More

    ವರದಾ ನದಿ ಮಡಿಲಿಗೆ ಕನ್ನ!

    ಅಕ್ರಮ, ಮರಳು, ದಂಧೆ, ಅವ್ಯಾಹತ, ಅಧಿಕಾರಿಗಳು, ವರದಾ, ನದಿ, Illegal, sand, Officers, varada, river,

    ಅಕ್ಕಿಆಲೂರ: ವರದಾ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ, ಪೊಲೀಸರು ಮಾತ್ರ ಮೌನ ವಹಿಸಿರುವುದು ಸಾರ್ವಜನಿಕ ವಲಯದಲ್ಲಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

    ಅತಿವೃಷ್ಟಿಯಿಂದ ವರದಾ ನದಿ ತುಂಬಿ ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ಸದ್ಯ ಬಿರು ಬಿಸಿಲಿನ ಪರಿಣಾಮ ವರದಾ ನದಿ ಬರಿದಾಗಿದೆ. ಹೀಗಾಗಿ ನದಿ ಒಡಲು ಬಗಿಯಲು ಅಕ್ರಮ ದಂಧೆಕೋರರು ಕಾರ್ಯೋನ್ಮುಖರಾಗಿದ್ದಾರೆ. ಸಂಗೂರ, ಹೊಂಕಣ, ಮಲಗುಂದ, ಬಾಳಂಬೀಡ, ಹಿರೇಹುಲ್ಲಾಳದ ವರದಾ ನದಿ ಸೇತುವೆ ಕೆಳಗೆ ಟ್ರಾಕ್ಟರ್ ಮೂಲಕ ನಿರಂತರವಾಗಿ ಮರಳು ಅಗೆಯಲಾಗುತ್ತಿದೆ. ಕಳೆದ ವರ್ಷ ಭಾರಿ ಮಳೆಯಿಂದಾಗಿ ಕಳೆದ ವರ್ಷಕ್ಕಿಂತ ಅಧಿಕ ಮರಳು ಸಂಗ್ರಹವಾಗಿದೆ. ನದಿಯ ಒಡಲು ಬಗೆದು ಶುದ್ಧೀಕರಣ ಮಾಡುವುದು ಒಂದೆಡೆಯಾದರೆ, ಅದನ್ನು ಹೇರಿಕೊಂಡು ಹೋಗಲು ಸಾಲುಗಟ್ಟಲೇ ನಿಂತಿರುವ ಟ್ರ್ಯಾಕ್ಟರ್ ಹಾವಳಿ ಇನ್ನೊಂದೆಡೆ.

    ಪ್ರತಿ ಟ್ರಾಕ್ಟರ್ ಮರಳಿಗೆ 2500- 4000 ರೂ. ವರೆಗೆ ಮಾರಾಟ ಮಾಡಲಾಗುತ್ತಿದೆ. ಪೊಲೀಸರಿಗೆ ತಿಂಗಳು ಇಂತಿಷ್ಟು ಹಣ ನೀಡಿದರೆ ‘ಮಂಥ್ಲಿ ಟ್ರಾಕ್ಟರ್’ ಎಂದು ಪರಿಗಣಿಸಿ ಎಷ್ಟು ಬೇಕಾದರು ನದಿಯಲ್ಲಿ ಮರಳು ತುಂಬಿಕೊಳ್ಳಲು ಅನುಕೂಲ ಮಾಡಿಕೊಡಲಾಗುತ್ತಿದೆ. ಮರಳು ಹೇರಿಕೊಂಡು ಪೊಲೀಸ್ ಠಾಣೆಗಳ ಮುಂದೆಯೇ ಸಾಗಿದರೂ ಪೊಲೀಸರು ಪ್ರಶ್ನಿಸುವುದಿಲ್ಲ ಎಂದು ನದಿ ಪಾತ್ರದ ರೈತರು ಆರೋಪಿಸುತ್ತಿದ್ದಾರೆ.

    ಲಾಕ್ ಡೌನ್ ಹಿನ್ನೆಲೆಯಲ್ಲಿ ಹಾನಗಲ್ಲ ತಾಲೂಕಿನಾದ್ಯಂತ ಮರಳು ಇಲ್ಲದೆ ಸಾಕಷ್ಟು ಕಟ್ಟಡ ಕಾಮಗಾರಿಗಳು ಸ್ಥಗಿತಗೊಂಢಿವೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಟ್ರ್ಯಾಕ್ಟರ್ ಮಾಲೀಕರು ನಿರಂತರವಾಗಿ ನದಿ ಒಡಲು ಬಗೆಯುವ ಅಕ್ರಮ ದಂಧೆಗೆ ಇಳಿದಿದ್ದಾರೆ.

    ನಿರಂತರವಾಗಿ ನಿಯಮಬಾಹಿರವಾಗಿ ಮರಳು ಅಗೆಯುತ್ತಿರುವುದರಿಂದ ನದಿ ತನ್ನ ಮೂಲ ಸ್ವರೂಪವನ್ನೇ ಕಳೆದುಕೊಳ್ಳುತ್ತಿದೆ. ಬೃಹತ್ ಗುಂಡಿಗಳನ್ನು ತೋಡಲಾಗುತ್ತಿರುವುದರಿಂದ ಪಕ್ಕದ ಹೊಲಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೆ ಅಧಿಕಾರಿಗಳು ಅಕ್ರಮ ದಂಧೆಕೋರರ ಮೇಲೆ ಕ್ರಮಕ್ಕೆ ಮುಂದಾಗಬೇಕು ಎಂದು ರೈತರು ಆಗ್ರಹಿಸಿದ್ದಾರೆ.

    ಹಲ್ಲೆ ಆರೋಪ: ಮರಳು ತುಂಬುವ ಭರದಲ್ಲಿ ನದಿಗಳಿಗೆ ಹತ್ತಿಕೊಂಡಿರುವ ಹೊಲದ ದಂಡೆಗಳನ್ನೇ ಕೊರೆಯುತ್ತಿರುವ ದಂಧೆಕೋರರನ್ನು ರೈತರು ಪ್ರಶ್ನಿಸಿದರೆ, ಅವರ ಮೇಲೆಯೇ ಹಲ್ಲೆ ಮಾಡಲು ಮುಂದಾಗುತ್ತಿದ್ದಾರೆ. ಗುರುವಾರ ರಾತ್ರಿ ಬಾಳಂಬೀಡದ ವರದಾ ನದಿಯಲ್ಲಿ ತನ್ನ ಹೊಲದ ದಂಡೆಗಳನ್ನು ಒಡೆದಿದ್ದಕ್ಕೆ ಪ್ರಶ್ನಿಸಿದ ಅರೇಲಕ್ಮಾಪುರ ಗ್ರಾಮದ ಶ್ರೀಕಾಂತ ಮೊರೆ ಎಂಬ ರೈತನ ಮೇಲೆ ದಂಧೆಕೊರರು ಹಲ್ಲೆ ಮಾಡಿದ್ದಾರೆ. ಬಟ್ಟೆಗಳನ್ನು ಹರಿದು ಬೆದರಿಕೆ ಹಾಕಿದ್ದಾರೆ ಎಂಬುದು ತಿಳಿದುಬಂದಿದೆ.

    ಮರಳು ಉಸುಕು ಸಾಗಾಣಿಕೆ ಬಗ್ಗೆ ಮಾಹಿತಿ ಇರಲಿಲ್ಲ. ಶೀಘ್ರ ತಂಡಗಳನ್ನು ರಚಿಸಿ ಬಾಳಂಬೀಡ, ಹಿರೇಹುಲ್ಲಾಳ ಮತ್ತು ಹೊಂಕಣ ವ್ಯಾಪ್ತಿಯಲ್ಲಿ ನಡೆಯುವ ಗಣಿಗಾರಿಕೆ ಕುರಿತು ತನಿಖೆ ಮಾಡಲಾಗುವುದು. ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ ಕಾರ್ಯಪ್ರವೃತ್ತರಾಗಲು ಸೂಚಿಸುತ್ತೇನೆ.
    | ಪಿ.ಎಸ್. ಎರಿಸ್ವಾಮಿ, ತಹಸೀಲ್ದಾರ್ ಹಾನಗಲ್ಲ

    ನದಿಯಲ್ಲಿನ ಮರಳು ಅಗೆಯಲು ಹೋಗಿ ರೈತರ ಹೊಲಕ್ಕೆ ಹಾನಿ ಮಾಡಲಾಗುತ್ತಿದೆ. ಅಧಿಕಾರಿಗಳು ಅಕ್ರಮ ಮರಳು ಸಾಗಾಣಿಕೆ ಬಗ್ಗೆ ಗಮನ ಹರಿಸಬೇಕು. ಇಲ್ಲವಾದರೆ ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಕೃಷಿ ಸಚಿವರಿಗೆ ದೂರು ನೀಡುತ್ತೇವೆ.
    | ಮಹೇಶ ವಿರುಪಣ್ಣನವರ, ಅಧ್ಯಕ್ಷ, ಅಕ್ಕಿಆಲೂರ ರೈತ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts