More

    ಲಸಿಕೆಗಾಗಿ ಮುಗಿಬಿದ್ದ ಸಾರ್ವಜನಿಕರು

    ಶಿರಸಿ: ಕೋವಿಡ್ 2ನೇ ಲಸಿಕೆಗಾಗಿ ಲಸಿಕಾ ಕೇಂದ್ರದಲ್ಲಿ ನೂಕುನುಗ್ಗಲು ನಡೆದಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಸ್ಪರ ಅಂತರ ಕಾಪಾಡಿಕೊಳ್ಳುವಂತೆ ತಿಳಿ ಹೇಳಿದರೂ ಕದಲದ ಸಾರ್ವಜನಿಕರು ಲಸಿಕೆಗಾಗಿ ಕಾದು ಸುಸ್ತಾದ ಘಟನೆ ಸೋಮವಾರ ನಡೆದಿದೆ.
    ನಗರದ ಮಾರಿಕಾಂಬಾ ಸರ್ಕಾರಿ ಪದವಿಪೂರ್ವ ಕಾಲೇಜ್​ನಲ್ಲಿ ಬೆಳಗ್ಗೆ 300 ಡೋಸ್ ಲಸಿಕೆ ಲಭ್ಯವಿತ್ತು. ಆದರೆ, ಲಸಿಕೆ ಪಡೆಯಲು 1500 ಜನರು ಆಗಮಿಸಿದ್ದರು. ತಮಗೆಲ್ಲಿ ಲಸಿಕೆ ಸಿಗುವುದಿಲ್ಲವೋ ಎಂಬ ಆತಂಕದಲ್ಲಿ ಸಾರ್ವಜನಿಕರು ಕೋವಿಡ್ ನಿಯಮಾವಳಿ ಗಾಳಿಗೆ ತೂರಿದ್ದರು. ಆರೋಗ್ಯ ಸಿಬ್ಬಂದಿ ತಿಳಿ ಹೇಳಿದರೂ ಪ್ರಯೋಜನವಾಗದ ಕಾರಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಗೊಂದಲ ನಿವಾರಿಸಲು ಹರಸಾಹಸಪಟ್ಟರು. ಆದರೆ, ಸಾರ್ವಜನಿಕರು ಲಸಿಕೆಗಾಗಿ ಪಟ್ಟುಹಿಡಿದು ಗಂಟೆಗಳವರೆಗೆ ಕಾದು ಸುಸ್ತಾಗಿ ಮನೆಗೆ ತೆರಳಿದರು.
    ಈ ಮೊದಲು 1ನೇ ಡೋಸ್ ಪಡೆದು 2ನೇ ಡೋಸ್​ಗಾಗಿ ಲಸಿಕಾ ಕೇಂದ್ರಕ್ಕೆ ಬಂದಿದ್ದೇವು. ಲಸಿಕೆ ಪಡೆದು ಅವಧಿ ಮೀರಿದರೂ ಲಸಿಕೆ ಸಿಗುತ್ತಿಲ್ಲ. ಆರೋಗ್ಯ ಸಿಬ್ಬಂದಿ ದಿನವೂ ಲಸಿಕೆ ಕೊರತೆಯ ಕಾರಣ ನೀಡುತ್ತಿದ್ದಾರೆ ಎಂದು ಹಲವು ಸಾರ್ವಜನಿಕರು ಬೇಸರದಿಂದ ದೂರಿದರು.

    2ನೇ ಹಂತದ ಲಸಿಕೆ 300ರಷ್ಟು ಸಂಗ್ರಹವಿತ್ತು. ಆದರೆ, 1500 ಜನರು ಬಂದಿದ್ದರು. ಟೋಕನ್ ಇದ್ದವರು ಮಾತ್ರ ಬನ್ನಿ ಎಂದರೆ ಯಾರೂ ಕೇಳಲಿಲ್ಲ. ಹಾಗಾಗಿ ಸ್ವಲ್ಪ ಸಮಯ ಗೊಂದಲ ಉಂಟಾಗಿತ್ತು.
    | ವಿನಾಯಕ ಭಟ್ಟ, ತಾಲೂಕು ಆರೋಗ್ಯಾಧಿಕಾರಿ ಶಿರಸಿ


    ಅಂಕೋಲಾದಲ್ಲೂ ನೂಕುನುಗ್ಗಲು
    ಅಂಕೋಲಾ:
    ಪಟ್ಟಣದ ಸತ್ಯಾಗ್ರಹ ಸ್ಮಾರಕ ಸಭಾಭವನದಲ್ಲಿ ಸೋಮವಾರ 200 ಜನರಿಗೆ ಆಗುವಷ್ಟು ಕೋವಿಡ್ ವ್ಯಾಕ್ಸಿನ್ ನೀಡಲು ವ್ಯವಸ್ಥೆ ಮಾಡಲಾಗಿತ್ತು. ಆದರೆ, 400ಕ್ಕೂ ಅಧಿಕ ಜನರು ಆಗಮಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು. ಪೊಲೀಸರ ಮಧ್ಯೆ ಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿತು.
    ವಾಕ್ಸಿನ್ ಪಡೆಯಲು ಜನರು ನಾಮುಂದು ತಾಮುಂದು ಎಂದು ನುಗ್ಗಿದ್ದರಿಂದಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿ ಜನರನ್ನು ನಿಯಂತ್ರಿಸಲಾಗದೆ ನಂತರ ಪಿಎಸ್​ಐ ಪ್ರವೀಣಕುಮಾರ ಆರ್., ಮತ್ತು ಸಿಬ್ಬಂದಿ ನಿಯಂತ್ರಿಸಿದರು.
    ಬೆಳಗ್ಗೆ 5.30 ಗಂಟೆಗೆ ಸತ್ಯಾಗ್ರಹ ಸ್ಮಾರಕ ಭವನಕ್ಕೆ ಜನರು ಆಗಮಿಸಿ ಹೆಸರು ನೋಂದಾಯಿಸಿದ್ದರು. ಆದರೆ, 200 ಜನರು ಮಾತ್ರ ವ್ಯಾಕ್ಸಿನ್ ಪಡೆದುಕೊಂಡರು. ಇನ್ನುಳಿದವರಿಗೆ ಚುಚ್ಚುಮದ್ದು ಸಿಗಲಿಲ್ಲ.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts