More

    ರಾಯನಾಳದ ವಸತಿ ನಿಲಯಕ್ಕೆ ಮುಳ್ಳಿನ ಬೇಲಿ!

    ಹುಬ್ಬಳ್ಳಿ: ತಾಲೂಕಿನ ರಾಯನಾಳ ಗ್ರಾಮದ ಹೃದಯ ಭಾಗದಲ್ಲಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಸತಿ ನಿಲಯವನ್ನು ಕ್ವಾರಂಟೈನ್ ಕೇಂದ್ರವನ್ನಾಗಿ ಮಾಡಲು ತಾಲೂಕಾಡಳಿತ ಚಿಂತನೆ ನಡೆಸಿದೆ ಎಂಬ ಸುದ್ದಿ ಕೇಳಿ ಆ ಗ್ರಾಮಸ್ಥರು ಹಾಸ್ಟೆಲ್​ಗೆ ಮುಳ್ಳಿನ ಬೇಲಿ ಹಾಕುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

    ಲಾಕ್​ಡೌನ್ ಸಡಿಲಗೊಳ್ಳುತ್ತಿದ್ದಂತೆ ಹೊರ ರಾಜ್ಯ, ಹೊರ ದೇಶಗಳಿಂದ ಸಾವಿರಾರು ಜನ ಜಿಲ್ಲೆಗೆ ಮರುಳುತ್ತಿದ್ದಾರೆ. ಹೀಗೆ ಬಂದವರನ್ನು ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್ ಮಾಡಲಾಗುತ್ತಿದೆ. ಇದಕ್ಕಾಗಿ ಗ್ರಾಮದ ದೇವರಾಜ ಅರಸು ವಸತಿ ನಿಲಯವನ್ನು ಕ್ವಾರಂಟೈನ್ ಕೇಂದ್ರವನ್ನಾಗಿಸಲು ತಾಲೂಕಾಡಳಿತ ಮುಂದಾಗಿದೆ. ಆ ನಿಟ್ಟಿನಲ್ಲಿ ಕೆಲ ಅಧಿಕಾರಿಗಳು ಗುರುವಾರ ಹಾಸ್ಟೆಲ್​ಗೆ ಭೇಟಿ ನೀಡಿ ಪರಿಶೀಲಿಸಿದರು.

    ಗ್ರಾಮದ ಮಧ್ಯ ಭಾಗದಲ್ಲಿರುವ ಹಾಸ್ಟೆಲ್ ಅಕ್ಕಪಕ್ಕದಲ್ಲಿ ಜನವಸತಿ ಇದೆ. ಹಾಗಾಗಿ, ಗ್ರಾಮಸ್ಥರಿಗೆ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ ಬೇಲಿ ಹಾಕಲಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

    ಅವಶ್ಯಕತೆ ಇದ್ದರೆ ಮಾತ್ರ ಬಳಕೆ

    ತಾಲೂಕಿನ ವಸತಿ ನಿಲಯಗಳ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ನೀಡಲಾಗಿದೆ. ಹೊರ ರಾಜ್ಯಗಳಿಂದ ಹೆಚ್ಚು ಜನ ಬಂದರೆ, ಅಗತ್ಯ ಎನಿಸಿದರೆ ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ಕ್ವಾರಂಟೈನ್​ಗೆ ಬಳಸಲಾಗುವುದು. ಹಾಸ್ಟೆಲ್ ಸರ್ಕಾರದ ಆಸ್ತಿ. ಅದನ್ನು ಬಳಸಿಕೊಳ್ಳಲು ಅಧಿಕಾರವಿದೆ ಎಂದು ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಪ್ರಕಾಶ ನಾಶಿ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts