More

    ಲೀಟರ್ ನೀರಿಗಿಂತ ಹಾಲಿನ ದರ ಕಡಿಮೆ, ಬೆಲೆ ಕಡಿತದಿಂದ ರೈತರಿಗೆ ನಷ್ಟ, ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಬೇಸರ

    ಬಾಗೇಪಲ್ಲಿ: ಐಷಾರಾಮಿ ಹೋಟೆಲ್‌ನಲ್ಲಿ 1 ಲೀಟರ್ ನೀರಿನ ಬೆಲೆ 120 ರೂ.ಗಳು, ಆದರೆ ರೈತ ದಿನವಿಡೀ ಕಷ್ಟಪಟ್ಟು ಸಂಪಾದಿಸುವ ಲೀಟರ್ ಹಾಲಿಗೆ 25 ರೂ. ನಿಗದಿ ಮಾಡಿರುವುದು ವಿಪರ್ಯಾಸ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಬೇಸರ ವ್ಯಕ್ತಪಡಿಸಿದರು.

    ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಸಹಕಾರದಲ್ಲಿ ನಿರ್ಮಿಸಲಾಗಿರುವ ತಾಲೂಕಿನ ಪುಟ್ಟಪರ್ತಿಯ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ಹಾಲಿನ ಖರೀದಿ ಬೆಲೆ ಕಡಿಮೆ ಮಾಡಿರುವುದರಿಂದ ರೈತರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ ಎಂದರು.

    ಸರ್ಕಾರಿ ಸಹಕಾರ ಸಂಘಗಳು ಸದೃಢವಾದರೆ ರೈತರು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿದೆ, ಈ ನಿಟ್ಟಿನಲ್ಲಿ ರೈತರು ಖಾಸಗಿ ಸಹಕಾರ ಸಂಘಗಳಲ್ಲಿ ವ್ಯವಹರಿಸುವುದನ್ನು ನಿಲ್ಲಿಸಬೇಕು. ಮತ್ತಷ್ಟು ಕಾಳಜಿವಹಿಸಿ ಹೈನುಗಾರಿಕೆ ಮಾಡುವ ಜತೆಗೆ ಹಸುಗಳಿಗೆ ವಿಮೆ ಮಾಡಿಸಬೇಕು, ಇದರಿಂದ ಭವಿಷ್ಯದಲ್ಲಿ ಎದುರಾಗಬಹುದಾದ ನಷ್ಟದಿಂದ ಪಾರಾಗಬಹುದು ಎಂಬ ಸಲಹೆ ನೀಡಿದರು.

    ತಾಲೂಕು ವ್ಯಾಪ್ತಿಯ 8 ಸರ್ಕಾರಿ ಶಾಲೆಗಳಿಗೆ ಉಚಿತ ಕಂಪ್ಯೂಟರ್, 3800 ಹಾಲು ಉತ್ಪಾದಕರಿಗೆ ದಿನಸಿ ಕಿಟ್, 24 ಮಹಿಳಾ ಸಂಘಗಳಿಗೆ ಪೀಠೋಪಕರಣಗಳು, 2.5 ಲಕ್ಷ ರೂ. ಬೋನಸ್ ಚೆಕ್ ಹಾಗೂ ಪೆದ್ದರೆಡ್ಡಿಪಲ್ಲಿ ಡೈರಿ ಕಟ್ಟಡ ನಿರ್ಮಾಣಕ್ಕೆ 1.5 ಲಕ್ಷ ರೂ. ನೆರವಿನ ಚೆಕ್ ನೀಡಲಾಯಿತು.

    ಕೋಚಿಮಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾದ ಶ್ರೀನಿವಾಸರೆಡ್ಡಿ, ಡಾಬ ಅನಂದ್, ಕೆಪಿಸಿಸಿ ಸದಸ್ಯ ಅಮರನಾಥರೆಡ್ಡಿ, ಡೈರಿ ಅಧ್ಯಕ್ಷ ಅಂಜಿನಪ್ಪ, ಕಚೇರಿ ಉಪ ವ್ಯವಸ್ಥಾಪಕ ಪುಣ್ಯಕೋಟಿ, ಕೆಂಪರಾಜು, ವಿಸ್ತರಣಾಧಿಕಾರಿ ಮುನಿಸ್ವಾಮಿರೆಡ್ಡಿ, ಶೋಭಾ, ನಾಗರಾಜು, ಮುಖಂಡರಾದ ಗೊರ್ತಪಲ್ಲಿ ಶಂಕರರೆಡ್ಡಿ ಮತ್ತಿತರರು ಇದ್ದರು.

    40 ರೂ. ಕೊಟ್ಟರೂ ಲಾಭವಿಲ್ಲ: ಲಾಕ್‌ಡೌನ್‌ನಿಂದಾಗಿ ಹಾಲಿನ ಉತ್ಪನ್ನಗಳ ಮಾರಾಟ ಗಣನೀಯವಾಗಿ ಇಳಿಕೆಯಾಗಿದೆ, ಕೋಚಿಮುಲ್ ನಷ್ಠದ ಹಾದಿಯಲ್ಲಿರುವುದರಿಂದ ಹಾಲಿನ ಖರೀದಿ ಬೆಲೆಯನ್ನು ಮಾಡಲಾಗಿದೆ. 1 ಲೀಟರ್‌ಗೆ 40 ರೂ. ನಿಗದಿ ಮಾಡಿದರೂ ರೈತರಿಗೆ ನಷ್ಟವೇ ಹೋರತು ಲಾಭ ದೊರೆಯುವುದಿಲ್ಲ. ಮುಂದಿನ ದಿನಗಳಲ್ಲಿ ಹಾಲು ಉತ್ಪಾದಕರಿಗೆ ನ್ಯಾಯ ಒದಗಿಸಲಾಗುವುದು ಎಂದು ಕೋಚಿಮುಲ್ ನಿರ್ದೇಶಕ ವಿ.ಮಂಜುನಾಥರೆಡ್ಡಿ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts