More

    ಕನಕಗಿರಿಯಲ್ಲಿ ಅಶ್ಲೀಲ ಗೋಡೆಬರಹ ಪ್ರಕರಣ ಗಂಭೀರ ಪರಿಗಣನೆ; ಕೊಪ್ಪಳ ಎಸ್ಪಿ ಹೇಳಿಕೆ

    ಕನಕಗಿರಿ: ಅಶ್ಲೀಲ ಗೋಡೆಬರಹದ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿದ್ದರೂ, ಪಟ್ಟಣದಲ್ಲಿ ಕೃತ್ಯ ಮುಂದುವರಿದಿದ್ದು, ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಶೀಘ್ರ ಕಿಡಿಗೇಡಿಗಳನ್ನು ಬಂಧಿಸಲಾಗುವುದೆಂದು ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಭರವಸೆ ನೀಡಿದರು.

    ಹಲವು ದಿನಗಳಿಂದ ನಡೆಯುತ್ತಿರುವ ಅಶ್ಲೀಲ ಗೋಡೆ ಬರಹ ಪರಿಶೀಲನೆಗಾಗಿ ಸೋಮವಾರ ಪಟ್ಟಣಕ್ಕೆ ಆಗಮಿಸಿದ್ದ ಅವರು, ಇಲ್ಲಿನ ಕೆಪಿಎಸ್ ಕಾಲೇಜು ವಿಭಾಗದಲ್ಲಿ ನಾನಾ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕಿಯರ ಸಭೆಯಲ್ಲಿ ಮಾತನಾಡಿದರು.

    ಕಳೆದ ವರ್ಷ ಮೊದಲ ಪ್ರಕರಣ ದಾಖಲಾದ ಬಳಿಕ ಸುಮ್ಮನಾಗಿದ್ದ ಕಿಡಿಗೇಡಿಗಳು ಕಳೆದೊಂದು ತಿಂಗಳಿಂದ ಮತ್ತೆ ಬರೆಯುವುದನ್ನು ಶುರುವಿಟ್ಟುಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಮತ್ತೊಂದು ಪ್ರಕರಣ ದಾಖಲಾಗಿದ್ದು, ಈ ದುಷ್ಕೃತ್ಯ ಮಾಡುತ್ತಿರುವವರನ್ನು ಬಂಧಿಸಲು ಪೊಲೀಸ್ ಇಲಾಖೆ ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಕೀಡಿಗೇಡಿಗಳ ಪತ್ತೆಗೆ ಎಲ್ಲರ ಸಹಕಾರ ಅಗತ್ಯ ಎಂದರು.

    ಶಾಲಾ-ಕಾಲೇಜುಗಳ ಶಿಕ್ಷಕರ ನಡುವೆ ಭಿನ್ನಾಭಿಪ್ರಾಯ ಸಹಜ. ಆದರೆ, ಈ ಕೃತ್ಯದಲ್ಲಿ ವಿದ್ಯಾರ್ಥಿನಿಯರ ಭವಿಷ್ಯ ಅಡಗಿದೆ. ಅವಳು ನಮ್ಮ ಮಗಳು ಎನ್ನುವ ಭಾವನೆಯಿಂದ ಶಿಕ್ಷಕರು ನಡೆದುಕೊಂಡು ಈ ಕೃತ್ಯದ ಹಿಂದಿರುವ ಕಿಡಿಗೇಡಿಗಳ ಬಂಧನಕ್ಕೆ ಸಹಕರಿಸಬೇಕು. ಶಾಲಾ ಕಾಲೇಜಿನಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣ ನೀಡಬೇಕು ಎಂದರು.

    ಯಾವುದೋ ಒಂದು ವಿಕೃತ ಮನಸ್ಸು ಮಾಡುವ ಇಂತಹ ಕೃತ್ಯದಿಂದ ಶಾಲೆ, ಗ್ರಾಮದ ಹೆಸರು ಹಾಳಾಗುತ್ತದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರತಿ ತರಗತಿಯಲ್ಲಿ ಆತ್ಮಸ್ಥೈರ್ಯ ತುಂಬಬೇಕು. ಧೈರ್ಯದಿಂದ ಶಾಲೆಗೆ ಬರುವಂತೆ ಪ್ರೆರೇಪಿಸಬೇಕು. ಶಾಲಾ- ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ತಮ್ಮ ಸಮಸ್ಯೆ ಹೇಳಿಕೊಳ್ಳಲು ದೂರು ಪೆಟ್ಟಿಗೆಗಳನ್ನು ಅಳವಡಿಸಬೇಕು ಎಂದು ತಿಳಿಸಿದರು.

    ಸಿಸಿ ಕ್ಯಾಮರಾ ಇಲ್ಲದ್ದಕ್ಕೆ ಎಸ್‌ಪಿ ಆಕ್ರೋಶ; ಒಂದೇ ಕ್ಯಾಂಪಸ್‌ನಲ್ಲಿ ಕೆಪಿಎಸ್ ಕಿರಿಯ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು, ಮೌಲಾನಾ ಆಜಾದ್ ಶಾಲೆಗಳಿದ್ದು, ಒಂದು ಸಿಸಿ ಕ್ಯಾಮರಾ ಇಲ್ಲದಿರುವುದು ಬೇಸರದ ಸಂಗತಿ. ಈ ಹಿಂದೆ ಇದ್ದ ಕ್ಯಾಮರಾ ಕೆಟ್ಟು ಹಲವು ದಿನ ಕಳೆದಿದ್ದರೂ, ಅದರ ದುರಸ್ತಿ ಮಾಡದಿರುವ ಬಗ್ಗೆ ಎಸ್ಪಿ ಯಶೋದಾ ವಂಟಗೋಡಿ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಶೀಘ್ರ ಕ್ಯಾಂಪಸ್‌ನ ಆಯ್ದ ಕಡೆಗಳಲ್ಲಿ ನೈಟ್ ವಿಸನ್ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಡಿಡಿಪಿಐಗೆ ಸೂಚಿಸಿದರಲ್ಲದೇ, ಅನುದಾನವಿಲ್ಲ, ಹಾಕಲಾಗುವುದಿಲ್ಲ ಎನ್ನುವುದಾದರೆ, ಪತ್ರ ಬರೆದುಕೊಡಿ ಎಂದು ಎಚ್ಚರಿಕೆ ನೀಡಿದರು.

    ಪ್ರಾಚಾರ್ಯ ಮಾರೆಪ್ಪ ಎನ್., ಪಿಐ ಜಗದೀಶ ಕೆ.ಜೆ., ಅಲ್ಪಸಂಖ್ಯಾತ ಇಲಾಖೆಯ ತಾಲೂಕು ಅಧಿಕಾರಿ ಶ್ರೀನಿವಾಸ, ಆದರ್ಶ ಶಾಲೆ ಮುಖ್ಯಶಿಕ್ಷಕ ಶಿವಕುಮಾರ, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅನಿಲ್‌ಕುಮಾರ ಇತರರಿದ್ದರು.

    ಸಮಾಜದಲ್ಲಿ ಕೆಲ ದುಷ್ಟ ಮನಸ್ಸುಗಳು ಇಂತಹ ಕೃತ್ಯಕ್ಕೆ ಇಳಿದಿವೆ. ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಅದಕ್ಕಾಗಿ ಶಾಲಾ-ಕಾಲೇಜುಗಳ ಶಿಕ್ಷಕರು ತಮ್ಮ ಸುತ್ತಲಿನವರಿಗೆ ತಿಳಿವಳಿಕೆ ನೀಡುವ ಕೆಲಸ ಮಾಡಬೇಕು. ಇದರಿಂದ ಇಂತಹ ಕ್ರಿಮಿಗಳಿಗೆ ಕಡಿವಾಣ ಹಾಕಲು ಸಾಧ್ಯ.
    ಮುತ್ತುರೆಡ್ಡಿ ರೆಡ್ಡೇರ್ ಡಿಡಿಪಿಐ, ಕನಕಗಿರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts