More

    ಲತಾಕುಮಾರಿ ವರ್ಗಾವಣೆ ಕೈಬಿಡಲು ಆಗ್ರಹ -ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಪ್ರತಿಭಟನೆ

    ದಾವಣಗೆರೆ: ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಿರ್ದೇಶಕಿ ಲತಾಕುಮಾರಿ ಅವರ ವರ್ಗಾವಣೆ ಪ್ರಸ್ತಾವ ಕೈಬಿಡಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಂ.ಆರ್.ಡಬ್ಲುೃ, ಯು.ಆರ್.ಡಬ್ಲುೃ ಹಾಗೂ ವಿಆರ್‌ಡಬ್ಲುೃ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
    ವಿಕಲಚೇತನರ ಹಾಗೂ ವಿವಿಧೋದ್ದೇಶ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ರಾಜ್ಯ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಡಿಸಿ ಶಿವಾನಂದ ಕಾಪಶಿ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
    ಲತಾಕುಮಾರಿ, ಜಿಡ್ಡುಗಟ್ಟಿದ ಆಡಳಿತ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತಂದು ಇಲಾಖೆಯಲ್ಲಿ ಪಾರದರ್ಶಕತೆ ತಂದಿದ್ದಾರೆ. ವಿಕಲಚೇತನರ ಕಲ್ಯಾಣ ಯೋಜನೆಗಳಡಿ ಕೆಲವು ಸಂಸ್ಥೆಗಳ ಹಗಲು ದರೋಡೆಗೆ ಬ್ರೇಕ್ ಹಾಕಿದ್ದಾರೆ. ಇದರಿಂದ ಅಸಮಾಧಾನಗೊಂಡ ಕೆಲವು ಅಧಿಕಾರಿ-ಸಿಬ್ಬಂದಿ ಅವರ ವರ್ಗಾವಣೆ ಚಿತಾವಣೆಗೆ ಕೈ ಜೋಡಿಸಿದ್ದಾರೆ. ಮುಖ್ಯಮಂತ್ರಿಗಳು ಇವರನ್ನು ನಿರ್ದೇಶಕರ ಹುದ್ದೆಯಲ್ಲೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.
    ರಾಜ್ಯದಲ್ಲಿ 6424 ಮಂದಿ ಎಂ.ಆರ್.ಡಬ್ಲುೃ, ಯು.ಆರ್.ಡಬ್ಲುೃ ಹಾಗೂ ವಿಆರ್‌ಡಬ್ಲುೃ ಕಾರ್ಯಕರ್ತರು ಗ್ರಾಮೀಣ ಪುನರ್ವಸತಿ ಯೋಜನೆಯಡಿ 15 ವರ್ಷದಿಂದ ವಿಕಲಾಂಗರಿಗೆ ಸೌಲಭ್ಯ ವಿತರಿಸುತ್ತಿದ್ದಾರೆ. ಕನಿಷ್ಠ ಸೌಲಭ್ಯಗಳಿಲ್ಲದೆ ಕೇವಲ ಗೌರವಧನ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿಶೇಷ ನಿಯಮಾವಳಿ ರಚಿಸಿ ಕಾಯಂಗೊಳಿಸಬೇಕು. ಪಿಂಚಣಿ, ಇಡಿಗಂಟು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
    ಮಹಿಳಾ ಕಾರ್ಯಕರ್ತರಿಗೆ ವೇತನ ಸಹಿತ ಪ್ರಸೂತಿ ರಜೆ ನೀಡಬೇಕು. ಗ್ರಾಮೀಣ ಪುನರ್ವಸತಿ ಯೋಜನೆಯ ಮಾರ್ಗಸೂಚಿ ತಿದ್ದುಪಡಿ ಮಾಡಬೇಕು. ಹೊಸ ತಾಲೂಕು, ಗ್ರಾಮ ಪಂಚಾಯಿತಿಗಳಿಗೆ ನಗರ, ಪಟ್ಟಣ, ಪುರಸಭೆಗಳಿಗೆ ಎಂ.ಆರ್.ಡಬ್ಲುೃ, ಯು.ಆರ್.ಡಬ್ಲುೃ ಹಾಗೂ ವಿಆರ್‌ಡಬ್ಲುೃ ಅವರನ್ನು ನೇಮಿಸಬೇಕು.
    ಅಂಗವಿಕಲರಿಗಾಗಿ ಪ್ರತ್ಯೇಕ ಸಚಿವಾಲಯ ಹಾಗೂ ಅಭಿವೃದ್ಧಿ ನಿಗಮ ರಚಿಸಬೇಕು. 25 ರಿಂದ 30 ಲಕ್ಷ ರೂ.ಗಳನ್ನು ಮರಣ ಪರಿಹಾರಧನವಾಗಿ ವಿತರಿಸಬೇಕು. ವಿಕಲಾಂಗರಿಗೆ ರಾಜ್ಯವ್ಯಾಪಿ ಉಚಿತ ಬಸ್‌ಪಾಸ್ ನೀಡಬೇಕು. ಪ್ರತಿ ಜಿಲ್ಲೆಗೆ ಒಬ್ಬ ಜಿಲ್ಲಾ ಸಂಯೋಜಕರಾಗಿ ವಿಕಲಾಂಗರನ್ನೇ ನೇಮಿಸಬೇಕು ಎಂದು ಆಗ್ರಹಿಸಿದರು.
    ಪ್ರತಿಭಟನೆಯಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಸುಬ್ರಮಣ್ಯಂ, ಜಿಲ್ಲಾಧ್ಯಕ್ಷ ಯೋಗರಾಜ್, ಜಿಲ್ಲಾ ಕಾರ್ಯದರ್ಶಿ ಕೆ.ಲಿಂಗಪ್ಪ, ಜಿಲ್ಲಾ ಸಂಯೋಜಕ ಚನ್ನಪ್ಪ, ರೂಪಾ, ಹನುಮಂತಮ್ಮ, ಮಲ್ಲಿಕಾರ್ಜುನ, ಪರಸಪ್ಪ, ಬಾಬು ನಾಯ್ಕ, ಎಸ್.ಕೆ.ಮಹೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts