More

    ರಾಜ್ಯ ಪಡಿತರ ವ್ಯವಸ್ಥೆ ದೇಶಕ್ಕೇ ಮಾದರಿ!

    ಬೆಳಗಾವಿ: ಆಡಳಿತ ವ್ಯವಸ್ಥೆಯಲ್ಲಿ ಹೊಸ ಹೊಸ ತಂತ್ರಜ್ಞಾನ ಅಳವಡಿಸಿ ಅನುಷ್ಠಾನಗೊಳಿಸುತ್ತಿರುವ ಕರ್ನಾಟಕ ಸರ್ಕಾರದ ‘ಪಡಿತರ ವಿತರಣಾ ಆನ್‌ಲೈನ್ ವ್ಯವಸ್ಥೆ’ ಇದೀಗ ದೇಶಕ್ಕೆ ಮಾದರಿಯಾಗಿದೆ. ಧಾನ್ಯ ವಿತರಣೆಗೆ ಅಳವಡಿಸಿಕೊಂಡಿರುವ ಆನ್‌ಲೈನ್ ವ್ಯವಸ್ಥೆ ಕಂಡು ಕೇರಳ ವಿವಿ ನೋಡಲ್ ಅಧಿಕಾರಿ ಡಾ.ಮಂಜು ಎಸ್. ನಾಯರ್ ನೇತೃತ್ವದ ತಂಡ ತಂಡವೇ ಬೆರಗಾಗಿದೆ.

    ಹೌದು, ದೇಶದ ಯಾವ ರಾಜ್ಯದಲ್ಲೂ ಇಷ್ಟು ದೊಡ್ಡ ಆನ್‌ಲೈನ್ ಪಡಿತರ ವಿತರಣೆ ವ್ಯವಸ್ಥೆ ಇಲ್ಲ. ನಗರ ಮತ್ತು ಗ್ರಾಮೀಣ ಪ್ರದೇಶದ ಶೇ.90 ಜನರು ಈ ವ್ಯವಸ್ಥೆಯಿಂದಲೇ ಪಡಿತರ ಆಹಾರ ಧಾನ್ಯ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಬಿಪಿಎಲ್, ಅಂತ್ಯೋದಯ, ಎಪಿಎಲ್ ಸೇರಿ ಒಟ್ಟು 1.50 ಕೋಟಿ ರೇಷನ್ ಕಾರ್ಡ್ ಹೊಂದಿರುವ ವ್ಯಕ್ತಿಗಳು ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ಪಡಿತರ ಧಾನ್ಯಗಳನ್ನು (ಅಕ್ಕಿ, ಗೋಧಿ, ಜೋಳ, ರಾಗಿ) ಪಡೆಯುತ್ತಿದ್ದಾರೆ. ಸುಮಾರು 28,540 ನ್ಯಾಯ ಬೆಲೆ ಅಂಗಡಿಗಳು ಸಂಪೂರ್ಣ ಆನ್‌ಲೈನ್ ವ್ಯವಸ್ಥೆ ಅಳವಡಿಸಿಕೊಂಡಿವೆ. ಹಾಗಾಗಿ, ಪಡಿತರ ಚೀಟಿದಾರರು ಬಯೋಮೆಟ್ರಿಕ್ ವ್ಯವಸ್ಥೆ ಮೂಲಕವೇ ಧಾನ್ಯಗಳನ್ನು ಪಡೆಯುತ್ತಿದ್ದಾರೆ. ಆದರೆ, ನೆರೆಯ ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಾಂಗಣ ಸೇರಿ ವಿವಿಧ ರಾಜ್ಯಗಳಲ್ಲಿ ಪಡಿತರ ಧಾನ್ಯ ವಿತರಿಸಲು ಬಯೋಮೆಟ್ರಿಕ್ ವ್ಯವಸ್ಥೆ ಇಲ್ಲ. ಈಗಲೂ ನ್ಯಾಯಬೆಲೆ ಅಂಗಡಿಗಳಲ್ಲಿ ಹಳೆಯ ಪದ್ಧತಿ ಮೂಲಕವೇ ಪಡಿತರ ಧಾನ್ಯ ವಿತರಣೆ ಮಾಡಲಾಗುತ್ತಿದೆ.

    ಕರ್ನಾಟಕದಲ್ಲಿ ಪಡಿತರ ಧಾನ್ಯ ವಿತರಿಸಲು ಬಯೋಮೆಟ್ರಿಕ್ ವ್ಯವಸ್ಥೆ ಪದ್ದತಿ ಅಳವಡಿಸಿಕೊಂಡಿರುವುದರಿಂದ ರೇಷನ್ ಕಾರ್ಡ್ ಹೊಂದಿರುವ ವ್ಯಕ್ತಿ ತಿಂಗಳಿಗೆ ಸರಿಯಾದ ಸಮಯಕ್ಕೆ ಪಡಿತರ ಧಾನ್ಯಗಳನ್ನು ನೆರವಾಗಿ ಪಡೆಯುತ್ತಿದ್ದಾರೆ. ಬಡವರ ಹೆಸರಿನಲ್ಲಿ ಬೇರೆ ಧಾನ್ಯಗಳನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದರ ಕುರಿತು ಕೇರಳ ವಿವಿ ನೋಡಲ್ ಅಧಿಕಾರಿ ಡಾ.ಮಂಜು ಎಸ್. ನಾಯರ್ ನೇತೃತ್ವದ ಅಧ್ಯಯನ ತಂಡ ನ್ಯಾಯ ಬೆಲೆ ಅಂಗಡಿಗಳಿಗೆ, ಗೋದಾಮುಗಳಿಗೆ, ಪಡಿತರ ಚೀಟಿದಾರರ ಮನೆಗಳಿಗೆ ಭೇಟಿ ನೀಡಿ ಖಚಿತಪಡಿಸಿಕೊಂಡಿದೆ.

    ಕರ್ನಾಟಕ ಇತರ ರಾಜ್ಯಗಳಿಗೆ ಮಾದರಿ: ಕರ್ನಾಟಕದಲ್ಲಿ ಪಡಿತರ ಚೀಟಿ ಅರ್ಜಿಯಿಂದ ಧಾನ್ಯಗಳ ವಿತರಣೆವರೆಗೆ ಆನ್‌ಲೈನ್ ವ್ಯವಸ್ಥೆ ಅಳವಡಿಸಿಕೊಂಡಿರುವ ರಾಜ್ಯದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಸಗಟು ಮಳಿಗೆಗಳಿಂದ ನ್ಯಾಯ ಬೆಲೆ ಅಂಗಡಿಯವರೆಗೆ ಧಾನ್ಯಯಲ್ಲಿ ಸೋರಿಕೆಯಾಗದಂತೆ ಜಿಪಿಎಸ್, ಬಯೋಮೆಟ್ರಿಕ್ ಪದ್ಧತಿ ಅಳವಡಿಸಿಕೊಂಡಿರುವುದು ಅದ್ಬುತ. ಸರ್ಕಾರದ ಆಹಾರ ಧಾನ್ಯಗಳ ಸೌಲಭ್ಯಗಳು ಬಡವರ ಕೈಗೆ ನೇರವಾಗಿ ತಲುಪಿಸುತ್ತಿರುವುದು ಹೆಮ್ಮೆಯ ವಿಷಯ. ಕರ್ನಾಟಕ ಮಾದರಿಯ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಎಲ್ಲ ರಾಜ್ಯಗಳು ಅಳವಡಿಸಿಕೊಳ್ಳುವುದು ಸೂಕ್ತ. ಈ ಆನ್‌ಲೈನ್ ವ್ಯವಸ್ಥೆ ಕುರಿತು ಜನರಿಂದ ಒಳ್ಳೆಯ ಅಭಿಪ್ರಾಯಗಳು ಕೇಳಿಬರುತ್ತಿವೆ ಎಂದು ಅಧ್ಯಯನ ತಂಡ ಅಭಿಪ್ರಾಯಪಟ್ಟಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts