More

    ರೋಗಿಗಳ ಗೋಳು ಕೇಳೋರ‍್ಯಾರು: ಜಿಲ್ಲಾಸ್ಪತ್ರೆಯಲ್ಲಿ ಒಬ್ಬರೇ ಫಿಜಿಷಿಯನ್, ಅಗತ್ಯ ಚಿಕಿತ್ಸೆ ಸಿಗದೆ ಪರದಾಟ

    ಕೋಲಾರ: ಸುಮಾರು 70 ವರ್ಷಗಳ ಹಿಂದೆ ಮೈಸೂರು ರಾಜ ಮನೆತನದ ನರಸಿಂಹರಾಜರು ಸ್ಥಾಪಿಸಿದ ಜಿಲ್ಲಾ ಆಸ್ಪತ್ರೆಗೆ ಅಗತ್ಯ ಸಿಬ್ಬಂದಿ, ಔಷಧ ಒದಗಿಸಲು ಸರ್ಕಾರ ನಿರ್ಲಕ್ಷ್ಯ ತೋರುತ್ತಿರುವುದರಿಂದ ರೋಗಿಗಳು ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳ ಕಡೆ ಮುಖ ಮಾಡುವಂತಾಗಿದೆ.

    ಜಿಲ್ಲಾ ಆಸ್ಪತ್ರೆಗೆ ಪ್ರತಿದಿನ 800 ರಿಂದ 1200 ಮಂದಿ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಕರೊನಾ ಕಾಣಿಸಿಕೊಂಡ ಮೇಲೆ ಜ್ವರ, ಕೆಮ್ಮು,ನೆಗಡಿ, ಮೈಕೈನೋವಿಗೆ ಚಿಕಿತ್ಸೆ ಪಡೆಯಲು ಹೆಚ್ಚು ಜನರು ಬರುತ್ತಿದ್ದು, ಒಬ್ಬರೇ ಫಿಜಿಷಿಯನ್ ಇರುವುದರಿಂದ ರೋಗಿಗಳು ಸಕಾಲಕ್ಕೆ ಚಿಕಿತ್ಸೆ ಪಡೆಯಲಾಗದೆ ಪರಿತಪಿಸುವಂತಾಗಿದೆ.

    ಜಿಲ್ಲಾ ಆಸ್ಪತ್ರೆಗೆ ಕನಿಷ್ಠ 4 ಮಂದಿ ಫಿಜಿಷಿಯನ್‌ಗಳು ಬೇಕು. ಆದರೆ ಸರ್ಕಾರ ಕೇವಲ ಇಬ್ಬರನ್ನು ನೇಮಿಸಿತ್ತು. ಈ ಪೈಕಿ ಡಾ.ರವಿಕುಮಾರ್ ಎಂಬುವರಿಗೆ ಹೆಚ್ಚುವರಿಯಾಗಿ ಜಿಲ್ಲಾ ಸರ್ಜನ್ ಜವಾಬ್ದಾರಿ ವಹಿಸಲಾಗಿತ್ತು. ಇತ್ತೀಚೆಗೆ ಅವರು ಆಸ್ಪತ್ರೆಗೆ ಸರಬರಾಜು ಮಾಡಿರುವ ಸರಕಿಗೆ ಗುತ್ತಿಗೆದಾರನಿಂದ ಕಮೀಷನ್ ಸ್ವೀಕರಿಸಿ ಎಸಿಬಿಗೆ ಸಿಕ್ಕಿಬಿದ್ದು, ಸಸ್ಪೆಂಡ್ ಆಗಿದ್ದಾರೆ. ಪ್ರಸ್ತುತ ಡಾ.ಸವಿತಾ ಅವರು ಫಿಜಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ದಿನಕ್ಕೆ 400ರಿಂದ 600 ಮಂದಿ ರೋಗಿಗಳಿಗೆ ಚಿಕಿತ್ಸೆ ನೀಡುವುದು ದುಸ್ತರವಾಗಿದೆ.

    2014-15ನೇ ಸಾಲಿನಲ್ಲಿ ಡಾ.ಸಿದ್ದಲಿಂಗಯ್ಯ ಅವರು ಕೆಲಸದ ಒತ್ತಡ ಹಾಗೂ ರೋಗಿಗಳು ಬಯಸಿದ ರೀತಿ ಔಷದೋಪಚಾರ ಒದಗಿಸಲು ಸಾಧ್ಯವಾಗದೆ ಸ್ವಯಂ ನಿವೃತ್ತಿ ಪಡೆದುಕೊಂಡರು. ಗುತ್ತಿಗೆ ಆಧಾರದ ಮೇಲೆ ಸೇವೆಗೆ ಸೇರಿದ್ದ ಡಾ.ಶಂಕರ್ ಕುಮಾರ್ ಸರ್ಕಾರ ನಿಗದಿ ಮಾಡಿದ್ದ ಸಂಬಳ ಸಾಲದು ಹಾಗೂ ಒತ್ತಡದಲ್ಲಿ ಕೆಲಸ ಮಾಡಲು ಸಾಧ್ಯವಾಗದು ಎಂಬ ಕಾರಣಕ್ಕೆ ಕೆಲಸಕ್ಕೆ ಹಾಜರಾಗಲಿಲ್ಲ. ಗುತ್ತಿಗೆ ಆಧಾರದ ಮೇಲೆ ವೈದ್ಯರನ್ನು ನೇಮಿಸಿಕೊಳ್ಳಲು ಸರ್ಕಾರ ಹಲವು ಸಾರಿ ಅರ್ಜಿ ಆಹ್ವಾನಿಸಿದ್ದರೂ ಫಿಜಿಷಿಯನ್‌ಗಳು ಹಿಂದೇಟು ಹಾಕುತ್ತಿದ್ದಾರೆ. ಸಮಸ್ಯೆಗೆ ಪರಿಹಾರ ಕಂಡು ಹಿಡಿದು ಬಡ ರೋಗಿಗಳಿಗೆ ತೊಂದರೆ ತಪ್ಪಿಸುವ ಬದಲು ಸರ್ಕಾರ ಜಾಣ ಕುರುಡುತನ ಅನುಸರಿಸುತ್ತಿರುವುದರಿಂದ ರೋಗಿಗಳಿಗೆ ಅನ್ಯಾಯವಾಗಿದೆ.

    ಖಾಸಗಿ ಆಸ್ಪತ್ರೆಗಳತ್ತ ಮೊರೆ: ಸರ್ಕಾರಿ ಆಸ್ಪತ್ರೆಯಲ್ಲಿ ಫಿಜಿಷಿಯನ್‌ಗಳ ಕೊರತೆಯಿಂದ ಜನರು ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳಿಗೆ ಮೊರೆ ಹೋಗುವ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ, ಔಷಧ ಪಡೆಯುತ್ತಿದ್ದ ರೋಗಿಗಳು ವಿಧಿ ಇಲ್ಲದೆ ನೂರಾರು ರೂ. ಖರ್ಚು ಮಾಡುವಂತಾಗಿದೆ. ನೆರೆ ಜಿಲ್ಲೆ ಚಿಕ್ಕಬಳ್ಳಾಪುರದ ಡಾ.ಸುಧಾಕರ್ ಆರೋಗ್ಯ ಸಚಿವರಾಗಿದ್ದು, ಪ್ರತಿಷ್ಠಿತ ಎಸ್‌ಎನ್‌ಆರ್ ಆಸ್ಪತ್ರೆಗೆ ಅಗತ್ಯಫಿಜಿಷಿಯನ್‌ಗಳ ನೇಮಕ ಮಾಡಲು ಹಿಂದೇಟು ಹಾಕುತ್ತಿರುವುದಕ್ಕೆ ಬಿಜೆಪಿಯ ಕೆಲ ಮುಖಂಡರ ಅಡ್ಡಗಾಲು ಹಾಗೂ ತಮಗೆ ಬೇಕಾದ ವೈದ್ಯರನ್ನು ಹಾಕಿಸಿಕೊಳ್ಳಲು ಗಂಟು ನಿರೀಕ್ಷಿಸುತ್ತಿರುವುದು ಕಾರಣವೆನ್ನಲಾಗಿದೆ.

    ಡಿಸಿನೂ ಇಲ್ಲ, ಉಸ್ತುವಾರಿಯೂ ಇಲ್ಲ: ಜಿಲ್ಲೆಗೆ ಉಸ್ತುವಾರಿ ಸಚಿವರು ನೆಪಮಾತ್ರ ಇರುವುದು, ಕಳೆದ 15 ದಿನಗಳಿಂದ ಜಿಲ್ಲಾಧಿಕಾರಿ ಇಲ್ಲದಿರುವುದರಿಂದ ರೋಗಿಗಳು ತಮ್ಮ ಕಷ್ಟವನ್ನು ಯಾರ ಬಳಿ ಹೇಳಿಕೊಳ್ಳಬೇಕೆಂದು ತಿಳಿಯದೆ ಗೊಂದಲಗೊಂಡಿದ್ದಾರೆ. ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳಲ್ಲಿ ಅಲ್ಲಿನ ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು ತಮಗೆ ಬೇಕಾದ ವೈದ್ಯರನ್ನು ಹಾಕಿಸಿಕೊಂಡು ಕೋಲಾರಕ್ಕೂ ತಮಗೂ ಸಂಬಂಧ ಇಲ್ಲವೆಂಬಂತೆ ಮೌನಕ್ಕೆ ಜಾರಿದ್ದಾರೆ. ಸಂಸದರು ಸಹ ವೈದ್ಯರ ಕೊರತೆ ಬಗ್ಗೆ ಚಕಾರ ಎತ್ತದೆ ಇರುವುದಕ್ಕೆ ಕಾರಣ ತಿಳಿಯುತ್ತಿಲ್ಲ. ಬಡ ರೋಗಿಗಳ ನೋವು ತಾರಕಕ್ಕೆ ಏರುವ ಮುನ್ನ ಜನಪ್ರತಿನಿಧಿಗಳು ಆರೋಗ್ಯ ಸಚಿವರ ಮೇಲೆ ಒತ್ತಡ ತಂದು ಅಗತ್ಯ ಸಿಬ್ಬಂದಿ ನೇಮಿಸಬೇಕಿದೆ.

    ಜಿಲ್ಲಾ ಆಸ್ಪತ್ರೆಗೆ ಕೇವಲ ಒಬ್ಬರು ಫಿಜಿಷಿಯನ್ ಸಾಲದು, ದಿನಕ್ಕೆ ನೂರಾರು ಬಡ ರೋಗಿಗಳು ಬರುವುದರಿಂದ ಆರೋಗ್ಯ ಸಚಿವರು ಅಗತ್ಯಕ್ಕೆ ತಕ್ಕ ಸಿಬ್ಬಂದಿ ನೇಮಿಸಬೇಕು. ಡಿಸಿ ಹುದ್ದೆ ಖಾಲಿಯಾಗಿ 2 ವಾರವಾದರೂ ಇನ್ನೂ ನೇಮಿಸಿಲ್ಲ, ಉಸ್ತುವಾರಿ ಸಚಿವರು ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಕೋಲಾರ ಅನಾಥವಾಗಿದೆ.
    ಇಂಚರ ಗೋವಿಂದರಾಜು, ಎಂಎಲ್‌ಸಿ, ಕೋಲಾರ

    ಜಿಲ್ಲಾಸ್ಪತ್ರೆಗೆ ಕೂಡಲೇ ಹೆಚ್ಚುವರಿ ಫಿಜಿಷಿಯನ್ ನೇಮಿಸಬೇಕು. ಬಡ ರೋಗಿಗಳಿಗೆ ತೊಂದರೆಯಾದರೆ ಬೀದಿಗೆ ಇಳಿದು ಹೋರಾಡಬೇಕಾಗುತ್ತದೆ. ಉಸ್ತುವಾರಿ ಸಚಿವರು, ಸಂಸದರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಆರೋಗ್ಯ ಸಚಿವರ ಮೇಲೆ ಒತ್ತಡ ತಂದು ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ಕೊರತೆ ನೀಗಿಸಬೇಕು.
    ಸಿಎಂಆರ್ ಶ್ರೀನಿನಾಥ್, ಜೆಡಿಎಸ್ ಮುಖಂಡರು, ಕೋಲಾರ

    ಬಡವರ ಪಾಲಿನ ಆಸ್ಪತ್ರೆ ಎಂಬ ಉದ್ದೇಶದಿಂದ ನನ್ನಂತಹ ಸಾವಿರಾರು ಜನ ಚಿಕಿತ್ಸೆ ಪಡೆಯುವುದು ವಾಡಿಕೆ. ರೋಗಿಗಳ ಸಂಖ್ಯೆಗೆ ತಕ್ಕಂತೆ ವೈದ್ಯರು ಇಲ್ಲದಿರುವುದು ದುರ್ದೈವ. ಕರೊನಾ ಹಿನ್ನೆಲೆಯಲ್ಲಿ ಫಿಜಿಷಿಯನ್‌ಗಳು ಹೆಚ್ಚಾಗಿರಬೇಕಿತ್ತು, ಕೇವಲ ಇಬ್ಬರು ಇರುವುದರಿಂದ ಒಮ್ಮೆಗೆ ನೂರಾರು ರೋಗಿಗಳನ್ನು ನೋಡುವುದು ಕಷ್ಟ. ವೃದ್ಧರು, ಅಂಗವಿಕಲರು ಗಂಟೆಗಟ್ಟಲೆ ಕಾಯುವಂತಾಗಿದೆ.
    ನಾಗರಾಜ ಶೆಣೈ, ನಾಗರಿಕರು,ಕೋಲಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts