More

    ವರದಕ್ಷಿಣೆ ಕಿರುಕುಳ ಕೊಟ್ಟವರಿಗೆ ಜೈಲು ಶಿಕ್ಷೆ

    ಮೈಸೂರು: ವರದಕ್ಷಿಣೆ ಕಿರುಕುಳ ನೀಡಿ ಮಹಿಳೆಯ ಸಾವಿಗೆ ಕಾರಣರಾದ ಆಕೆಯ ಗಂಡ, ಅತ್ತೆ, ಮಾವ ಮತ್ತು ಸಂಬಂಧಿಕರಿಗೆ ಏಳು ವರ್ಷ ಕಠಿಣ ಶಿಕ್ಷೆ ವಿಧಿಸಿ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.


    ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮದ ಮೇಘಾ ಮೃತರು. ಅದೇ ಗ್ರಾಮದ ಪತಿ ಸೋಮ ಅಲಿಯಾಸ್ ಹರೀಶ್, ಮಾವ ಈರಣ್ಣ, ಅತ್ತೆ ಸುಧಾಮಣಿ, ಸಂಬಂಧಿಗಳಾದ ಮಹದೇವಸ್ವಾಮಿ, ಮೂರ್ತಿ ಶಿಕ್ಷೆಗೆ ಗುರಿಯಾದವರು. ಜೈಲು ಶಿಕ್ಷೆಯೊಂದಿಗೆ 15 ಸಾವಿರ ರೂ. ದಂಡ ವಿಧಿಸಿಸಲಾಗಿದೆ. ಈ ಹಣದಲ್ಲಿ 10 ಸಾವಿರ ರೂ.ಗಳನ್ನು ಮೃತಳ ತಂದೆಗೆ ನೀಡುವಂತೆ ಆದೇಶಿಸಲಾಗಿದೆ.


    ಒಂದೇ ಗ್ರಾಮದವರಾದ ಎಚ್.ಎನ್.ಮಹದೇವಸ್ವಾಮಿ ಮತ್ತು ವೀಣಾ ದಂಪತಿಯ ಪುತ್ರಿ ಮೇಘಾ ಮತ್ತು ಸೋಮ ಪ್ರೀತಿಸಿ ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾಗಿದ್ದರು. ಬಳಿಕ ಗಂಡನ ಮನೆಯವರು ವರದಕ್ಷಿಣೆಗಾಗಿ ಪೀಡಿಸಿದ್ದಾರೆ. ಅದ್ದೂರಿ ಮದುವೆಯ ಖರ್ಚು ಉಳಿದಿರುವುದರಿಂದ 5 ಲಕ್ಷ ರೂ. ಮತ್ತು ತಂದೆ ಮಾಡಿಸಿದ್ದ ಚಿನ್ನದ ಒಡವೆ ತರುವಂತೆ, ತಂದೆಯ ಮನೆಯನ್ನು ನಿನ್ನ ಹೆಸರಿಗೆ ಬರೆಸಿಕೊಳ್ಳಬೇಕೆಂದು ಕಿರುಕುಳ ನೀಡಿದ್ದಾರೆ.

    ಈ ಕುರಿತು ಗ್ರಾಮದಲ್ಲಿ ನ್ಯಾಯ ಪಂಚಾಯಿತಿಯೂ ಆಗಿತ್ತು. ಆಗ ಮೇಘಾಳ ತಂದೆ ಮಕ್ಕಳ ವಿದ್ಯಾಭ್ಯಾಸ ಮತ್ತು ಮದುವೆ ಬಳಿ ಮೂರು ಮಕ್ಕಳಿಗೆ ಆಸ್ತಿಯನ್ನು ಭಾಗ ಮಾಡಿಸಿಕೊಡುವುದಾಗಿ ತಿಳಿಸಿ, ಅಲ್ಲಿಯವರೆಗೂ ಮಗಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ವಿನಂತಿಸಿದ್ದರು. ಆದರೆ, ಮತ್ತೆ ವರದಕ್ಷಿಣೆಗಾಗಿ ಮಾನಸಿಕ, ದೈಹಿಕವಾಗಿ ಹಿಂಸೆ ನೀಡಿದ್ದರಿಂದ ಮನನೊಂದು ಮೇಘಾ, 2017ರ ಏಪ್ರಿಲ್ 25ರಂದು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

    ಈ ಕುರಿತು ಪ್ರಕರಣ ದಾಖಲಿಸಿಕೊಂಡ ಜಯಪುರ ಠಾಣೆಯ ಪೊಲೀಸರು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಮಲ್ಲಿಕಾರ್ಜು ಅವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ನಾಗಪ್ಪ ಸಿ. ನಾಕಮನ್ ವಾದ ಮಂಡಿಸಿದ್ದರು. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts