More

    ರಸಗೊಬ್ಬರ ದಾಸ್ತಾನು ಪರಿಶೀಲನೆ

    ನರಗುಂದ: ಯೂರಿಯಾ ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಲಾಗಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಪಟ್ಟಣದ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ ಮಂಗಳವಾರ ಭೇಟಿ ನೀಡಿ ಗೊಬ್ಬರ ದಾಸ್ತಾನು ಪರಿಶೀಲಿಸಿದರು.

    ಈ ಕುರಿತು ‘ವಿಜಯವಾಣಿ’ಯಲ್ಲಿ ಆ. 4 ರಂದು ‘ಯೂರಿಯಾ ಗೊಬ್ಬರಕ್ಕಾಗಿ ನೂಕುನುಗ್ಗಲು’ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ ಮಾತನಾಡಿ, ‘ತಾಲೂಕಿನಲ್ಲಿ ನಿರಂತರವಾಗಿ ರಸಗೊಬ್ಬರ ವಿತರಿಸಲಾಗುತ್ತಿದೆ. ಆದರೆ, ಇತ್ತೀಚೆಗೆ ಏಕಕಾಲಕ್ಕೆ ಬಹಳಷ್ಟು ರೈತರು ಯೂರಿಯಾ ಗೊಬ್ಬರಕ್ಕಾಗಿ ಬರುತ್ತಿರುವುದರಿಂದ ಅಭಾವ ಕಂಡು ಬರುತ್ತಿದೆ. ಇದರಿಂದಾಗಿ ಸೋಮವಾರ ರೈತರ ನೂಕುನುಗ್ಗಲು ಉಂಟಾಯಿತು ಎಂದು ಸ್ಪಷ್ಟನೆ ನೀಡಿದರು.

    ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರು ಕೃಷಿ ಆಯುಕ್ತರೊಂದಿಗೆ ಮಾತನಾಡಿದ್ದು, ಹೆಚ್ಚುವರಿ ಯೂರಿಯಾ ಒದಗಿಸುವಂತೆ ಸೂಚಿಸಿದ್ದಾರೆ. ಗುರುವಾರ ಅಥವಾ ಶುಕ್ರವಾರ ನರಗುಂದ ತಾಲೂಕಿಗೆ 100 ಟನ್ ರಸಗೊಬ್ಬರ ತರಿಸುವ ವ್ಯವಸ್ಥೆ ಮಾಡಿದ್ದಾರೆ. ಹೆಚ್ಚುವರಿ ರಸಗೊಬ್ಬರ ದಾಸ್ತಾನು ಕಳುಹಿಸಲು ಜಂಟಿ ಕೃಷಿ ನಿರ್ದೇಶಕರು ಸೂಕ್ತ ಕ್ರಮ ಕೈಗೊಂಡಿದ್ದಾರೆ. ಬೆಳೆಗಳಿಗೆ ರಸಗೊಬ್ಬರ ನೀಡಲು ಇನ್ನೂ ಸಾಕಷ್ಟು ಸಮಯವಿದೆ. ಆದ್ದರಿಂದ ರೈತರು ಆತಂಕಕ್ಕೆ ಒಳಗಾಗಬಾರದು ಎಂದರು.

    ತಾಲೂಕಿನ ಎಲ್ಲ ರಸಗೊಬ್ಬರ ಮಾರಾಟಗಾರರಿಗೆ ಈಗಾಗಲೇ ಜು. 20ರಂದು ನಡೆದ ಸಭೆಯಲ್ಲಿ ಸೂಚಿಸಿರುವಂತೆ ತಮ್ಮಲ್ಲಿ ಲಭ್ಯವಿರುವ ರಸಗೊಬ್ಬರವನ್ನು ರೈತರ ಬೇಡಿಕೆಗೆ ತಕ್ಕಂತೆ ವಿತರಿಸಬೇಕು. ಯೂರಿಯಾ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆಯಿರುವ ಹಿನ್ನೆಲೆ ಇತರೆ ಗೊಬ್ಬರ ಅಥವಾ ವಿವಿಧ ಕೃಷಿ ಪರಿಕರಗಳನ್ನು ಲಿಂಕ್ ಮಾಡುವಂತಿಲ್ಲ. ಯಾವುದೇ ಸಾಮಗ್ರಿಗಳನ್ನು ಖರೀದಿಸಲು ರೈತರ ಮೇಲೆ ಒತ್ತಡ ಹೇರುವಂತಿಲ್ಲ. ಒಂದು ವೇಳೆ ಈ ಆದೇಶ ಉಲ್ಲಂಘಿಸಿದ್ದಲ್ಲಿ ಅಂಥ ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

    ಟಿಎಪಿಸಿಎಂಎಸ್ ವ್ಯವಸ್ಥಾಪಕ ಯಲ್ಲಪ್ಪಗೌಡ ಪಾಟೀಲ, ಶಿವಾಜಿ ಸಾಠೆ, ಹನುಮಂತ ಗುಂಡಳ್ಳಿ, ಎಸ್.ಎ. ಚಲವಾದಿ, ಇತರರಿದ್ದರು.

    10644 ಮೆ. ಟನ್ ಯೂರಿಯಾ ದಾಸ್ತಾನು

    ಗದಗ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಜುಲೈ ಅಂತ್ಯದವರೆಗೆ 12250 ಮೆ.ಟನ್ ಯೂರಿಯಾ ಗೊಬ್ಬರ ಬೇಡಿಕೆ ಇದ್ದು, 10644 ಮೆ. ಟನ್ ದಾಸ್ತಾನು ಮಾಡಲಾಗಿದೆ.

    ಈಗಾಗಲೇ 10240 ಮೆ.ಟನ್ ರಸಗೊಬ್ಬರ ಮಾರಾಟವಾಗಿದ್ದು, 404 ಮೆ ಟನ್ ರಸಗೊಬ್ಬರ ದಾಸ್ತಾನು ಇದೆ. ಅಗಸ್ಟ್ ತಿಂಗಳಲ್ಲಿ 3000 ಮೆ.ಟನ್ ಸರಬರಾಜು ಯೋಜನೆ ಇದ್ದು, ಇನ್ನೆರಡು ದಿನಗಳಲ್ಲಿ ಕ್ರಿಬ್ಕೋ ಕಂಪನಿಯ 700 ಮೆ. ಟನ್ ಮತ್ತು ಐಪಿಎಲ್ ಕಂಪನಿಯ 500 ಮೆ. ಟನ್ ಯುರಿಯಾ ರಸಗೊಬ್ಬರ ಜಿಲ್ಲೆಗೆ ಸರಬರಾಜಾಗುತ್ತಿದೆ. ಬೇಡಿಕೆ ಪ್ರಕಾರ ಯೂರಿಯಾ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ರಾಸಾಯನಿಕ ಗೊಬ್ಬರಗಳ ಕೊರತೆ ಇಲ್ಲ, ರೈತ ಬಾಂಧವರು ಆತಂಕ ಪಡುವ ಅಗತ್ಯವಿಲ್ಲ ಮತ್ತು ಜಿಲ್ಲೆಯಲ್ಲಿ ಉತ್ತಮವಾಗಿ ಮಳೆಯಾಗಿರುವುದರಿಂದ ಹಾಗೂ ತೇವಾಂಶವು ಹೆಚ್ಚಿರುವುದರಿಂದ ಕಡಿಮೆ ಪ್ರಮಾಣದ ಯೂರಿಯಾ ರಸಗೊಬ್ಬರ ಬಳಕೆ ಮಾಡಲು ವಿನಂತಿಸಿದೆ. ರೈತರು ರಸಗೊಬ್ಬರಗಳನ್ನು ಖರೀದಿಸುವಾಗ ಕಡ್ಡಾಯವಾಗಿ ರಸೀದಿ ಪಡೆಯಬೇಕು ಹಾಗೂ ಯೂರಿಯಾ ರಸಗೊಬ್ಬರವನ್ನು ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುವುದು ಕಂಡುಬಂದರೆ ತಕ್ಷಣ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂರ್ಪಸಲು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts