More

    ರೈತರ ಮನೆಯಲ್ಲೇ ಹತ್ತಿ ಪರಿಶೀಲನೆ

    ಹುಬ್ಬಳ್ಳಿ: ಬೆಂಬಲ ಬೆಲೆ ಯೋಜನೆಯಡಿ ಇಲ್ಲಿಯ ತಾರಿಹಾಳ ಹತ್ತಿ ಖರೀದಿ ಕೇಂದ್ರದಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯ ತಡೆಯಲು ಎಪಿಎಂಸಿ ಮುಂದಾಗಿದೆ. ಭಾರತೀಯ ಹತ್ತಿ ನಿಗಮ (ಸಿಸಿಐ) ಖರೀದಿ ಏಜೆನ್ಸಿಯಾಗಿದ್ದು, ಹುಬ್ಬಳ್ಳಿಯ ಎಪಿಎಂಸಿ ಕಚೇರಿಯಲ್ಲಿ ರೈತರ ನೋಂದಣಿಗೆ ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಸುಮಾರು 1400 ರೈತರು ಹೆಸರು ನೋಂದಣಿ ಮಾಡಿಕೊಂಡಿದ್ದು, ಅವರೆಲ್ಲ ಈಗ ಹತ್ತಿ ಅಂಡಿಗೆಗಳನ್ನು ತರುತ್ತಿದ್ದಾರೆ.

    ನಿತ್ಯ 10- 15 ರೈತರಿಗೆ ದೂರವಾಣಿ ಕರೆ ಮಾಡಿ ಹತ್ತಿ ತರಲು ತಿಳಿಸುತ್ತಿರುವ ಅಧಿಕಾರಿಗಳು, ಖರೀದಿ ಕೇಂದ್ರದಲ್ಲೇ ಪರಿಶೀಲನೆ ಮಾಡಿ ಗುಣಮಟ್ಟ ಇಲ್ಲದ ಕೆಲ ರೈತರ ಹತ್ತಿ ತಿರಸ್ಕರಿಸುತ್ತಿದ್ದಾರೆ. ಇದು ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ.

    ಬಾಡಿಗೆ ವಾಹನದಲ್ಲಿ ಹತ್ತಿ ತುಂಬಿ ತಂದ ರೈತರು ತಿರಸ್ಕಾರಗೊಂಡ ಕೂಡಲೇ ವಾಪಸ್ ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಸಮೀಪದಲ್ಲೇ ಕೆಲ ಜಿನ್ನಿಂಗ್ ಫ್ಯಾಕ್ಟರಿಗಳಿಗೆ ಕಡಿಮೆ ದರಕ್ಕೆ ಮಾರಾಟ ಮಾಡಿ ಹೋಗುವ ಪ್ರಸಂಗ ಬರುತ್ತಿದೆ. ಈ ಎಲ್ಲ ಹಿನ್ನೆಲೆಯಲ್ಲಿ ರೈತ ಮುಖಂಡರು ಸಿಸಿಐ ಹಾಗೂ ಎಪಿಎಂಸಿ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದಲ್ಲದೆ, ದಿನಕ್ಕೆ ಬರೀ ಐದು ರೈತರಿಂದ ಹತ್ತಿ ಖರೀದಿಸಲಾಗುತ್ತಿದೆ. ಇದರಿಂದ ರೈತರಿಗೆ ಬಹಳಷ್ಟು ತೊಂದರೆ ಆಗುತ್ತಿದೆ ಎಂದು ರೈತ ಮುಖಂಡ ಹೇಮನಗೌಡ ಬಸನಗೌಡ್ರ ತಿಳಿಸಿದ್ದಾರೆ.

    ಮಳೆಗಾಲ ಆರಂಭವಾಗಿದ್ದರಿಂದ ಕೆಲ ರೈತರು ಮನೆಯಲ್ಲಿ ಹತ್ತಿ ಸಂಗ್ರಹಿಸಿ ಇಟ್ಟುಕೊಳ್ಳಲು ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ನೋಂದಣಿ ಮಾಡಿಕೊಂಡ ರೈತರಿಂದ ಕೂಡಲೇ ಹತ್ತಿ ಖರೀದಿ ಮಾಡಿಕೊಳ್ಳಬೇಕು ಎಂಬುದು ಅವರ ಆಗ್ರಹ.

    ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು. ರೈತರ ಮನೆಗೆ ಹೋಗಿ ಹತ್ತಿ ಪರಿಶೀಲಿಸಿ ಖರೀದಿಗೆ ಯೋಗ್ಯವೇ ಎಂಬುದನ್ನು ಅಲ್ಲಿಯೇ ಹೇಳಬೇಕು. ಇದರಿಂದ ರೈತರು ಹಾಗೂ ಸಿಸಿಐ ಅಧಿಕಾರಿಗಳ ಸಮಯವೂ ಉಳಿಯುತ್ತದೆ. ಇದಕ್ಕೆ ಬೇಕಾದ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಿಕೊಡಬೇಕು ಎಂದು ಎಪಿಎಂಸಿ ಸದಸ್ಯರಾದ ಸುರೇಶ ಕಿರೇಸೂರ, ಶಿವಯೋಗಿ ಮಂಟೂರಶೆಟ್ರ ಒತ್ತಾಯಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಪಿಎಂಸಿ ಕಾರ್ಯದರ್ಶಿ ಯು. ರಾಜಣ್ಣ, ಅಣ್ಣಿಗೇರಿ ಮಾದರಿಯಲ್ಲಿ ನೋಂದಣಿ ಮಾಡಿಕೊಂಡ ರೈತರ ಮನೆ ಮನೆಗೆ ಭೇಟಿ ನೀಡಿ ಹತ್ತಿ ಪರಿಶೀಲನೆ ಮಾಡಲು ಸಿಸಿಐ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಗುವುದು. ಈಗಾಗಲೇ ಎಪಿಎಂಸಿಯಿಂದ ಅಗತ್ಯ ಸಿಬ್ಬಂದಿ ಒದಗಿಸಿದ್ದೇವೆ. ರೈತರಿಗೆ ಆಗುವ ಸಮಸ್ಯೆ ನಿವಾರಿಸಿ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದ್ದಾರೆ.

    ಸದ್ಯ ಸಿಸಿಐನವರು ಒಂದೇ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಹತ್ತಿ ಖರೀದಿ ನಡೆಸಿದ್ದಾರೆ. ಇನ್ನೊಂದು ಫ್ಯಾಕ್ಟರಿಗೆ ಸೂಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ರೈತರಿಂದ ಖರೀದಿ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಕ್ರಿಯೆ ವಿಳಂಬಕ್ಕೂ ಇದರಿಂದ ಪರಿಹಾರ ಸಿಗಲಿದೆ ಎಂದು ರಾಜಣ್ಣ ತಿಳಿಸಿದ್ದಾರೆ. ‘ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ಬಂದ ಹತ್ತಿ ತಿರಸ್ಕಾರ’ ಎಂಬ ಶೀರ್ಷಿಕೆಯಡಿ ‘ವಿಜಯವಾಣಿ’ ಶುಕ್ರವಾರ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts