More

    ರೈತರಿಗೆ ಸಕಾಲಕ್ಕೆ ಸಿಗದ ಸವಲತ್ತು

    ಬೆಳಗಾವಿ: ಕೃಷಿ ಚಟುವಟಿಕೆಗಳ ಶ್ರಮದಾಯಕ ದುಡಿಮೆ ತಗ್ಗಿಸುವುದು, ಕಾರ್ಮಿಕರ ಸಮಸ್ಯೆ ನೀಗಿಸಿ, ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವುದಕ್ಕಾಗಿ ರೈತರಿಗೆ ಅನುಕೂಲಕವಾಗಬೇಕಿದ್ದ ಕೃಷಿ ಯಾಂತ್ರೀಕರಣ ಯೋಜನೆಯ ಸವಲತ್ತು ರೈತರಿಗೆ ಈ ಬಾರಿ ಮುಂಗಾರಿನಲ್ಲಿಯೇ ಸಿಗುವುದು ಅನುಮಾನ.
    ರಾಷ್ಟ್ರೀಯ ಕೃಷಿ ವಿಸ್ತರಣೆ ಮತ್ತು ತಂತ್ರಜ್ಞಾನ ಅಭಿಯಾನದ ಕೃಷಿ ಯಾಂತ್ರೀಕರಣ ಉಪ ಅಭಿಯಾನ, ರಾಷ್ಟ್ರೀಯ ಆಹಾರ ಭದ್ರತೆ ಮಿಶನ್​ ಹಾಗೂ ಕೃಷಿ ವಿಸ್ತರಣೆ ಮತ್ತು ತರಬೇತಿಯಡಿ ರೈತರಿಗೆ ಕೃಷಿ ಸಲಕರಣೆಗಳ ಸಹಾಯಧನದ ಸೌಲಭ್ಯ ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಅನುದಾನವಿಲ್ಲ ಎನ್ನುತ್ತಿರುವ ಅಧಿಕಾರಿಗಳ ಉತ್ತರ ರೈತ ಸಮುದಾಯದಲ್ಲಿ ಬೇಸರ ಮೂಡಿಸಿದೆ.

    ಉಳುಮೆಯಿಂದ ಕಟಾವಿನವರೆಗೂ ವಿವಿಧ ಒಣ ಬೇಸಾಯ, ನೀರಾವರಿ ಹಾಗೂ ತೋಟಗಾರಿಕೆ ಬೆಳೆಗಳ ಕರಷಿಗೆ ಆಸರೆಯಾಗಬಲ್ಲ ಸಣ್ಣ ಟ್ರ್ಯಾಕ್ಟರ್​, ಪವರ್​ ಟಿಲ್ಲರ್​, ಭೂಮಿ ಹದಗೊಳಿಸುವ ಉಪಕರಣ, ಭತ್ತದ ನಾಟಿ/ ಬಿತ್ತನೆ ಉಪಕರಣಗಳು, ಅಂತರ ಬೇಸಾಯ ಉಪಕರಣ, ಡೀಸಲ್​ ಪಂಪ್​ಸೆಟ್​, ಎಂಜಿನ್​ ಚಾಲಿತ ಸಸ್ಯ ಸಂರಣಾ, ಬೆಳೆ ಕಟಾವು/ಒಕ್ಕಣೆ ಯಂತ್ರಗಳು, ತ್ಯಾಜ್ಯ ವಸ್ತುಗಳ ನಿರ್ವಹಣ ಉಪಕರಣಗಳ ಖರೀದಿಗೆ ರೈತರು ಸಿದ್ಧತೆ ನಡೆಸಿದ್ದು, ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಕ್ಕೆ ದಿನವೂ ಅಲಿಯುವಂತಾಗಿದೆ.

    ಮುಂಗಾರು ಆರಂಭಗೊಂಡು 4 ತಿಂಗಳು ಕಳೆದರೂ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯ ಪ್ರಮುಖ ಯೋಜನೆಗಳಿಗೆ ಅನುದಾನ ಲಭಿಸದೇ ಸಮರ್ಪಕ ಅನುಷ್ಠಾನ ಸಾಧ್ಯವಾಗದಿರುವುದು ಕೃಷಿ ಕ್ಷೇತ್ರ ವಿಸ್ತರಿಸಿಕೊಂಡಿರುವ ರೈತರನ್ನು ಮತ್ತಷ್ಟು ಸಂಕಷ್ಠಕ್ಕೆ ಸಿಲುಕಿಸಿದೆ.

    ಕೃಷಿಯಲ್ಲಿ ಯಾಂತ್ರೀಕರಣ ಅಳವಡಿಸಿಕೆಗೆ ರೈತರನ್ನು ಪ್ರೋತ್ಸಾಹಿಸಲು ಯಂತ್ರೋಪಕರಣ ಖರೀದಿಸಿದ ರೈತರಿಗೆ ಸಾಮಾನ್ಯ ರೈತರಿಗೆ ಶೇ.50 ರಷ್ಟು ಸಹಾಯಧನ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇ.90 ರಷ್ಟು ಸಹಾಯಧನವನ್ನು ಗರಿಷ್ಟ ರೂ. ಒಂದು ಲದವರೆಗೆ ಮಿತಿಗೊಳಿಸಲಾಗಿದೆ. ಯೋಜನೆಯ ಲಾಭಪಡೆದುಕೊಳ್ಳಲು ರೈತರು ಉತ್ಸುಕರಾಗಿದ್ದು, ಅರ್ಜಿ ಸಲ್ಲಿಕೆಗೆ ದಾಖಲೆ ಸಮೇತ ತಮ್ಮ ಕ್ಷೇತ್ರದ ಶಾಸಕರ ಕಚೇರಿಗೂ ಎಡತಾಕುತ್ತಿದ್ದಾರೆ.

    ಯೋಜನೆ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಶಾಸಕರೂ ಸಹ ಅಧಿಕಾರಿಗಳ ಮೇಲೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, “ಸಬ್ಸಿಡಿಯಲ್ಲಿ ಯಂತ್ರೋಪಕರಣ ವಿತರಣೆಯ ಪ್ರಕ್ರಿಯೆ ನಡೆದಿದೆ. ಯಂತ್ರೋಪಕರಣ ಖರಿದೀಗೆ ಸಹಾಯಧನ ವಿತರಣೆಗೆ ಅನುದಾನ ಇನ್ನೂ ಬಂದಿಲ್ಲ’ ಎಂಬ ಸಿದ್ದ ಉತ್ತರ ಕೃಷಿ ಇಲಾಖೆ ಅಧಿಕಾರಿಗಳಿಂದ ಕೇಳಿಬರುತ್ತಿದೆ.

    ಕಾಯುವ ಕೆಲಸವೇ ಕಾಯಂ!: ಬಿತ್ತನೆಗೆ ಭೂಮಿ ಹದಗೊಳಿಸುವುದರಿಂದ ಹಿಡಿದು ಫಸಲು ಬೆಳೆದು ಅದನ್ನು ಕೊಯ್ಲು ಮಾಡುವರೆಗೂ ಉಪಯುಕ್ತವಿರುವ ಯಂತ್ರೋಪಕರಣಗಳ ಲಭಿಸುತ್ತವೆ. ಇದರಿಂದ ಕೃಷಿ ಕಾರ್ಮಿಕರ ಕೊರತೆ ನೀಗಲಿದೆ. ಅಲ್ಲದೇ, ಕೃಷಿ ಚಟುವಟಿಕೆಯ ಆರ್ಥಿಕ ಹೊರೆ ಕಡಿಮೆಯಾಗಲಿದೆ ಎಂಬ ನಿರೀಕ್ಷೆಯಿಂದ ಎದುರು ನೋಡುತ್ತಿದ್ದಾರೆ. ಇನ್ನು ಒಂದುವರೆ ತಿಂಗಳು ಕಳೆದರೆ ಮುಂಗಾರು ಹಂಗಾಮು ಮುಕ್ತಾಯಗೊಳ್ಳಲಿದೆ. ಕೂಡಲೇ ಯಂತ್ರೋಪಕರಣಗಳ ವಿತರಣೆಗೆ ಸಂಬಂಧಪಟ್ಟ ಎಲ್ಲ ಯೋಜನೆಗಳಿಗೆ ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಮಾಡಿ, ಪ್ರಕ್ರಿಯೆಗೆ ವೇಗ ನೀಡಬೇಕು ಎನ್ನುವುದು ಮಚ್ಛೆ ಗ್ರಾಮದ ರೈತರ ಒತ್ತಾಯ.

    ಕೃಷಿ ಯಾಂತ್ರೀಕರಣ ಉಪ ಅಭಿಯಾನದ ಅನುಷ್ಠಾನ ಮುಂಗಾರಿನಲ್ಲೂ ಆಗಬೇಕಿತ್ತು. ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಹ ರೈತರಿಂದ ಆನ್​ಲೈನ್​ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಎಲ್ಲವನ್ನೂ ಕ್ರೋಢಿಕರಿಸಿ ಫಲಾನುಭವಿಗಳನ್ನು ಆಯ್ಕೆ ಮಾಡುವುದರ ಮೂಲಕ ಯಂತ್ರೋಪಕರಣಗಳ ಖರೀದಿಗೆ ಸಹಾಯಧನ ಒದಗಿಸಲು ಕ್ರಮವಹಿಸಲಾಗುತ್ತಿದೆ.
    | ಶಿವನಗೌಡ ಪಾಟೀಲ, ಜಂಟಿ ನಿರ್ದೇಶಕ, ಕೃಷಿ ಇಲಾಖೆ

    | ರವಿ ಗೋಸಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts