More

    ರೈತರ ಆರ್ಥಿಕಮಟ್ಟ ಹೆಚ್ಚಿಸುವುದೇ ಗುರಿ

    ಖಾನಾಪುರ, ಬೆಳಗಾವಿ: ಲೈಲಾ ಸಕ್ಕರೆ ಕಾರ್ಖಾನೆ ಅನೇಕ ಬಿಕ್ಕಟ್ಟು ಎದುರಿಸಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಸ್ಥಳೀಯ ರೈತರ ಬೆವರಿಗೆ ನ್ಯಾಯಯುತ ಮೌಲ್ಯ ನೀಡುವ ಮೂಲಕ ಅವರ ಆರ್ಥಿಕ ಮಟ್ಟ ಸುಧಾರಿಸುವುದು ನಮ್ಮ ಮುಖ್ಯ ಗುರಿಯಾಗಿದೆ. ರೈತರ ಸಂತೃಪ್ತಿಯಲ್ಲಿ ನಮ್ಮ ಯಶಸ್ಸು ಅಡಗಿದೆ ಎಂದು ಮಹಾಲಕ್ಷ್ಮೀ ಗ್ರೂಪ್ ಸಂಸ್ಥಾಪಕ ಹಾಗೂ ಲೈಲಾ ಶುಗರ್ಸ್ ಅಧ್ಯಕ್ಷ ವಿಠ್ಠಲ ಹಲಗೇಕರ್ ಹೇಳಿದರು.

    ತಾಲೂಕಿನ ಕುಪ್ಪಟಗಿರಿ ಬಳಿ ಇರುವ ಮಹಾಲಕ್ಷ್ಮೀ ಗ್ರೂಪ್ ಸಂಚಾಲಿತ ಲೈಲಾ ಶುಗರ್ ಸಕ್ಕರೆ ಕಾರ್ಖಾನೆಯ 2022-23ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ಭಾಗ್ಯಲಕ್ಷ್ಮೀ ಕಾರ್ಖಾನೆಗೆ 35,000 ಷೇರುದಾರರಿದ್ದು, ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಕಾರ್ಖಾನೆಯನ್ನು ಲೈಲಾ ಶುಗರ್‌ನವರು ಲೀಜ್ ಮೇಲೆ ಪಡೆದು ಸುಮಾರು 9 ವರ್ಷ ಕಬ್ಬು ನುರಿಸಿದ್ದಾರೆ. ಎರಡು ವರ್ಷಗಳಿಂದ ಕಾರ್ಖಾನೆ ಮುನ್ನಡೆಸಲು ಆಗದೇ ಇದ್ದಾಗ ಮುಚ್ಚುವ ಹಂತದಲ್ಲಿದ್ದರು. ಆಗ ಮಹಾಲಕ್ಷ್ಮೀ ಗ್ರೂಪ್ ಸಂಸ್ಥೆಯು ಕಾರ್ಖಾನೆಯನ್ನು ಮುನ್ನಡೆಸಿ ಖಾನಾಪುರದ ರೈತ ಸಮುದಾಯಕ್ಕೆ ಅನುಕೂಲ ಮಾಡಿಕೊಟ್ಟಿದ್ದೇವೆ. ಇನ್ನು ಮುಂದೆಯೂ ರೈತ ಸಮುದಾಯದ ಸಹಕಾರ ಅತ್ಯಗತ್ಯ ಎಂದರು.

    ಎಫ್‌ಆರ್‌ಪಿ ಪ್ರಕಾರ ಪ್ರತಿ ಟನ್ ಕಬ್ಬಿಗೆ 2,675 ರೂ.ಗಳನ್ನು ರೈತರ ಖಾತೆಗೆ ಜಮೆ ಮಾಡಿದ್ದೇವೆ. ಜತೆಗೆ ದೀಪಾವಳಿ ಸಂದರ್ಭದಲ್ಲಿ ಪ್ರತಿ ಟನ್ ಕಬ್ಬಿಗೆ ಅರ್ಧ ಕೆಜಿ ಸಕ್ಕರೆಯನ್ನು ಕಡಿಮೆ ದರದಲ್ಲಿ ನೀಡಲು ತಿರ್ಮಾನಿಸಿದ್ದೇವೆ. ಪ್ರಸಕ್ತ ಹಂಗಾಮಿನಲ್ಲಿ ಲೈಲಾ ಶುಗರ್ಸ್ ಕಾರ್ಖಾನೆಗೆ ಕಬ್ಬು ಕಳಿಸುವ ರೈತರಿಗೆ ಮೊದಲ ಕಂತಾಗಿ 2,500 ರೂ. ನೀಡುತ್ತೇವೆ. ಅದರೊಟ್ಟಿಗೆ ಎಫ್‌ಆರ್‌ಪಿ ಪರಿಶೀಲಿಸಿ, ಎರಡನೇ ಕಂತು ಸಹ ಶೀಘ್ರ ನೀಡಲು ಆಡಳಿತ ಮಂಡಳಿ ಸಿದ್ಧವಿದೆ ಎಂದರು. ಸಂಸದ ಈರಣ್ಣ ಕಡಾಡಿ ಮಾತನಾಡಿ, ಕಾರ್ಖಾನೆ ಮತ್ತು ರೈತ ಅವೆರಡು ಜೋಡೆತ್ತುಗಳಿದ್ದಂತೆ. ಇವೆರಡೂ ಒಟ್ಟಾಗಿ ಜವಾಬ್ದಾರಿ ನಿಭಾಯಿಸಿದರೆ ಕಾರ್ಖಾನೆ ಹಾಗೂ ರೈತನಿಗೆ ಹೆಚ್ಚಿನ ಲಾಭಾಂಶ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.

    ಅವರೊಳ್ಳಿ-ಬಿಳಕಿ ರುದ್ರಸ್ವಾಮಿ ಮಠದ ಚನ್ನಬಸವ ದೇವರು, ತೋಪಿನಕಟ್ಟಿ ಸಿದ್ಧಾಶ್ರಮದ ರಾಮದಾಸ್ ಮಹಾರಾಜರು, ಶ್ರೀಕ್ಷೇತ್ರ ಹಂಡಿ ಬಡಗನಾಥ ಮಠದ ಪೀರನಾಥಜಿ, ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ, ಸಿಂಗನಾಥ ಮಹಾರಾಜ, ಭಯಂಕರನಾಥ ಮಹಾರಾಜರು, ಆರೂಢಮಠದ ಶಿವಪುತ್ರ ಸ್ವಾಮೀಜಿ, ಅಡವಿಸಿದ್ದೇಶ್ವರ ಸ್ವಾಮೀಜಿ, ಪಿರಯೋಗಿ ಮಂಗಲನಾಥ, ಮೃತ್ಯುಂಜಯ ಸ್ವಾಮೀಜಿ, ಮಾಜಿ ಶಾಸಕ ದಿಗಂಬರ ಪಾಟೀಲ, ಪ್ರಮೋದ ಕೊಚೇರಿ, ಸಂಜಯ ಕುಬಲ, ಧನಶ್ರೀ ಸರದೇಸಾಯಿ, ಪ್ರತಾಪ ಸರದೇಸಾಯಿ, ಆಡಳಿತ ಮಂಡಳಿ ಸದಸ್ಯರು, ರೈತ ಮುಖಂಡರು, ಕಾರ್ಖಾನೆ ಸಿಬ್ಬಂದಿಹಾಗೂ ನೂರಾರು ರೈತರು ಇದ್ದರು. ಕಾರ್ಖಾನೆಯ ಎಂಡಿ ಸದಾನಂದ ಪಾಟೀಲ ಸ್ವಾಗತಿಸಿ, ವಂದಿಸಿದರು. ವಾಸುದೇವ ಚೌಗುಲೆ ಹಾಗೂ ವಿವೇಕ ಕುರಗುಂದ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts