More

    ಲಿಂಗರಾಜನಿಗೆ ಜೀವಾವಧಿ ಶಿಕ್ಷೆ, ದಂಡ

    ರಾಣೆಬೆನ್ನೂರ: ನಗರದ ಮಾಗೋಡ ರಸ್ತೆಯ ಕೆಎಸ್​ಆರ್​ಟಿಸಿ ಡಿಪೋದಲ್ಲಿ ನಿಂತಿದ್ದ ಬಸ್​ನಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಬಸ್ ಸಮೇತ ಸುಟ್ಟು ಹಾಕಿದ ಪ್ರಕರಣದ ಅಪರಾಧಿಗೆ ಜೀವಾವಧಿ ಶಿಕ್ಷೆ, 11 ಸಾವಿರ ರೂ. ದಂಡ ಹಾಗೂ ಬಸ್ ಸುಟ್ಟಿದ್ದಕ್ಕೆ 8,30,554 ರೂ. ಪರಿಹಾರ ನೀಡಲು ಆದೇಶಿಸಿ ಇಲ್ಲಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಎಸ್. ಜ್ಯೋತಿಶ್ರೀ ಮಂಗಳವಾರ ತೀರ್ಪು ನೀಡಿದ್ದಾರೆ.

    ಹಿರೇಕೆರೂರ ತಾಲೂಕಿನ ಅಂಗರಗಟ್ಟಿ ಗ್ರಾಮದ ನಿವಾಸಿ ಹಾಗೂ ಡಿಪೋ ಕಾವಲುಗಾರನಾಗಿದ್ದ ಲಿಂಗರಾಜ ಪಾಲಾಕ್ಷಪ್ಪ ಬೆಳಗುತ್ತಿ (35) ಶಿಕ್ಷೆಗೊಳಗಾದ ಅಪರಾಧಿ. ಲಿಂಗರಾಜನ ಸಂಬಂಧಿ ಚನ್ನಪ್ಪ ಬಸವಣ್ಣೆಪ್ಪ ಬೆಳಗುತ್ತಿ ಕೊಲೆಗೀಡಾದ ವ್ಯಕ್ತಿ.

    ಘಟನೆ ಹಿನ್ನೆಲೆ: ಚನ್ನಪ್ಪ ಬೆಳಗುತ್ತಿ ಅತ್ಯಾಚಾರಕ್ಕೆ ಯತ್ನಿಸಿದ್ದ ಎಂದು ಲಿಂಗರಾಜನ ಪತ್ನಿ ಹೇಳಿಕೊಂಡಿದ್ದಳು. ಬಳಿಕ ‘ಈ ರೀತಿ ಮಾಡುವುದು ಸರಿಯಲ್ಲ’ ಎಂದು ಚನ್ನಪ್ಪನಿಗೆ ಲಿಂಗರಾಜ ಬುದ್ಧಿವಾದ ಹೇಳಿದ್ದ. ಆದರೂ ಚನ್ನಪ್ಪ ಹಳೇ ಚಾಳಿಯನ್ನೇ ಮುಂದುವರಿಸಿದ್ದ.

    ಇದರಿಂದ ಕೋಪಗೊಂಡಿದ್ದ ಲಿಂಗರಾಜ 2017, ಜ.1ರಂದು ಬೆಳಗಿನ ಜಾವ ಚನ್ನಪ್ಪನನ್ನು ಕೆಎಸ್​ಆರ್​ಟಿಸಿ ಡಿಪೋಗೆ ಕರೆದುಕೊಂಡು ಬಂದು ಕುತ್ತಿಗೆಗೆ ಪಂಚೆಯಿಂದ ಬಿಗಿದು ಕೊಲೆ ಮಾಡಿದ್ದ. ನಂತರ ಶವವನ್ನು ಬಸ್​ನಲ್ಲಿಟ್ಟು ಬೆಂಕಿ ಹಚ್ಚಿ ಅಲ್ಲಿಂದ ನಾಪತ್ತೆಯಾಗಿದ್ದ.

    ಈ ಕುರಿತು ಹಲಗೇರಿ ಠಾಣೆ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಸದಾನಂದ ಶಿರೂರ ವಾದ ಮಂಡಿಸಿದ್ದರು.

    ದಿಕ್ಕು ತಪ್ಪಿಸಿದ್ದ ಲಿಂಗರಾಜ: ಲಿಂಗರಾಜನನ್ನೇ ಕೊಲೆ ಮಾಡಿ ಬಸ್​ನಲ್ಲಿ ಸುಟ್ಟು ಹಾಕಲಾಗಿದೆ ಎಂದು ಜನ ನಂಬಿದ್ದರು. ಆದರೆ, ಲಿಂಗರಾಜ ಕೊಲೆ ಮಾಡಿದ ಬಳಿಕ ಪುಣೆಗೆ ಹೋಗಿದ್ದ. ಸಾರಿಗೆ ಸಂಸ್ಥೆ ಅಧಿಕಾರಿಗಳು ಆತನ ಕುಟುಂಬಕ್ಕೆ ಎಲ್ಲ ರೀತಿಯ ಪರಿಹಾರನ್ನೂ ನೀಡಿದ್ದರು. ತನಿಖೆ ಚುರುಕುಗೊಳಿಸಿದ ಪೊಲೀಸರು ಲಿಂಗರಾಜನ ತಾಯಿ, ಸಹೋದರರು ಹಾಗೂ ಪುತ್ರನ ರಕ್ತದ ಮಾದರಿಯನ್ನು ಡಿಎನ್​ಎ ಪರೀಕ್ಷೆಗೆ ಕಳುಹಿಸಿದ್ದರು. ಆದರೆ, ಇವರ ರಕ್ತದ ಮಾದರಿ ಲಿಂಗರಾಜನಿಗೆ ಹೋಲಿಕೆಯಾಗಿರಲಿಲ್ಲ. ಇದರಿಂದಾಗಿ ಬಸ್​ನಲ್ಲಿ ಮೃತಪಟ್ಟಿರುವುದು ಲಿಂಗರಾಜ ಅಲ್ಲ ಎಂಬುದು ದೃಢಪಟ್ಟಿತ್ತು. ಪೊಲೀಸರು ಲಿಂಗರಾಜನ ಪತ್ನಿಯನ್ನು ಕರೆಯಿಸಿ ತೀವ್ರ ವಿಚಾರಣೆಗೊಳಪಡಿಸಿದ್ದರು. ವಿಷಯ ಗೊತ್ತಾಗಿ ಲಿಂಗರಾಜ 2017, ಅಗಸ್ಟ್ 14ರಂದು ಸ್ವತಃ ಬಂದು ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts