More

    ರಾಮಲಿಂಗೇಶ್ವರ ಗುಡಿ ಜಾಗ ಬಿಆರ್​ಟಿಎಸ್​ಗೆ, ನಿಯಮಾನುಸಾರ ಪರಿಹಾರ ನೀಡಿ ಕಬ್ಜಾ ಪಡೆಯಲು ಕೋರ್ಟ್ ಆದೇಶ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ಖಾಸಗಿ ಮಾಲೀಕತ್ವದಲ್ಲಿದ್ದ ಇಲ್ಲಿಯ ಉಣಕಲ್ಲ ಕ್ರಾಸ್ ಬಳಿಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಜಾಗವನ್ನು ಬಿಆರ್​ಟಿಎಸ್ ಕಂಪನಿಯು ಗುರುವಾರ ವಶಕ್ಕೆ ತೆಗೆದುಕೊಂಡಿದೆ.

    ಬಿಆರ್​ಟಿಎಸ್ ಯೋಜನೆ ಜಾರಿ ಸಂದರ್ಭದಲ್ಲಿ ಅಗತ್ಯ ಭೂಸ್ವಾಧೀನ ಮಾಡುವಾಗ ದೇವಸ್ಥಾನ ಇರುವ ಜಾಗವೂ ಇದರ ವ್ಯಾಪ್ತಿಯಲ್ಲಿತ್ತು. ಅದರಂತೆ ದರ ನಿಗದಿ ಮಾಡಿದರೂ ಭೂಸ್ವಾಧೀನ ಆಗಿರಲಿಲ್ಲ. ಸರ್ಕಾರವು ದೇವಸ್ಥಾನ ಜಾಗಕ್ಕೆ ಭೂ ಪರಿಹಾರ ನೀಡಿರಲಿಲ್ಲ.

    ನಿಯಮಾವಳಿಯಂತೆ ದೇವಸ್ಥಾನ ಜಾಗಕ್ಕೆ ಪರಿಹಾರ ನೀಡಬೇಕೆಂದು ಜಾಗದ ಮಾಲೀಕರಾದ ಹಬೀಬ ಹಾಗೂ ಮೆಹರವಾಡೆ ಎನ್ನುವವರು ಧಾರವಾಡ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ನ್ಯಾಯಾಲಯವು ಸೂಕ್ತ ಪರಿಹಾರ ನೀಡಿ ಜಾಗ ಕಬ್ಜಾ ತೆಗೆದುಕೊಳ್ಳುವಂತೆ ಬಿಆರ್​ಟಿಎಸ್ ಕಂಪನಿಗೆ ಆದೇಶ ಮಾಡಿದೆ.

    ಈ ಹಿನ್ನೆಲೆಯಲ್ಲಿ ಇಲ್ಲಿಯ ಉಣಕಲ್ಲ ಕ್ರಾಸ್​ನಲ್ಲಿರುವ ದೇವಸ್ಥಾನಕ್ಕೆ ಪೊಲೀಸ್ ಸಿಬ್ಬಂದಿಯೊಂದಿಗೆ ತೆರಳಿದ ಬಿಆರ್​ಟಿಎಸ್ ಕಂಪನಿ ಅಧಿಕಾರಿಗಳು ಜಾಗ ಕಬ್ಜಾ ತೆಗೆದುಕೊಂಡಿದ್ದಾರೆ. ‘ಉಣಕಲ್ಲ ಸಿಟಿಎಸ್ ನಂ. 3448ರಲ್ಲಿರುವ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಕಟ್ಟಡ ಇರುವ ಕ್ಷೇತ್ರವು ಹುಬ್ಬಳ್ಳಿ- ಧಾರವಾಡ ಬಿಆರ್​ಟಿಎಸ್ ಕಂಪನಿ ಒಡೆತನಕ್ಕೆ ಸೇರಿರುತ್ತದೆ. ಪ್ರಯುಕ್ತ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿದೆ’ ಎಂದು ಫಲಕವನ್ನು ಹಾಕಿದೆ.

    ಜಾಗ ಮಾತ್ರ ವಶಕ್ಕೆ ಪಡೆದಿರುವ ಬಿಆರ್​ಟಿಎಸ್ ಕಂಪನಿಯು ದೇವಸ್ಥಾನದ ವಿಧಿ ವಿಧಾನಗಳಿಗೆ ಯಾವುದೇ ತೊಂದರೆ ಮಾಡಿಲ್ಲ. ಎಂದಿನಂತೆ ಪೂಜಾ ಕಾರ್ಯಗಳು ನಡೆದಿದ್ದವು.

    ಭೈರಿದೇವರಕೊಪ್ಪ ಬಳಿಯ ದರ್ಗಾ ಜಾಗವೂ ಯೋಜನೆ ವ್ಯಾಪ್ತಿಯಲ್ಲಿದೆ. ಅದರ ತೆರವು ಕಾರ್ಯವನ್ನು ಬಿಆರ್​ಟಿಎಸ್ ಕಂಪನಿ ಬಾಕಿ ಉಳಿಸಿಕೊಂಡಿದೆ. ಮೂರ್ನಾಲ್ಕು ಬಾರಿ ನೋಟಿಸ್ ನೀಡಿದ್ದ ಕಂಪನಿ ವಿರುದ್ಧ ಈ ಪ್ರಾರ್ಥನಾ ಮಂದಿರದವರು ನ್ಯಾಯಾಲಯ ಮೊರೆ ಹೋಗಿದ್ದರು. ನ್ಯಾಯಾಲಯ ತಡೆಯಾಜ್ಞೆ ನೀಡಿರುವುದರಿಂದ ತೆರವು ಮಾಡಿಲ್ಲ. ತಡೆಯಾಜ್ಞೆ ತೆರವಿಗಾಗಿ ಕಂಪನಿಯು ಮನವಿ ಮಾಡಿದೆ ಎಂದು ಬಿಆರ್​ಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.

    ————-

    ಕೋಟ್…

    ಐತಿಹಾಸಿಕ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಉದ್ಭವ ಶಿವಲಿಂಗ ಮೂರ್ತಿ ಇದೆ. ಜಾಗದ ಮಾಲೀಕತ್ವ ಖಾಸಗಿಯವರಿಂದ ಇದೀಗ ಬಿಆರ್​ಟಿಎಸ್​ಗೆ ಹೋಗಿದೆಯಷ್ಟೇ. ಅಲ್ಲಿ ಪೂಜಾ ಕೈಂಕರ್ಯಗಳು ನಿರಂತರವಾಗಿ ನಡೆಯಲಿವೆ. ಯಾವುದೇ ಕಾರಣಕ್ಕೂ ಅದಕ್ಕೆ ಧಕ್ಕೆಯಾಗಬಾರದು. ದೇವಸ್ಥಾನ ತೆರವು ಮಾಡಲು ಬಿಡುವುದಿಲ್ಲ.

    – ರಾಜಣ್ಣ ಕೊರವಿ, ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ.

    —————-

    ಕೋಟ್…

    ಖಾಸಗಿ ಮಾಲೀಕತ್ವದಲ್ಲಿದ್ದ ದೇವಸ್ಥಾನದ ಜಾಗವನ್ನು ನ್ಯಾಯಾಲಯದ ಆದೇಶದಂತೆ ಗುರುವಾರ ಕಂಪನಿ ತಾಬಾ ತೆಗೆದುಕೊಳ್ಳಲಾಗಿದೆ. ನಿಯಮಾವಳಿಯಂತೆ ಸುಮಾರು 90 ಲಕ್ಷ ರೂ. ಭೂ ಪರಿಹಾರ ನೀಡಲಾಗುವುದು.

    – ರಮೇಶ ಗುಡರಡ್ಡಿ, ಡಿಜಿಎಂ, ಎಚ್​ಡಿಬಿಆರ್​ಟಿಎಸ್

    ———————-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts