More

    ಲಕ್ಷಾಂತರ ರೂ. ಮೌಲ್ಯದ ಮರಳು ವಶ

    ಹುಬ್ಬಳ್ಳಿ: ಗಬ್ಬೂರು ಬೈಪಾಸ್ ಬಳಿ ಅಕ್ರಮ ಮರಳು ಅಡ್ಡೆಯ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಮಂಗಳವಾರ ದಾಳಿ ನಡೆಸಿ, ಅಂದಾಜು 12 ಲಕ್ಷ ರೂ. ಮೌಲ್ಯದ ಮರಳು ವಶಪಡಿಸಿಕೊಂಡಿದ್ದಾರೆ.

    ಅಕ್ರಮವಾಗಿ ಮರಳು ಸಾಗಣೆಗೆ ಯತ್ನ ಆರೋಪದಡಿ 11 ಲಾರಿಗಳನ್ನು ಕಾನೂನು ಸುವ್ಯವಸ್ಥೆ ಡಿಸಿಪಿ ಕೆ.ರಾಮರಾಜನ್​ನೇತೃತ್ವದ ತಂಡ ಭಾನುವಾರ ವಶಕ್ಕೆ ಪಡೆದಿತ್ತು.

    ಹುಬ್ಬಳ್ಳಿ- ಧಾರವಾಡ ಕಮಿಷನರೇಟ್ ಪೊಲೀಸರು ಸಮರ ಸಾರಿದ ಬಳಿಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ. ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೂಚನೆ ಮೇರೆಗೆ ಮಂಗಳವಾರ ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ ನಡೆಸಿದ್ದಾರೆ.

    ‘ಡಿಸಿ ಸೂಚನೆ ಮೇರೆಗೆ ಪೊಲೀಸರ ಸಹಕಾರದೊಂದಿಗೆ ದಾಳಿ ನಡೆಸಲಾಗಿದ್ದು, ಮಾಲೀಕರು ಸೂಕ್ತ ದಾಖಲೆ ನೀಡದ ಹಿನ್ನೆಲೆಯಲ್ಲಿ ಮರಳು ಜಪ್ತಿ ಮಾಡಲಾಗಿದೆ. ವಶಪಡಿಸಿಕೊಂಡ ಅಕ್ರಮ ಮರಳನ್ನು ನಿರ್ವಿುತಿ ಕೇಂದ್ರಕ್ಕೆ ಕಳುಹಿಸಲಾಗುವುದು’ ಎಂದು ಜಿಲ್ಲಾ ಹಿರಿಯ ಭೂಗರ್ಭಶಾಸ್ತ್ರಜ್ಞ ಚಂದ್ರಶೇಖರ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

    ಗಬ್ಬೂರಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿಟ್ಟಿದ್ದ 11 ಲಾರಿಗಳನ್ನು ಭಾನುವಾರ ಡಿಸಿಪಿ ಕೆ. ರಾಮರಾಜನ್ ವಶಪಡಿಸಿಕೊಂಡ ಬೆನ್ನಲ್ಲೇ ಸುಗಮ ಮರಳು ಸಾಗಣೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಸೋಮವಾರ ಗಬ್ಬೂರು ವೃತ್ತದಲ್ಲಿ ತುಂಗಭದ್ರ ಮರಳು ಲಾರಿ ಮಾಲಕರ ಸಂಘ ಪ್ರತಿಭಟನೆ ನಡೆಸಿತ್ತು. ನೂತನ ಮರಳು ನೀತಿಯಿಂದ ಉಂಟಾದ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿತ್ತು.

    ಎಚೆತ್ತುಕೊಳ್ಳದ ಇಲಾಖೆ ?: ಹು-ಧಾ ಅವಳಿ ನಗರದಲ್ಲಿ ಅಕ್ರಮ ಮರಳು ಮಾರಾಟ ಎಗ್ಗಿಲ್ಲದೆ ನಡೆಯುತ್ತಿರುವುದು ಜಗಜ್ಜಾಹೀರ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಪೊಲೀಸರು ಮತ್ತು ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಬೇಕಾಯಿತು. ಡಿಸಿಪಿ ರಾಮರಾಜನ್ ಗಬ್ಬೂರಲ್ಲಿ ಭಾನುವಾರ ಅಕ್ರಮ ಮರಳು ಅಡ್ಡೆ ಮೇಲೆ ದಾಳಿ ನಡೆಸಿದ ಬಳಿಕವೇ ಎಚ್ಚೆತ್ತುಕೊಳ್ಳಬೇಕಿದ್ದ ಇಲಾಖೆ ಡಿಸಿ ಸೂಚನೆ ಬಳಿಕ ಅನಿವಾರ್ಯವಾಗಿ ಕಾಯೋನ್ಮುಖವಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts