More

    ವರುಣಾರ್ಭಟಕ್ಕೆ ಉಕ್ಕೇರಿದ ಕಾಳಿ, ಗಂಗಾವಳಿ

    ಕಾರವಾರ: ಘಟ್ಟದ ಮೇಲೆ ಸುರಿದ ಭಾರಿ ಮಳೆಗೆ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಸಂಭವಿಸಿದೆ. ಧಾರವಾಡ, ಬೆಳಗಾವಿ ಜಿಲ್ಲೆಯ ವಿವಿಧೆಡೆ ಹಾಗೂ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ, ದಾಂಡೇಲಿ, ಜೊಯಿಡಾ ಭಾಗದಲ್ಲಾಗುತ್ತಿರುವ ಭಾರಿ ಮಳೆಯಿಂದ ಗುರುವಾರ ಕಾಳಿ, ಗಂಗಾವಳಿ, ಅಘನಾಶಿನಿ ನದಿಗಳು ಉಕ್ಕೇರಿವೆ. ಪರಿಣಾಮ ಸಾಕಷ್ಟು ಗ್ರಾಮಗಳು ಮುಳುಗಡೆಯಾಗಿದ್ದು, ರಸ್ತೆಗಳು ಬಂದಾಗಿವೆ.

    ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಅರಬೈಲ್ ಘಟ್ಟದದಲ್ಲಿ ಗುಡ್ಡ ಕುಸಿದಿದೆ. ಅಂಕೋಲಾ ಸುಂಕಸಾಳ ಹೈಲ್ಯಾಂಡ್ ಹೋಟೆಲ್ ಬಳಿ 4 ಅಡಿ ನೀರು ನಿಂತಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಗಂಗಾವಳಿ ನದಿ ಪಾತ್ರದ ಗ್ರಾಮಗಳಿಗೆ ರಾತ್ರಿ ನೀರು ನುಗ್ಗಿ ಭಾರಿ ಅನಾಹುತ ಸಂಭವಿಸಲಿದೆ.

    ಅಣೆಕಟ್ಟೆಗಳಿಂದ ನೀರು ಹೊರಕ್ಕೆ :

    ಕಾಳಿ ಜಲವಿದ್ಯುತ್ ಯೋಜನೆಯ ಬೊಮ್ಮನಹಳ್ಳಿ ಜಲಾಶಯಕ್ಕೆ 44,533 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಗೇಟ್ ತೆರೆದು ಹಾಗೂ ವಿದ್ಯುತ್ ಉತ್ಪಾದನೆ ಮಾಡಿ ಒಟ್ಟು 17,455 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಕದ್ರಾ ಕೊಡಸಳ್ಳಿ ಅಣೆಕಟ್ಟೆಗೆ 48,638 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 9 ಗೇಟ್ ತೆರೆದು ಹಾಗೂ ವಿದ್ಯುತ್ ಉತ್ಪಾದನೆ ಮೂಲಕ ಒಟ್ಟು 39,711 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಕದ್ರಾ ಅಣೆಕಟ್ಟೆಗೆ 73526 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 8 ಗೇಟ್ ತೆರೆದು 59,106 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಪರಿಣಾಮ ಕಾಳಿ ನದಿಗೆ ಪ್ರವಾಹ ಬಂದಿದೆ. ಸಮೀಪದ ಸಾಕಳಿ ಹಳ್ಳದಲ್ಲಿ ನೀರು ಹೆಚ್ಚು ಬಂದು ಕದ್ರಾ ಲೇಬರ್ ಕಾಲನಿಗೆ ಈಗಾಗಲೇ ನೀರು ನುಗ್ಗಿದೆ. 45 ಮನೆಗಳಿಗೆ ನೀರು ನುಗ್ಗಿದ್ದು, ಕೆಪಿಸಿ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಎಲ್ಲರಿಗೂ ಊಟ, ತಿಂಡಿ ವ್ಯವಸ್ಥೆ ಮಾಡಲಾಗಿದೆ ಎಂದು ತಹಸೀಲ್ದಾರ್ ನಿಶ್ಚಲ್ ನರೋನಾ ತಿಳಿಸಿದ್ದಾರೆ.

    ಸಮುದ್ರದ ಉಬ್ಬರ ಇಳಿತ, ಅಣೆಕಟ್ಟೆಯ ಒಳ ಹರಿವನ್ನು ಗಮಿಸಿ ನೀರು ಬಿಡಲಾಗುತ್ತಿದೆ. ನಾಳೆ ಮಳೆ ಕಡಿಮೆ ಇರುವುದಾಗಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ವಿಶ್ವಾಸವಿದೆ.

    ವಿದ್ಯಾಶ್ರೀ ಚಂದರಗಿ ಎಸಿ, ಕಾರವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts