More

    ರಾಣೆಬೆನ್ನೂರ ಗ್ರಾಮೀಣ ಠಾಣೆ ಶೀಘ್ರವೇ ಮೇಲ್ದರ್ಜೆಗೆ

    ರಾಣೆಬೆನ್ನೂರ: ದಿನೇದಿನೆ ವಾಣಿಜ್ಯ ನಗರಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿಯ ಗ್ರಾಮೀಣ ಪೊಲೀಸ್ ಠಾಣೆ ಶೀಘ್ರದಲ್ಲಿಯೇ ಮೇಲ್ದರ್ಜೆಗೇರಲಿದೆ.

    ಅಪರಾಧ ಪ್ರಕರಣಗಳ ತನಿಖೆ, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸ್ ಮಹಾನಿರ್ದೇಶಕರು ರಾಜ್ಯದ ವಿವಿಧ ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲು ಮುಂದಾಗಿದ್ದು, ರಾಣೆಬೆನ್ನೂರ ಗ್ರಾಮೀಣ ಠಾಣೆಯನ್ನು ಆಯ್ಕೆ ಮಾಡಲಾಗಿದೆ.

    ಈ ಬಗ್ಗೆ ಬೆಂಗಳೂರು ಪೊಲೀಸ್ ಮಹಾನಿರ್ದೇಶಕರು ಆಯಾ ವಲಯ ಮಹಾನಿರ್ದೇಶಕರಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಅಭಿಪ್ರಾಯ ಕೇಳಿ, ಸೆ. 14ರೊಳಗೆ ವರದಿ ಸಲ್ಲಿಸಲು ಸೂಚಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಹ ಠಾಣೆಯನ್ನು ಮೇಲ್ದರ್ಜೆಗೇರಿಸಿದರೆ ಅನುಕೂಲ ಎಂದು ವರದಿ ಸಲ್ಲಿಸಿದ್ದಾರೆ.

    ಪಿಎಸ್​ಐ ಬದಲು ಪೊಲೀಸ್ ಇನ್ಸ್​ಪೆಕ್ಟರ್: ಇಷ್ಟು ದಿನಗಳ ಕಾಲ ಗ್ರಾಮೀಣ ಠಾಣೆಗೆ ಪಿಎಸ್​ಐ ಠಾಣಾಧಿಕಾರಿಯಾಗಿದ್ದರು. ಮೇಲ್ದರ್ಜೆಗೇರಿದರೆ ಪೊಲೀಸ್ ಇನ್ಸ್​ಪೆಕ್ಟರ್ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಈವರೆಗೆ ತಾಲೂಕಿನ ಗ್ರಾಮೀಣ, ಹಲಗೇರಿ, ಕುಮಾರಪಟ್ಟಣ ಸೇರಿ ಒಬ್ಬ ಪೊಲೀಸ್ ಇನ್ಸಪೆಕ್ಟರ್ ಮೇಲುಸ್ತುವಾರಿ ವಹಿಸಿಕೊಂಡಿದ್ದರು. ಆದರೀಗ ಪ್ರತ್ಯೇಕವಾಗಿ ಗ್ರಾಮೀಣ ಠಾಣೆಗೆ ಒಬ್ಬ ಪೊಲೀಸ್ ಇನ್ಸ್​ಪೆಕ್ಟರ್ ಇರಲಿದ್ದಾರೆ.

    ಗ್ರಾಮೀಣ ಠಾಣೆ ವೃತ್ತದಲ್ಲಿದ್ದ ಹಲಗೇರಿ ಹಾಗೂ ಕುಮಾರಪಟ್ಟಣ ಠಾಣೆಯನ್ನು ಬೇರ್ಪಡಿಸಿದ್ದು ಎರಡೂ ಸೇರಿ ‘ಹಲಗೇರಿ ವೃತ್ತ’ ಎಂದು ಮರುನಾಮಕರಣ ಮಾಡಲಾಗಿದೆ. ಎರಡೂ ಠಾಣೆ ಸೇರಿ ಒಬ್ಬ ಪೊಲೀಸ್ ಇನ್ಸ್​ಪೆಕ್ಟರ್ ನೇಮಕವಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಶಹರ ಠಾಣೆ ಪೊಲೀಸ್ ಇನ್ಸ್​ಪೆಕ್ಟರ್ ಸೇರಿ ತಾಲೂಕಿನಲ್ಲಿ ಇನ್ಮುಂದೆ ಮೂವರು ಪೊಲೀಸ್ ಇನ್ಸ್​ಪೆಕ್ಟರ್ ಕಾರ್ಯನಿರ್ವಹಿಸಲಿದ್ದಾರೆ.

    ಹಾವೇರಿ ಜಿಲ್ಲೆಯಲ್ಲೇ ಅತಿಹೆಚ್ಚು ಅಪರಾಧ ಪ್ರಕರಣ ದಾಖಲಾಗುವುದು ರಾಣೆಬೆನ್ನೂರಿನಲ್ಲಿ. ಹೀಗಾಗಿ, ಗ್ರಾಮೀಣ ಠಾಣೆಯನ್ನು ಮೇಲ್ದರ್ಜೆಗೆ ಏರಿಸಲು ಮುಂದಾಗಿರುವುದರಿಂದ ಅಪರಾಧ ಪ್ರಕರಣ ತಡೆಯುವಲ್ಲಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಅನುಕೂಲವಾಗಲಿದೆ ಎಂಬುದು ಜನರ ಅಭಿಪ್ರಾಯವಾಗಿದೆ.

    ಈಡೇರದ ಇನ್ನೊಂದು ಠಾಣೆ ಕನಸು: ರಾಣೆಬೆನ್ನೂರ ನಗರದಲ್ಲಿ 2011ರ ಜನಗಣತಿ ಪ್ರಕಾರ ಒಂದೂವರೆ ಲಕ್ಷ ಜನಸಂಖ್ಯೆಯಿತ್ತು. ಇದೀಗ ಜನಸಂಖ್ಯೆ ಎರಡ್ಮೂರು ಪಟ್ಟು ಹೆಚ್ಚಳವಾಗಿದೆ. ಆದರೆ, ನಗರಕ್ಕೆ ಒಂದೇ ಠಾಣೆ ಇರುವುದರಿಂದ ಬಂದೋಬಸ್ತ್​ಗೆ ತೊಂದರೆ ಉಂಟಾಗಿದೆ. ಶ್ರೀರಾಮ ನಗರದಲ್ಲೊಂದು ಠಾಣೆ ನಿರ್ವಿುಸಬೇಕು ಎಂಬ ಬೇಡಿಕೆ ಇನ್ನೂ ಬಾಕಿಯಿದೆ. ಈ ಬಗ್ಗೆ ಪೊಲೀಸ್ ಮೇಲಧಿಕಾರಿಗಳು ಹಾಗೂ ಸ್ಥಳೀಯ ಶಾಸಕರು ಗಮನ ಹರಿಸಿ ಶಹರಕ್ಕೆ ಇನ್ನೊಂದು ಠಾಣೆ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

    ರಾಣೆಬೆನ್ನೂರ ಗ್ರಾಮೀಣ ಪೊಲೀಸ್ ಠಾಣೆ ಮೇಲ್ದರ್ಜೆಗೆ ಏರಿಸುವ ಕುರಿತು ಮೇಲಧಿಕಾರಿಗಳಿಂದ ಅಭಿಪ್ರಾಯ ಕೇಳಿ ಪ್ರಸ್ತಾವನೆ ಬಂದಿದೆ. ಮೇಲ್ದರ್ಜೆಗೆ ಏರಿದರೆ ಅನುಕೂಲವಾಗಲಿದೆ ಎಂಬ ವರದಿ ಸಲ್ಲಿಸಿದ್ದೇವೆ. ಈ ಬಗ್ಗೆ ಅಧಿಕೃತ ಆದೇಶ ಬಾಕಿಯಿದೆ.

    | ಕೆ.ಜೆ. ದೇವರಾಜ, ಎಸ್ಪಿ ಹಾವೇರಿ

    ರಾಣೆಬೆನ್ನೂರ ಗ್ರಾಮೀಣ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೆ ಏರಿಸಲು ಪೊಲೀಸ್ ಇಲಾಖೆ ಮುಂದಾಗಿರುವುದು ಸ್ವಾಗತಾರ್ಹ. ಆದರೆ, ರಾಣೆಬೆನ್ನೂರ ನಗರದಲ್ಲಿ ಇನ್ನೊಂದು ಠಾಣೆ ಮಾಡುವ ಪ್ರಸ್ತಾವನೆ ಸರ್ಕಾರದ ಹಂತದಲ್ಲಿಯೇ ಉಳಿದುಕೊಂಡಿದ್ದು, ಕೂಡಲೆ 2ನೇ ಠಾಣೆ ಮಾಡಿದರೆ ಅಪರಾಧ ಪ್ರಕರಣ ತಡೆಗೆ ಅನುಕೂಲವಾಗಲಿದೆ.

    | ಹನುಮಂತ ಕೆ., ಸ್ಥಳೀಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts