More

    ರೈತ ಸಂಪರ್ಕ ಕೇಂದ್ರಕ್ಕೆ ಬಾಲಬಾಧೆ

    ಓರ್ವಿಲ್ ಫರ್ನಾಂಡೀಸ್ ಹಳಿಯಾಳ

    ತಾಲೂಕಿನ ಮೂವತ್ತು ಗ್ರಾಮಗಳ ರೈತರಿಗೆ ಅನುಕೂಲವಾಗಬೇಕಿದ್ದ ರೈತ ಸಂಪರ್ಕ ಕೇಂದ್ರದ ಕಟ್ಟಡ ನಿರ್ವಣಕ್ಕೆ ಧಾರ್ವಿುಕ ಆಚರಣೆಯೊಂದು ಅಡಚಣೆಯಾಗಿ ಪರಿಣಮಿಸಿದೆ.

    2018-19ನೇ ಸಾಲಿನ ರೈತ ಕೃಷಿ ವಿಕಾಸ ಯೋಜನೆಯಡಿ ಹಳಿಯಾಳ ತಾಲೂಕಿನ ಮುರ್ಕವಾಡ ಗ್ರಾಮಕ್ಕೆ ರೈತ ಸಂಪರ್ಕ ಕೇಂದ್ರ ಕಟ್ಟಡ ಮಂಜೂರು ಮಾಡಿ, 50 ಲಕ್ಷ ರೂ. ಅನುದಾನ ಒದಗಿಸಲಾಗಿತ್ತು. ಕಟ್ಟಡ ನಿರ್ವಣದ ಜವಾಬ್ದಾರಿಯನ್ನು ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತಕ್ಕೆ (ಕೆಆರ್​ಐಡಿಎಲ್) ವಹಿಸಲಾಗಿತ್ತು. ಇದೇ ಸಾಲಿನಲ್ಲಿ ಜಿಲ್ಲೆಯ ಬೇರೆ ತಾಲೂಕಿನಲ್ಲಿ ಮಂಜೂರಾಗಿರುವ ರೈತ ಸಂಪರ್ಕ ಕೇಂದ್ರಗಳು ಉದ್ಘಾಟನೆಗೊಂಡು ಕಾರ್ಯಾರಂಭಿಸಿವೆ. ಆದರೆ, ಮುರ್ಕವಾಡದ ರೈತ ಸಂಪರ್ಕ ಕೇಂದ್ರ ಕಟ್ಟಡ ಮೇಲೇಳಲು ಕಸರತ್ತು ಮಾಡುವ ಸ್ಥಿತಿ ಎದುರಾಗಿದೆ.

    ಇಲಾಖೆಯ ಜಮೀನು:
    ಮುರ್ಕವಾಡ ಗ್ರಾಮದಲ್ಲಿನ ಸರ್ವೆ ನಂಬರ್ 9999ರ ಪ್ಲಾಟ್ ನಂ. 21ರಲ್ಲಿ ಕೃಷಿ ನಿರ್ದೇಶಕರು ಬೆಂಗಳೂರು ಅವರ ಹೆಸರಿನಲ್ಲಿ 6 ಗುಂಟೆ ಜಮೀನು ಇದೆ. ಹಿಂದೆ ಈ ಸ್ಥಳದಲ್ಲಿ ಕೃಷಿ ಇಲಾಖೆಯ ಕಟ್ಟಡವಿತ್ತು, ಕಟ್ಟಡ ಶಿಥಿಲಗೊಂಡು ನೆಲಸಮಗೊಂಡ ಸ್ಥಳವನ್ನೇ ಆಯ್ಕೆ ಮಾಡಿದ ಕೃಷಿ ಇಲಾಖೆಯು ಎರಡು ಗುಂಟೆ ಜಮೀನಿನಲ್ಲಿ ನೂತನ ಕಟ್ಟಡ ನಿರ್ವಣದ ಕಾಮಗಾರಿ ಆರಂಭಿಸಲು ಮುಂದಾಯಿತು. ಇಲಾಖೆಯ ಕಾಮಗಾರಿಗೆ ಗ್ರಾಮದ ದೈವ ಸಮಿತಿಯ ಪಂಚರು ಸಹ ಒಪ್ಪಿಗೆ ನೀಡಿದ್ದರು.

    ಆಕ್ಷೇಪಣೆ:
    ಕಟ್ಟಡದ ಕಾಮಗಾರಿ ಆರಂಭಗೊಳ್ಳುತ್ತಿದ್ದಂತೆಯೇ ಗ್ರಾಮದಲ್ಲಿನ ಕೆಲವರು ಧಾರ್ವಿುಕ ಕಾರಣ ನೆಪ ಮಾಡಿ ಕಾಮಗಾರಿಗೆ ವಿರೋಧ ಮಾಡಲಾರಂಭಿಸಿದರು. ಇಲಾಖೆಯು ಕೈಗೊಂಡ ಕಾಮಗಾರಿಯ ಸ್ಥಳದ ಪಕ್ಕದ ಪ್ಲಾಟ್​ನಲ್ಲಿ ಗ್ರಾಮದೇವಿ ಪ್ರತಿಷ್ಠಾಪಿಸುವ ಪೀಠವಿದೆ. ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಗ್ರಾಮದೇವಿ ಜಾತ್ರೆಯ ಸಮಯದಲ್ಲಿ ಈ ಪೀಠದಲ್ಲಿ ದೇವಿಯು ವಿರಾಜಮಾನಳಾಗುತ್ತಾಳೆ. ಹೀಗೆ ಹಿಂದಿನಿಂದಲೂ ಈ ಪೀಠದ ಅಕ್ಕಪಕ್ಕದಲ್ಲಿರುವ ಜಮೀನನ್ನು ಜಾತ್ರೆ, ಉತ್ಸವ, ಸಮಾರಂಭಗಳಿಗೆ ಬಳಸಲಾಗುತ್ತಿದೆ. ಇಲ್ಲಿ ರೈತ ಸಂಪರ್ಕ ಕೇಂದ್ರದ ಕಟ್ಟಡ ನಿರ್ವಣವಾದರೆ ಆಚರಣೆಗೆ ಜಮೀನಿನ ಕೊರತೆಯಾಗಬಹುದು ಎಂಬ ಆಕ್ಷೇಪ ಎತ್ತಿ ಬೇರೆಡೆ ಕಟ್ಟಡ ನಿರ್ವಿುಸಬೇಕೆಂದು ಪಟ್ಟು ಹಿಡಿದು ಜಿಲ್ಲಾಡಳಿತಕ್ಕೆ ಮನವಿ ರವಾನಿಸಿದರು.

    ಠಾಣೆ ಮೆಟ್ಟಿಲೇರಿದ ಪ್ರಕರಣ:
    ಕೃಷಿ ಇಲಾಖೆಗೆ ಮಾಜಿ ಶಾಸಕ ಸುನೀಲ ಹೆಗಡೆ ಬೆಂಬಲ ಸೂಚಿಸಿದ್ದಾರೆ. ಈ ಕಟ್ಟಡದ ನಿರ್ವಣಕ್ಕೆ ಅಡ್ಡಗಾಲು ಹಾಕುವವರ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಆರ್.ವಿ. ದೇಶಪಾಂಡೆ ಅವರಿಗೆ ಮೌಖಿಕವಾಗಿ ಗಮನಕ್ಕೆ ತಂದಿದ್ದಾರೆ. ಆದಷ್ಟು ಬೇಗ ಕಟ್ಟಡ ಕಾಮಗಾರಿ ಮುಗಿಸುವಂತೆ ಶಾಸಕರು ಕೃಷಿ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಈ ಮಧ್ಯೆ ಕಟ್ಟಡದ ನಿರ್ವಣಕ್ಕಾಗಿ ನಿಲ್ಲಿಸಿದ ಸ್ಟೀಲ್ ಕಾಲಮ್ಳನ್ನು ರಾತ್ರಿ ವೇಳೆ ಕೆಲವರು ಕಿತ್ತು ಹಾಕಿದ್ದರು. ಈ ಹಿನ್ನೆಲೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರು ಗ್ರಾಮದ ಹದಿನೇಳು ಜನರ ಹೆಸರನ್ನು ಉಲ್ಲೇಖಿಸಿ ದೂರು ಸಲ್ಲಿಸಿದ್ದಾರೆ. ಸದ್ಯ ಕಟ್ಟಡದ ಕಾಮಗಾರಿಗೆ ಆಕ್ಷೇಪಣೆಗಳು ಮುಂದುವರಿದಿವೆ.

    ಕೃಷಿ ಇಲಾಖೆ ನಿರ್ವಿುಸುತ್ತಿರುವ ಕಟ್ಟಡದ ಜಮೀನನ್ನು ಹಿಂದಿನಿಂದಲೂ ಧಾರ್ವಿುಕ ಕಾರ್ಯಗಳಿಗೆ, ಜಾತ್ರೆ, ಮಹೋತ್ಸವಗಳಿಗೆ ಬಳಸಲಾಗುತ್ತಿದೆ. ಹೀಗಿರುವಾಗ ಕೃಷಿ ಇಲಾಖೆಯವರು ಇದೇ ಸ್ಥಳವನ್ನು ಆಯ್ಕೆ ಮಾಡಿ ನಮ್ಮ ಧಾರ್ವಿುಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ಇಲಾಖೆಯು ಮೊಂಡುತನ ಬಿಟ್ಟು ಬೇರೆಡೆ ಕಟ್ಟಡ ನಿರ್ವಿುಸಲಿ. ನಾವು ಸಹಕರಿಸುತ್ತೇವೆ. ಇಲ್ಲವಾದಲ್ಲಿ ಕಾನೂನು ಹೋರಾಟ ಆರಂಭಿಸುತ್ತೇವೆ.
    | ನಾಗರಾಜ ಗೌಡ ಗ್ರಾಮಸ್ಥ

    ಕೃಷಿ ಇಲಾಖೆಯ ಅಧೀನದಲ್ಲಿರುವ ಜಮೀನಿನಲ್ಲಿಯೇ ನಾವು ಕಾನೂನುಬದ್ಧವಾಗಿ ಗ್ರಾಮಸ್ಥರ ಸಹಕಾರ ಪಡೆದು ಕಟ್ಟಡ ನಿರ್ಮಾಣ ಆರಂಭಿಸಿದ್ದೇವೆ. 30 ಗ್ರಾಮಗಳಿಗೆ ಉಪಯೋಗವಾಗುವಂತಹ ಈ ಕಟ್ಟಡ ಕಾಮಗಾರಿಗೆ ಎಲ್ಲರೂ ಸಹಕರಿಸಬೇಕು.
    | ಪಿ.ಐ. ಮಾನೆ ಸಹಾಯಕ ಕೃಷಿ ನಿರ್ದೇಶಕರು ಹಳಿಯಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts