More

    ರೈತರ ಕೈಹಿಡಿದ ಮೀನುಗಾರಿಕೆ!

    ಬೆಳಗಾವಿ: ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಇದೀಗ ಕೃಷಿ ಹೊಂಡ, ಕೆರೆಗಳು ಜೀವನಕ್ಕೆ ಆಸರೆಯಾಗುತ್ತಿವೆ. ಮೀನುಗಾರಿಕೆಗೆ ವೇದಿಕೆ ಕಲ್ಪಿಸಿರುವ ಜಮೀನಿನಲ್ಲಿರುವ ಕೆರೆ ಹಾಗೂ ಕೃಷಿ ಹೊಂಡಗಳು ಅನೇಕ ರೈತರ, ಬಡವರ ಕೈ ಹಿಡಿದಿವೆ. ಜಿಲ್ಲೆಯಲ್ಲಿ ಮೀನು ಉತ್ಪಾದನೆ ಪ್ರಮಾಣವೂ ಏರಿಕೆ ಕಂಡಿದ್ದು, 8 ಸಾವಿರ ಟನ್ ಗಡಿ ದಾಟಿದೆ.
    ಗ್ರಾಮೀಣ ಪ್ರದೇಶಗಳಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರು, ಕೃಷಿ ಉದ್ದೇಶಕ್ಕಾಗಿ ಜಿಲ್ಲೆಯಲ್ಲಿ 1,845 ಕೃಷಿ ಹೊಂಡ, 324 ಕೆರೆ ನಿರ್ಮಿಸಲಾಗಿದೆ. ಅಲ್ಲದೆ, ಇಲ್ಲಿ ಮೀನುಗಾರಿಕೆಯನ್ನೂ ಆರಂಭಿಸಿದ್ದರಿಂದ ರೈತರಿಗೆ, ಮಧ್ಯಮ ವರ್ಗದ ಜನರಿಗೆ ಹೆಚ್ಚುವರಿ ಆದಾಯ ಲಭಿಸುವಂತಾಗಿದೆ. ಮೀನು ಉತ್ಪಾದನೆ ಪ್ರಮಾಣದಲ್ಲೂ ಶೇ. 25ರಷ್ಟು ಏರಿಕೆ ಕಂಡಿದೆ.

    ಮೀನು ಮರಿ ಉತ್ಪಾದನೆ: ಕಳೆದ ನಾಲ್ಕೈದು ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ ಮೀನು ಸಾಕಣೆಗೆ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ಹಿಡಕಲ್ ಮೀನು ಉತ್ಪಾದನೆ ಕೇಂದ್ರ, ಸವದತ್ತಿಯ ಮೀನುಮರಿ ಉತ್ಪಾದನೆ ಕೇಂದ್ರದಲ್ಲಿ ಪ್ರತಿವರ್ಷದ ಸುಮಾರು 58 ಲಕ್ಷದಷ್ಟು ಮೀನು ಮರಿಗಳನ್ನು ಉತ್ಪಾದಿಸುತ್ತಾರೆ. ಬೇಡಿಕೆಗೆ ಅನುಗುಣವಾಗಿ ಅವುಗಳನ್ನು ನೀಡಲಾಗುತ್ತಿದೆ. ಈ ಮೊದಲು ಮುಂಗಾರು ಹಂಗಾಮು ಅವಧಿಯಲ್ಲಿ ಮಳೆ ಉತ್ತಮವಾಗಿ ಸುರಿಯುತ್ತಿದ್ದುದರಿಂದ ಜೂನ್‌ನಿಂದ ಅಕ್ಟೋಬರ್ ಅವಧಿಯಲ್ಲಿ ಮಾತ್ರ ಮೀನು ಸಾಕಣೆ ಮಾಡುತ್ತಿದ್ದರು. ಆದರೆ, 2019ರಿಂದ ವರ್ಷ ಪೂರ್ತಿ ಮೀನು ಕೃಷಿಯಲ್ಲಿ ರೈತರೂ ತೊಡಗಿಕೊಂಡಿದ್ದರಿಂದ ಮೀನು ಸಾಕಣೆಗೆ ಬೇಡಿಕೆ ಹೆಚ್ಚಾಗುತ್ತಿದೆ.

    ವಿವಿಧೆಡೆ ಸಾಕಣೆ: ಮೀನುಗಾರಿಕೆ ಇಲಾಖೆ ವ್ಯಾಪ್ತಿಯ 221 ಕೆರೆಗಳ ಪೈಕಿ 160 ಕೆರೆಗಳಲ್ಲಿ, ಹಿಡಕಲ್, ನವಿಲುತೀರ್ಥ ಜಲಾಶಯಗಳಲ್ಲಿ, ಘಟಪ್ರಭಾ, ಮಲಪ್ರಭಾ, ಕೃಷ್ಣಾ, ಮಾರ್ಕಂಡೇಯ ನದಿಗಳಲ್ಲಿ ಮೀನುಗಾರಿಕೆ ನಡೆಯುತ್ತಿದೆ. ಕೆಲ ರೈತರು 1ರಿಂದ 2 ಎಕರೆ ಪ್ರದೇಶದಲ್ಲಿ ಕೃಷಿ ಹೊಂಡ ನಿರ್ಮಿಸಿ 2 ಸಾವಿರ ಟನ್‌ವರೆಗೆ ಮೀನು ಉತ್ಪಾದನೆ ಮಾಡುತ್ತಿದ್ದಾರೆ. ಮುಂದಿನ 10 ವರ್ಷಗಳಲ್ಲಿ ಜಿಲ್ಲೆಯಲ್ಲಿ ಮೀನು ಉತ್ಪಾದನೆ 1 ಲಕ್ಷ ಟನ್ ಗಡಿ ದಾಟಲಿದೆ ಎಂದು ಮೀನುಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಮೀನುಗಾರಿಕೆ ಲಾಭದಾಯಕವಾದ ಕಸಬು. ಹೀಗಾಗಿ ಸಣ್ಣ, ಮಧ್ಯಮ ರೈತರು ಮೀನು ಸಾಕಣೆಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಕೃಷಿ ಹೊಂಡಗಳಲ್ಲಿ ಮೀನು ಉತ್ಪಾದನೆ ಆಗುತ್ತಿಲ್ಲ. ಕೆರೆಗಳಿಂದಲೇ ವಾರ್ಷಿಕ 5 ಸಾವಿರ ಟನ್‌ವರೆಗೆ ಮೀನು ಉತ್ಪಾದನೆ ಆಗುತ್ತಿದೆ. ಮೀನು ಸಾಕಣೆ ಪ್ರದೇಶ ವಿಸ್ತರಣೆ ಮಾಡಲು ಪ್ರತಿ ಹಳ್ಳಿಯಲ್ಲೂ ರೈತರಿಗೆ ತರಬೇತಿ ನೀಡಲಾಗುತ್ತಿದೆ.
    | ಎಸ್.ಕುಲಕರ್ಣಿ ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ, ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts