನಗೂ ಗಮನಕ್ಕೆ ತರದೆ ಬಿಜೆಪಿ ತಾಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು, ಇದಕ್ಕೆ ನಮ್ಮ ವಿರೋಧವಿದ್ದು, ಕೂಡಲೇ ವಿಸರ್ಜಿಸಬೇಕೆಂದು ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಆಗ್ರಹಿಸಿದರು.

  ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, 2023ರ ವಿಧಾನಸಭೆ ಚುನಾವಣೆಯಲ್ಲಿ ಮತ ವಿಭಜನೆಯಿಂದ ಬಿಜೆಪಿ ಅಭ್ಯರ್ಥಿಗೆ ಸೋಲಾಯಿತು. ಇದಕ್ಕೆ ನಮ್ಮ ಮೇಲೆ ಆರೋಪ ಮಾಡಿದರು. ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಕಳೆದ ಚುನಾವಣೆಯಲ್ಲಿ ಕೆಲವರ ಪಿತೂರಿಯಿಂದ ಟಿಕೆಟ್ ಆಯ್ಕೆ ಪ್ರಕ್ರಿಯೆಯಲ್ಲಿ ನಮ್ಮ ಹೆಸರು ಪರಿಗಣಿಸಲಿಲ್ಲ. ಇದರ ಹೊರತಾಗಿಯೂ ಬಿಜೆಪಿ ಪರ ಕೆಲಸ ಮಾಡಿದರೂ ನಮ್ಮ ಮೇಲೆ ಸುಮ್ಮನೆ ಆರೋಪ ಮಾಡಿದರು. ಕೆಲವು ಕಾರಣಾಂತರದಿಂದ ವರ್ಷದಿಂದ ತಟಸ್ಥರಾಗಿದ್ದೆವು. ಪಕ್ಷದ ಕೆಲವರು ನಮ್ಮ ಮನೆಗೆ ಬಂದು ಹಿರಿಯರ ಜತೆಗೆ ಮಾತಾಡಿ ಸರಿಪಡಿಸುತ್ತೇವೆ ಎಂದು ಹೇಳಿ ಹೋದವರು ಈಗ ಚುನಾವಣೆ ಬಂದಾಗ ಮಾತ್ರ ನಾವು ನೆನಪಾಗುತ್ತೇವೆ. ಪಕ್ಷಕ್ಕೆ ನಾವೂ ಎಂದೂ ಮೋಸ ಮಾಡಿಲ್ಲ. ಸಭೆ ಕರೆದು ಎಲ್ಲರನ್ನೂ ಕೂಡಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕಾಗಿತ್ತು ಎಂದರು.

  ನಮಗೂ ಬಿಜೆಪಿ ಬೆಳೆಯಬೇಕು. ಮೋದಿ ಪ್ರಧಾನಿಯಾಗಬೇಕೆಂಬ ಆಸೆ ಇದೆ. ಪಕ್ಷದ ಪ್ರಚಾರಕ್ಕೆ ಕರೆಯದಿದ್ದರೂ ಒಂದು ಮತ ಹಾಕಿ ಮನೆಯಲ್ಲಿರುತ್ತೇವೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರು ಬಾದಾಮಿಗೆ ಎರಡು ಬಾರಿ ಬಂದರೂ ಒಬ್ಬ ಮಾಜಿ ಶಾಸಕನಾದ ನನಗೂ ಮಾಹಿತಿ ನೀಡಿಲ್ಲ. ಬಾದಾಮಿ ಮತಕ್ಷೇತ್ರದಲ್ಲಿ ದ್ವೇಷ ರಾಜಕಾರಣ ನಡೆಯುತ್ತಿದೆ. ಇಂದು ಪಕ್ಷದಲ್ಲಿ ವಯಸ್ಸಾದರೂ ಟಿಕೆಟ್ ಕೊಡ್ತಾರೆ. ಇನ್ನು ಕೆಲವರಿಗೆ ಬೇಕಂತಲೇ ಟಿಕೆಟ್ ನೀಡಿಲ್ಲ. ಬಿಜೆಪಿಯಲ್ಲಿ ತತ್ವ ಸಿದ್ಧಾಂತ ಇಲ್ಲದಂತಾಗಿದೆ ಎಂದ ಅವರು, ಪಕ್ಷಕ್ಕೆ ದ್ರೋಹ ಆಗಬಾರದೆಂದು ಸುಮ್ಮನಿದ್ದೇವೆ. ದ್ರೋಹ ಮಾಡಬೇಕಾಗಿದ್ದರೆ ಇಷ್ಟೊತ್ತಿಗೆ ಕಾಂಗ್ರೆಸ್‌ನಲ್ಲಿ ಇರುತ್ತಿದ್ದೇವು ಎಂದು ಹೇಳಿದರು.

  ರಾಜ್ಯ ಎಸ್‌ಎಲ್‌ಡಿಪಿ ಉಪಾಧ್ಯಕ್ಷ ಮಹಾಂತೇಶ ಮಮದಾಪುರ ಮಾತನಾಡಿ, ಇತ್ತೀಚೆಗೆ ಹುಬ್ಬಳ್ಳಿ ಕೇಂದ್ರ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ, ಉಸ್ತುವಾರಿ ಲಿಂಗರಾಜ ಪಾಟೀಲ ಅವರನ್ನು ಭೇಟಿ ಮಾಡಿ ಮಾತಾಡಿದ್ದು, ಎಲ್ಲರೂ ಬಿಜೆಪಿ ಗೆಲುವಿಗೆ ಶ್ರಮಿಸೋಣ ಎಂದಿದ್ದಾರೆ. ನಮ್ಮ ಕೆಲ ಬೇಡಿಕೆಗಳನ್ನು ಅವರ ಬಳಿ ಹೇಳಿದ್ದು, ಇದಕ್ಕೆ ಸ್ಪಂದಿಸದಿದ್ದರೆ ನಮ್ಮ ಮತ ಹಾಕಿ ಮನೆಯಲ್ಲಿ ಕುಳಿತುಕೊಳ್ಳುತ್ತೇವೆ. ನಮ್ಮ ಪಕ್ಷದ ಕಾರ್ಯಕರ್ತರು 11 ವರ್ಷಗಳಿಂದ ತೊಂದರೆಯಲಿದ್ದಾರೆ. ನಮ್ಮಲ್ಲಿ ಒಗ್ಗಟ್ಟು ಇಲ್ಲದ್ದಕ್ಕೆ ಮತ ವಿಭಜನೆಗೆ ಕಾರಣ. ನಾವು ಮೂರು ಬಾರಿ ಅಧಿಕಾರ ಕಳೆದುಕೊಂಡೆವು. ಒಂದು ವರ್ಷದಿಂದ ಸುಮ್ಮನಿದ್ದು, ಈಗ ಚುನಾವಣೆ ಬಂದಾಗ ಕರೆಯುವುದು ಎಷ್ಟು ಸೂಕ್ತ? ಪಕ್ಷದ ಹಿರಿಯರು ಅಥವಾ ಸಂಸದ ಗದ್ದಿಗೌಡರ ಕೂತುಕೊಂಡು ಬಗೆಹರಿಸಬಹುದಾಗಿತ್ತು. ಮುಂಬರುವ ತಾಪಂ, ಜಿಪಂ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಗೆಲ್ಲಿಸಬೇಕಿದೆ.

  ನಮ್ಮ ಹಿಂದಿರುವ ಕಾರ್ಯಕರ್ತರನ್ನು ಕೈಬಿಡುವುದಿಲ್ಲ. ಸಕ್ರಿಯ ರಾಜಕಾರಣದಿಂದ ದೂರ ಇರುವುದಿಲ್ಲ. ಸಂಸದರು ಇಲ್ಲಿಯವರೆಗೂ ಬಂದು ಭೇಟಿಯಾಗಲಿಲ್ಲ. ಕಾರ್ಯಕರ್ತರಿಗೆ ತೊಂದರೆ ಆಗಬಾರದೆಂದು ಸುಮ್ಮನಿದ್ದೇವೆ. ಇದು ಹಿರಿಯರಿಗೆ ಅರ್ಥವಾಗುತ್ತಿಲ್ಲ. ಮೂರು ಬಾರಿ ಶಾಸಕರಾದವರು ಬಾದಾಮಿಯಲ್ಲಿ ಲೋಕಸಭೆ ಚುನಾವಣೆ ಸಭೆ ಮಾಡುವಾಗ ಇವರಿಗೆ ನೆನಪಿಗೆ ಬರಲಿಲ್ಲವೆ? ಪಕ್ಷದ ವಿರುದ್ಧ ಚಟುವಟಿಕೆ ಮಾಡಿದ್ದಾರೆ ಎಂದು ಹೇಳುತ್ತಾರೆ.

  ಕಳೆದ ವಿಧಾನಸಭೆ ಚುನಾವಣೆಯಲ್ಲಿ 55ಸಾವಿರ ಮತ ಬಿದ್ದಿವೆ, ಜೆಡಿಎಸ್‌ಗೆ 41 ಸಾವಿರ ಮತ ಬಿದ್ದಿವೆ. ಇಲ್ಲಿ ನಮ್ಮ ಮತ ವಿಭಜನೆಯಾಗಿದ್ದರಿಂದ ಪಕ್ಷಕ್ಕೆ ಸೋಲಾಗಿದೆ. ನಾವು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯಲ್ಲ. ಕಾರ್ಯಕರ್ತರ ಸಲುವಾಗಿ ಪ್ರಾಣ ಕೊಡಲು ಸಿದ್ಧ. 15 ವರ್ಷದದಿಂದ ಬಿಜೆಪಿ ಎಂಎಲ್‌ಎ ಇಲ್ಲ, ಟಿಕೆಟ್ ವಿಚಾರದಲ್ಲಿ ಅಸಮಾಧಾನ ಇರುವುದು ಸಹಜ. ಅದನ್ನು ಮರೆತು ಮತ್ತೆ ನಾವೆಲ್ಲರೂ ಪಕ್ಷಕ್ಕಾಗಿ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.

  ಕುಮಾರಗೌಡ ಜನಾಲಿ, ಅಡಿವೆಪ್ಪ ಡಾಣಕಶಿರೂರ, ಸಿದ್ದಣ್ಣ ಶಿವನಗುತ್ತಿ, ಸಿದ್ದನಗೌಡ ಪಾಟೀಲ, ಎನ್.ಎಸ್. ಬೊಮ್ಮನಗೌಡ್ರ, ಬಸವರಾಜ ಪಾಟೀಲ, ಕುಮಾರ ರೋಣದ, ವಿ.ಕೆ. ಬಾಗಲೆ, ಭೀಮಸೇನ ಪಾಟೀಲ, ಮುತ್ತು ಚಿನಿವಾಲರ, ಚನ್ನಪ್ಪ ಪಟ್ಟಣದ, ಸಿದ್ದಯ್ಯ ಹಿರೇಮಠ, ಶಿವರಾಜ ತುಪ್ಪದ, ಶಿವುಕುಮಾರ ಆಶಿ, ರಾಚಣ್ಣ ಪಟ್ಟಣದ ಇತರರಿದ್ದರು.

  ಮಾಜಿ ಸಚಿವ, ಹಾಲಿ ಶಾಸಕ ವಿನಯ ಕುಲಕರ್ಣಿ ಮತ್ತು ನಾನು ಕೂಡಿ ಬೆಳೆದವರು. ರಾಜಕಾರಣ ಬೇರೆ ಮತ್ತು ಸಂಬಂಧವೇ ಬೇರೆ. ಕೆಲವರು ವಿನಯ ಕುಲಕರ್ಣಿ ಅವರ ಮೂಲಕ ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎಂದು ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತು. ಬಿಜೆಪಿ ತತ್ವ ಸಿದ್ಧಾಂತಕ್ಕೆ ಬದ್ಧರಾದ ನಾವು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ.
  ಕುಮಾರಗೌಡ ಜನಾಲಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕರು ಬಾಗಲಕೋಟೆ
  ಹುಬ್ಬಳ್ಳಿ ಕೇಂದ್ರ ವಿಧಾನಸಭೆ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ, ವೀಕ್ಷಕ ಲಿಂಗರಾಜ ಪಾಟೀಲ ಅವರು ಸೋಮವಾರ ಸಂಜೆ ಸಂಧಾನಕ್ಕೆ ಆಗಮಿಸಲಿದ್ದು, ಅವರ ಜತೆಗೆ ಮಾತನಾಡುವೆವು. ಯುಗಾದಿ ಹಬ್ಬದ ನಂತರ ಏ.10 ಅಥವಾ 11 ರಂದು ನಮ್ಮ ಬೆಂಬಲಿಗರ ಸಭೆ ಕರೆದು ಮುಂದಿನ ನಿರ್ಧಾರ ತಿಳಿಸುತ್ತೇವೆ.
  ಎಂ.ಕೆ. ಪಟ್ಟಣಶೆಟ್ಟಿ, ಮಾಜಿ ಶಾಸಕ, ಮಹಾಂತೇಶ ಮಮದಾಪುರ ಮುಖಂಡ 

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts