More

    ರೈತರಿಂದ ವಾಹನ ಸಂಚಾರ ತಡೆ

    ಅಣ್ಣಿಗೇರಿ: ಹಿಂಗಾರು ಹಂಗಾಮಿನ ಬಿತ್ತನೆಗೆ ಕಡಲೆ ಬೀಜ ಸಿಗದ ತಾಲೂಕಿನ ಶಲವಡಿ, ತುಪ್ಪದಕುರಹಟ್ಟಿ, ನಾವಳ್ಳಿ ಗ್ರಾಮಗಳ ರೈತರು ಆಕ್ರೋಶಗೊಂಡು ಅಣ್ಣಿಗೇರಿ ರೈತ ಸಂಪರ್ಕ ಕೇಂದ್ರದ ಮುಂದೆ ಶುಕ್ರವಾರ ವಾಹನ ಸಂಚಾರ ತಡೆ ನಡೆಸಿದರು.

    ಇಲ್ಲಿನ ರೈತ ಸಂಪರ್ಕ ಕೇಂದ್ರದ ಮುಂದೆ ಗುರುವಾದಿಂದ ಪಾಳಿ ಹಚ್ಚಿದ್ದೇವೆ. ಆದರೂ ನಮಗೆ ಹಿಂಗಾರಿಗೆ ಬಿತ್ತಲು ಕಡಲೆ ಬೀಜಗಳು ಸಿಕ್ಕಿಲ್ಲ. ಅಣ್ಣಿಗೇರಿ ತಾಲೂಕು 23 ಗ್ರಾಮಗಳನ್ನು ಒಳಗೊಂಡಿದೆ. 10 ವರ್ಷಗಳಿಂದ ತಾಲೂಕಿನ ಶಲವಡಿ ಗ್ರಾಮ ಮತ್ತು ಅಕ್ಕಪಕ್ಕದ ಗ್ರಾಮಗಳಿಗೆ ಬಿತ್ತನೆ ಬೀಜ ಪೂರೈಸಲು ಸೊಸೈಟಿ ಇತ್ತು. ಇಂಥದ್ದರಲ್ಲಿ ಈ ವರ್ಷ ಸರ್ಕಾರ ಶಲವಡಿ ಗ್ರಾಮದಲ್ಲಿನ ಸೊಸೈಟಿ ಮುಚ್ಚಿದೆ. ಕರೊನಾ ಮಹಾಮಾರಿ ಮಧ್ಯೆಯೂ ಈ ರೀತಿ ಆಡಳಿತ ಮಾಡಿದರೆ ಹೇಗೆ? ನಮಗೆ ಬಸ್ಸಿನ ಸೌಕರ್ಯವೂ ಇಲ್ಲ ಎಂದು ರೈತರು ತಾಲೂಕಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಅಣ್ಣಿಗೇರಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮೈತ್ರಿ ಅವರು ಪ್ರತಿಕ್ರಿಯಿಸಿ, ಸಿಬ್ಬಂದಿ ಕೊರತೆಯಿಂದಾಗಿ ಶಲವಡಿ ಗ್ರಾಮದಲ್ಲಿನ ಸೊಸೈಟಿ ಮುಚ್ಚಿ, ಅಣ್ಣಿಗೇರಿಗೆ ತೆಗೆದುಕೊಳ್ಳಲಾಗಿದೆ ಎಂದು ರೈತರಿಗೆ ತಿಳಿಸಿದರು. ಆಗ ಪ್ರತಿಭಟನಾ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಕೊಟ್ರೇಶ ಗಾಳಿ ಮಾತನಾಡಿ, ಬಿತ್ತನೆ ಬೀಜ ಪೂರೈಕೆ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ರ್ಚಚಿಸುತ್ತೇನೆ. ಎರಡ್ಮೂರು ದಿನಗಳಲ್ಲಿ ಶಲವಡಿ ಗ್ರಾಮದಲ್ಲಿ ಬಿತ್ತನೆ ಬೀಜ ವಿತರಿಸುವಂತೆ ಅಧಿಕಾರಿಗಳಿಗೆ ತಿಳಿಸುತ್ತೇನೆ ಎಂದು ರೈತರಿಗೆ ಭರವಸೆ ನೀಡಿದರು.

    ಎರಡು-ಮೂರು ದಿನಗಳಲ್ಲಿ ಶಲವಡಿ ಗ್ರಾಮಕ್ಕೆ ಬಿತ್ತನೆ ಬೀಜ ಪೂರೈಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ರೈತರು ತಾಲೂಕಾಡಳಿತಕ್ಕೆ ಎಚ್ಚರಿಕೆ ನೀಡಿದರು.

    ಎಪಿಎಂಸಿ ಸದಸ್ಯ ಮಹಾಂತೇಶ ಮೂಲಿಮನಿ, ಎಂ.ಆರ್. ಹಳ್ಳಿ, ಎಸ್.ಎನ್. ಬಸವರೆಡ್ಡಿ, ಎಸ್.ವಿ. ಮರಡಿ ಹಾಗೂ ತಾಲೂಕಿನ ಶಲವಡಿ, ತುಪ್ಪದಕುರಹಟ್ಟಿ, ನಾವಳ್ಳಿ ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts