More

    ರಸಲಿಂಗು ದರ್ಶನಕ್ಕೆ ಭಕ್ತರ ದಂಡು

    ಮುಂಡರಗಿ: ದಕ್ಷಿಣ ಕಾಶಿ ಎಂದು ಗುರುತಿಸಿಕೊಂಡಿರುವ ತಾಲೂಕಿನ ವಿಠಲಾಪುರ ಗ್ರಾಮವು ಪುರಾಣ ಪ್ರಸಿದ್ಧ ಕ್ಷೇತ್ರವಾಗಿದೆ. ಶ್ರೀ ಬಿಷ್ಟಪ್ಪಯ್ಯನವರು ವಾಸ ಮಾಡಿ ತಪ, ಜ್ಞಾನ, ಅನುಷ್ಠಾನಗಳಿಂದ ಪಾವನಗೊಳಿಸಿದ ಪುಣ್ಯಸ್ಥಳವಿದು.

    ರಸಶಾಸ್ತ್ರಜ್ಞರಾಗಿದ್ದ ಬಿಷ್ಟಪ್ಪಯ್ಯನವರು ಕ್ರಿ.ಶ. 15ನೇ ಶತಮಾನದಲ್ಲಿ ವಿಠಲಾಪುರದಲ್ಲಿ ಶ್ರೀ ಮಹಾರಸಲಿಂಗೇಶ್ವರ ದೇವಸ್ಥಾನ ನಿರ್ವಿುಸಿದರು. ದೇವಸ್ಥಾನದಲ್ಲಿನ 30 ಕೆ.ಜಿ. ತೂಕದ ರಸಲಿಂಗು ಮೂರ್ತಿಗೆ ನಿತ್ಯ ಅಭಿಷೇಕ, ಪೂಜೆ ಕಾರ್ಯಗಳನ್ನು ಗ್ರಾಮದ ಮಹಾಪುರುಷ ಮನೆತನದವರು ನಡೆಸುತ್ತಾರೆ.

    ಮೂರ್ತಿಯು ಪಂಚಲೋಹಗಳಿಂದ ತಯಾರಾಗಿದೆ. ಒಳಭಾಗ ಸಂಪೂರ್ಣ ಪಾದರಸದಿಂದ ತುಂಬಿದೆ. ಹವಾಮಾನದಲ್ಲಿ ಉಷ್ಣತೆ ಹೆಚ್ಚಾದಾಗ ರಸಲಿಂಗುವಿನಲ್ಲಿರುವ ಪಾದರಸ ಹೊರದೂಡಲ್ಪಡುತ್ತದೆ. ಪ್ರತಿ 12ರಿಂದ 15 ವರ್ಷಕ್ಕೆ ಒಂದೆರಡು ಹನಿ ಪಾದರಸ ಪ್ರಸಾದ ರೂಪದಲ್ಲಿ ಬರುತ್ತದೆ ಎನ್ನಲಾಗುತ್ತಿದೆ.

    1965ರಲ್ಲಿ, 2001ರಲ್ಲಿ ಲಿಂಗುವಿನಿಂದ ಪಾದರಸ ಹೊರಬಂದಿತ್ತು. ಅದನ್ನು ಮಹಾಪುರುಷ ಮನೆತನದವರು ಸಂಗ್ರಹಿಸಿಟ್ಟಿದ್ದಾರೆ. ದಿನಕ್ಕೆ ಮೂರು ಬಣ್ಣಗಳಿಗೆ ತಿರುಗುವ ರಸಲಿಂಗು ಬೆಳಗ್ಗೆ ಕೆಂಪು, ಮಧ್ಯಾಹ್ನ ಬಂಗಾರ, ಸಂಜೆ ಹಳದಿ ವರ್ಣದಲ್ಲಿ ಅತ್ಯಾಕರ್ಷಕವಾಗಿ ಕಾಣುತ್ತದೆ.

    ರಸಲಿಂಗುವನ್ನು ರಸಶಾಸ್ತ್ರ ಜ್ಞಾನದ ತಳಹದಿ ಮೇಲೆ ಸಾಕಾರಗೊಳಿಸಲಾಗಿದೆ ಎಂಬುದು ಪ್ರತೀತಿ. ಮಹಾಶಿವರಾತ್ರಿ ದಿನದಂದು ರಾಜ್ಯ, ಹೊರರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ.

    ವಿಶೇಷ ಪೂಜೆ: ಮಹಾಶಿವರಾತ್ರಿಯಂದು ಮಹಾರಸಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ಮರುದಿನ ಬೆಳಗ್ಗೆವರೆಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಶಿವನಿಗೆ ಪ್ರಿಯವಾದ ಮಹಾರುದ್ರಾಭಿಷೇಕ ನಡೆಯುತ್ತದೆ. ಶಿವರಾತ್ರಿ ಮರುದಿನ ಬೆಳಗ್ಗೆ ದೇವಸ್ಥಾನದಲ್ಲಿ ಮಹಾಪ್ರಸಾದ ವ್ಯವಸ್ಥೆ ಇರುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts