More

    ರೈಲ್ವೆ ಕಚೇರಿಗೆ ಕೇಂದ್ರ ಎಳ್ಳು ನೀರು !

    ವಾದಿರಾಜ ವ್ಯಾಸಮುದ್ರ ಕಲಬುರಗಿ
    ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆ ಬೇಡಿಕೆಗೆ ಕೇಂದ್ರ ಸರ್ಕಾರ ಮತ್ತೆ ಅಸಡ್ಡೆ ತೋರಿರುವುದು ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಸಕ್ತ ಬಜೆಟ್ನಲ್ಲಾದರೂ ಈ ವಿಷಯದಲ್ಲಿ ಕೇಂದ್ರ ಸ್ಪಂದಿಸಲಿದೆ ಎಂಬ ಆಶಾಭಾವಕ್ಕೆ ಸದ್ಯಕ್ಕಂತೂ ಎಳ್ಳು-ನೀರು ಬಿಟ್ಟಂತಾಗಿದೆ.
    ಕಲ್ಯಾಣ ಕರ್ನಾಟಕಕ್ಕೆ ನ್ಯಾಯಬದ್ಧವಾಗಿ ಈ ಕಚೇರಿ ಸಿಗಬೇಕು. ಇದನ್ನು ತರಬೇಕಾದ ಜವಾಬ್ದಾರಿ ಈ ಭಾಗದ, ರಾಜ್ಯದ ಎಲ್ಲ ಆಡಳಿತರೂಢ ಬಿಜೆಪಿ ಜನಪ್ರತಿನಿಧಿಗಳ ಮೇಲಿತ್ತು. ಆದರೆ ಕೇಂದ್ರ ತಾತ್ಸಾರ ತಾಳಿದ್ದರಿಂದ ಕೇಸರಿ ವೀರರೆಲ್ಲ ಮೌನಕ್ಕೆ ಶರಣಾಗಿದ್ದಾರೆ.
    ರೈಲ್ವೆ ವಿಭಾಗೀಯ ಕಚೇರಿ ಸ್ಥಾಪಿಸಲೇಬೇಕೆಂಬ ಬೇಡಿಕೆಯೊಂದಿಗೆ ಹೋರಾಡುವ ಮಂತ್ರ ಜಪಿಸಿದ ಕೆಲ ನಾಯಕರ ದರುಶನವೂ ಆಗುತ್ತಿಲ್ಲ. ಈ ಬಗ್ಗೆ ಬಜೆಟ್ನಲ್ಲಿ ಘೋಷಿಸಬೇಕಿದ್ದ ಕೇಂದ್ರ ಸರ್ಕಾರಕ್ಕೆ ಕಲಬುರಗಿಯೇ ನನಪಾಗಿಲ್ಲ. ಇದರ ಬದಲು ಆಂಧ್ರದ ವೈಜಾಗ್ನಲ್ಲಿ ವಿಭಾಗೀಯ ಕಚೇರಿ ಆರಂಭಕ್ಕೆ ಅನುಮತಿ ನೀಡಿದ್ದಲ್ಲದೆ, ರಾಯಘಡ್ದಲ್ಲೊಂದು ಆರಂಭಕ್ಕೆ ಒಪ್ಪಿಗೆ ನೀಡಿದೆ.
    ಸತತ ಈ ಬೇಡಿಕೆಗೆ ಕಡೆಗಣಿಸುತ್ತಿರುವುದು ಸ್ಥಳೀಯರನ್ನು ಸಿಡಿದೇಳುವಂತೆ ಮಾಡಿದೆ. ವಿಶೇಷವಾಗಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಮತ ನೀಡಿ ಬಿಜೆಪಿಯನ್ನು ಗೆಲ್ಲಿಸುವುದಷ್ಟೇ ನಿಮ್ಮ ಕೆಲಸ. ಸೌಲಭ್ಯ ಕೇಳಿದರೆ ಹುಷಾರ್ ಎಂಬ ಎಚ್ಚರಿಕೆಯನ್ನು ಮೋದಿ ಸರ್ಕಾರ ಈ ಭಾಗದವರಿಗೆ ನೀಡಿದಂತಾಗಿದೆ.
    ವಲಯ ಕಚೇರಿಯನ್ನು ವೈಜಾಗ್ಗೆ ನೀಡಿ, ಗುಂತಕಲ್ ವಿಭಾಗೀಯ ಕಚೇರಿ ಈ ವಲಯಕ್ಕೆ ಸೇರಿಸಿದ್ದಲ್ಲದೆ, ಗುಂತಕಲ್ ಕಚೇರಿಗೆ ಕಲಬುರಗಿ ಜಿಲ್ಲೆಯ ಕೆಲ ಭಾಗ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳನ್ನು ಸೇರಿಸಲು ಮುಂದಾಗುವ ಮೂಲಕ ಕಲ್ಯಾಣ ಕರ್ನಾಟಕವನ್ನು ಒಡೆದು ನುಚ್ಚುನೂರು ಮಾಡಲಾಗಿದೆ.
    ಬಿಜೆಪಿ ಸರ್ಕಾರದಲ್ಲಿ ಈ ಭಾಗದ ಕೆಲಸಗಳು ಆಗಬಹುದೆಂಬ ಮಹದಾಸೆ ಹೊಂದಿದ್ದ ಜನ ಎಲ್ಲ 5 ಲೋಕಸಭಾ ಕ್ಷೇತ್ರಗಳಿಂದ ಕೇಸರಿಪಡೆಯವರನ್ನೇ ಆಯ್ಕೆ ಮಾಡಿ ಕಳಿಸಿದ್ದಾರೆ. ಆದರೆ ಡಾ.ಉಮೇಶ ಜಾಧವ್ ಸೇರಿ ಎಲ್ಲ ಸಂಸದರು ಮತ್ತು ರಾಜ್ಯದವರೇ ಆದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರಿಗೆ ಇಲ್ಲಿ ಒಂದು ಕಚೇರಿ ಮಾಡಿಸುವ ತಾಕತ್ತಿಲ್ಲ ಎಂಬುದು ಸೋಜಿಗದ ಸಂಗತಿ.

    ಕಾಡುತ್ತಿದೆ ಇಚ್ಛಾಶಕ್ತಿ ಕೊರತೆ
    ಕಲಬುರಗಿಗೆ ರೈಲ್ವೆ ವಿಭಾಗೀಯ ಕಚೇರಿ ತಂದೇ ತರುವುದಾಗಿ ಹೇಳುವ ಸಂಸದ ಡಾ.ಉಮೇಶ ಜಾಧವ್ ಅವರಿಂದಲೂ ಕೇಂದ್ರದ ಮೇಲೆ ಒತ್ತಡ ಹೇರುವುದು ಸಾಧ್ಯವಾಗಿಲ್ಲ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ರಾಯಘಡ ನೆನಪಾಗಿದೆ. ಆದರೆ ಸರಿನ್ ವರದಿ ಪ್ರಕಾರ ನ್ಯಾಯಬದ್ಧವಾಗಿ ಕಲಬುರಗಿಗೆ ಸಿಗಬೇಕಿದ್ದ ಕಚೇರಿ ನನಪಾಗದಿರುವುದು ದುರ್ದೈ ವದ ಸಂಗತಿ. ಸರಿನ್ ವರದಿಯಂತೆ ಕಚೇರಿ ಸ್ಥಾಪಿಸಿ ಎಂಬ ಬಗ್ಗೆ ನಾಯಕರು ಇಚ್ಛಾಶಕ್ತಿ ಪ್ರದರ್ಶಿ ಸದ ಕಾರಣ ಕೇಂದ್ರ ಅಸಡ್ಡೆ ಮುಂದುವರಿಸಿದೆ. ಹಿಂದಿನ ಯುಪಿಎ ಸರ್ಕಾರದಲ್ಲಿ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ 2014ರಲ್ಲಿ ವಿಭಾಗೀಯ ಕಚೇರಿ ಆರಂಭಕ್ಕಾಗಿ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣ ಹತ್ತಿರ ಸ್ಥಳ ಕಾದಿರಿಸಿ ಅಡಿಗಲ್ಲು ಹಾಕಿದ್ದರು. ಅದನ್ನು ಬಿಟ್ಟರೆ ಇದು ಆರಕ್ಕೇರಿಲ್ಲ,


    ಕಲಬುರಗಿಯಲ್ಲಿ ವಿಭಾಗೀಯ ರೈಲ್ವೆ ಕಚೇರಿ ಆಗಬೇಕೆಂಬ ಬೇಡಿಕೆಗೆ ಏಕೆ ವಿಘ್ನಗಳು ಬರುತ್ತಿವೆಯೋ ಅರ್ಥವಾಗುತ್ತಿಲ್ಲ. ಕಚೇರಿಗೆ ಅಡಿಗಲ್ಲು ಹಾಕಿದ ಬಳಿಕ ಕಾರ್ಯ ಆರಂಭವಾಗುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ನಮ್ಮ ಭಾವನೆ ಹುಸಿಯಾಗಿದೆ. ಕೇಂದ್ರದಿಂದ ಈ ಕೆಲಸ ಮಾಡಿಸಿಕೊಳ್ಳುವ ಇಚ್ಛಾಶಕ್ತಿ ನಮ್ಮ ಭಾಗದ ಬಿಜೆಪಿ ಜನಪ್ರತಿನಿಧಿಗಳು ಪ್ರದರ್ಶಿಸಬೇಕಿದೆ.
    | ಸುನೀಲ ಕುಲಕರ್ಣಿ ಕಲಬುರಗಿ


    ಎಲ್ಲಿದ್ದಾರೆ ಹೋರಾಟಗಾರರು?
    ಹಕ್ಕಿನಿಂದ ನಮಗೆ ಸಿಗಬೇಕಿರುವ ರೈಲ್ವೆ ವಿಭಾಗೀಯ ಕಚೇರಿ ಪಡೆಯಲು ಮತ್ತೊಮ್ಮೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಮಾಧ್ಯಮಗಳಲ್ಲಿ ಗರ್ಜಿ ಸಿದವರೆಲ್ಲರೂ ಈಗೇಕೋ ತೆಪ್ಪಗಿದ್ದಾರೆ. ನಾವೆಲ್ಲ ಇಲ್ಲಿನ ಹೋರಾಟಗಾರರು ಎನ್ನುವವರನ್ನು ಈಗ ಹುಡುಕಬೇಕಾಗಿದೆ. ಈ ಹಿಂದೆ ವಾಣಿಜ್ಯೋದ್ಯಮ ಮಂಡಳಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಎಚ್ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ್, ಕೆ.ಅರುಣಕುಮಾರ, ಶರಣು ಗದ್ದುಗೆ ಸೇರಿ ಅನೇಕ ಪ್ರಮುಖರು ಈ ಬಗ್ಗೆ ಮಾತನಾಡಿದ್ದರು. ಒಗ್ಗಟ್ಟಿನಿಂದ ಹೋರಾಡಿದರೆ ಜಯ ನಿಶ್ಚಿತ ಎಂದಿದ್ದರು. ಈಗ ಒಗ್ಗಟ್ಟೂ ಕಾಣುತ್ತಿಲ್ಲ, ಹೋರಾಟಗಾರರೂ ಕಾಣುತ್ತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts