More

    ರೈಲು ನಿಲ್ದಾಣ ಮರು ನಿರ್ಮಾಣ 9 ತಿಂಗಳೊಳಗೆ ಪೂರ್ಣ   -ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿಕೆ  

    ದಾವಣಗೆರೆ: ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಹರಿಹರ ರೈಲು ನಿಲ್ದಾಣದ ಮರು ನಿರ್ಮಾಣ ಕಾಮಗಾರಿಯನ್ನು 9 ತಿಂಗಳೊಳಗೆ ಪೂರ್ಣಗೊಳಿಸಿ ಉದ್ಘಾಟನೆ ಮಾಡಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
    ನಗರದ ರೈಲು ನಿಲ್ದಾಣದ ಆವರಣದಲ್ಲಿ ಭಾನುವಾರ ನಡೆದ, ಮರು ನಿರ್ಮಾಣ ಶಂಕುಸ್ಥಾಪನಾ ಸಮಾರಂಭದಲ್ಲಿ ಮಾತನಾಡಿದರು.
    ನಿಲ್ದಾಣವನ್ನು 25.20 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಮರು ನಿರ್ಮಾಣ ಮಾಡಲಾಗುವುದು. ಹಳೆಯ ಕಟ್ಟಡ ತೆರವುಗೊಳಿಸಿ ನೂತನ ಕಟ್ಟಡ ನಿರ್ಮಿಸಲಾಗುವುದು. ನಿಲ್ದಾಣದಲ್ಲಿ 12 ಮೀ. ಅಗಲದ ಪಾದಚಾರಿ ಮೇಲ್ಸೇತುವೆ, 1 ಎಸ್ಕಲೇಟರ್, 1 ಲಿಫ್ಟ್, ಪ್ಲಾಟ್‌ಫಾರ್ಮ್ ಶೆಲ್ಟರ್, ಗ್ರಾನೈಟ್ ಫ್ಲೋರಿಂಗ್, ನಿರೀಕ್ಷಣಾ ಕೊಠಡಿ ನಿರ್ಮಿಸಲಾಗುವುದು ಎಂದರು.
    ಈ ಯೋಜನೆಯಡಿ ದೇಶದ 1309 ರೈಲು ನಿಲ್ದಾಣಗಳ ಮರು ಅಭಿವೃದ್ಧಿಯ ಗುರಿ ಇದೆ. 24,470 ಕೋಟಿ ರೂ.ಗಳ ವೆಚ್ಚದಲ್ಲಿ 27 ರಾಜ್ಯಗಳ 508 ನಿಲ್ದಾಣಗಳ ಕಾಮಗಾರಿಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಉಪಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ ಎಂದು ತಿಳಿಸಿದರು.
    ರೈಲ್ವೆ ಇಲಾಖೆ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು 2023-24ನೇ ಸಾಲಿನಲ್ಲಿ ದಾಖಲೆಯ 2.40 ಲಕ್ಷ ಕೋಟಿ ರೂ. ನೀಡಿದೆ. ರಾಜ್ಯದಲ್ಲಿ 47 ಸಾವಿರ ಕೋಟಿ ರೂ. ಅನುದಾನದ ಕಾಮಗಾರಿ ಪ್ರಗತಿಯಲ್ಲಿವೆ. 2023-24ನೇ ಸಾಲಿಗೆ ರಾಜ್ಯಕ್ಕೆ 7561 ಕೋಟಿ ರೂ.ಗಳ ಅನುದಾನ ಹರಿದು ಬಂದಿದೆ ಎಂದು ವಿವರಿಸಿದರು.
    ವಿಶ್ವದಲ್ಲಿ ಭಾರತ 3ನೇ ಅತಿ ದೊಡ್ಡ ರೈಲ್ವೆ ಜಾಲ ಹೊಂದಿದ್ದು ಸುಮಾರು 1.28 ಲಕ್ಷ ಕಿ.ಮೀ. ಉದ್ದದ ರೈಲ್ವೆ ಲೈನ್ ಇದೆ. ಕಳೆದ 5 ವರ್ಷಗಳಲ್ಲಿ ಭಾರತೀಯ ರೈಲ್ವೆ 1 ಲಕ್ಷ ಕೋಟಿ ರೂ.ಗಳನ್ನು ಸುರಕ್ಷತಾ ವ್ಯವಸ್ಥೆ ಸುಧಾರಣೆಗೆ ವ್ಯಯಿಸಿದೆ ಎಂದರು.
    ಈ ಮೊದಲು ಭಾರತದಲ್ಲಿ ರೈಲುಗಳು ಗಂಟೆಗೆ ಸರಾಸರಿ 60 ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದವು. ವಂದೇ ಭಾರತ್ ರೈಲುಗಳು 180 ಕಿ.ಮೀ. ವೇಗದಲ್ಲಿ ಚಲಿಸುತ್ತವೆ ಎಂದು ತಿಳಿಸಿದರು.
    ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಯೂ ಸಾಕಷ್ಟು ಅಭಿವೃದ್ಧಿ ಸಾಧಿಸಲಾಗಿದೆ. ಹಲವು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಹೊಸಪೇಟೆ- ಕೊಟ್ಟೂರು-ದಾವಣಗೆರೆ ಮಾರ್ಗ 2019ರಲ್ಲಿ ಪ್ರಾರಂಭಿಸಲಾಗಿದೆ. ದಾವಣಗೆರೆ-ಹರಿಹರ-ಹುಬ್ಬಳ್ಳಿ ಮಾರ್ಗದ ದ್ವಿಪಥ, ವಿದ್ಯುದೀಕರಣ ಕಾರ್ಯ ಪೂರ್ಣಗೊಂಡಿದೆ ಎಂದರು.
    ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಹರಿಹರದ ಉತ್ತರ ಭಾಗದ ಜನರಿಗೆ ಹರಪನಹಳ್ಳಿ ರಸ್ತೆಯ ರೈಲ್ವೆ ಕೆಳ ಸೇತುವೆಯೊಂದೇ ಸಂಪರ್ಕವಾಗಿದ್ದು, ಮಳೆಗಾಲದಲ್ಲಿ ಹಾಗೂ ವಾಹನ ಸಂಚಾರ ಹೆಚ್ಚಾದಾಗ ಶಾಲಾ, ಕಾಲೇಜುಗಳಿಗೆ ಹೋಗಿ ಬರುವ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಭಾಗೀರಥಿ ಕಲ್ಯಾಣ ಮಂಟಪ ಸಮೀಪ ಇರುವ ಹಳೆಯ ಉಚ್ಚಂಗಿದುರ್ಗ ರಸ್ತೆಯಲ್ಲಿ ಕೆಳ ಅಥವಾ ಮೇಲ್ಸೇತುವೆ ನಿರ್ಮಿಸಬೇಕೆಂದು ಸಂಸದರು ಹಾಗೂ ಮೈಸೂರು ವಿಭಾಗದ ರೈಲ್ವೆ ಅಧಿಕಾರಿಗಳಿಗೆ ಒತ್ತಾಯಿಸಿದರು.
    ಭೌಗೋಳಿಕವಾಗಿ ರಾಜ್ಯದ ಮಧ್ಯ ಭಾಗದಲ್ಲಿರುವ ಹರಿಹರಕ್ಕೆ ನಾಲ್ಕು ದಿಕ್ಕುಗಳಿಂದ ಪ್ರಯಾಣಿಕರು ಬರುತ್ತಾರೆ. ಅದ್ದರಿಂದ ನಿಲ್ದಾಣಕ್ಕೆ ಬರುವ ಎಲ್ಲ್ಲ ರೈಲುಗಳನ್ನು ನಿಲುಗಡೆ ಮಾಡಬೇಕು ಎಂದು ಮನವಿ ಮಾಡಿದರು.
    ಸ್ವಾತಂತ್ರೃ ಹೋರಾಟಗಾರರಾದ ನಿಂಬಳ್ಳಿ ನೀಲಪ್ಪ ಹಾಗೂ ಚನ್ನಬಸಪ್ಪ ಅವರನ್ನು ಸತ್ಕರಿಸಲಾಯಿತು. ವಿಭಾಗೀಯ ವ್ಯವಸ್ಥಾಪಕಿ ಶಿಲ್ಪಾ ಅಗರ್‌ವಾಲ್, ನಗರಸಭಾಧ್ಯಕ್ಷೆ ನಿಂಬಕ್ಕ ಚಂದಾಪೂರ್, ಸದಸ್ಯರಾದ ಎಂ.ಆರ್. ಮುಜಮ್ಮಿಲ್, ಬಿ.ಎಂ. ವಿಜಯ್‌ಕುಮಾರ್, ಹನುಮಂತಪ್ಪ ಆಟೋ, ಅಶ್ವಿನಿ ಕೃಷ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಯಶವಂತ್‌ರಾವ್ ಜಾಧವ್, ಬಿ.ಎಸ್. ಜಗದೀಶ್, ಅಜಿತ್ ಸಾವಂತ್, ಚಂದ್ರಶೇಖರ್ ಪೂಜಾರ್, ಎಡಿಸಿ ಪಿ.ಎನ್ ಲೋಕೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts