More

    ರಂಗಪ್ಪ ವೃತ್ತ ಸಂಪೂರ್ಣ ಸೀಲ್​ಡೌನ್

    ಭದ್ರಾವತಿ: ಬೆಂಗಳೂರಿನಿಂದ ನಗರಕ್ಕೆ ಅಗಮಿಸಿದ್ದ 24 ವರ್ಷದ ಗರ್ಭಿಣಿಗೆ ಕರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ರಂಗಪ್ಪ ವೃತ್ತದಿಂದ ಹೊಳೆಹೊನ್ನೂರು ರಸ್ತೆ ವೃತ್ತದವರೆಗಿನ ಪ್ರದೇಶವನ್ನು ಕಂಟೇನ್ಮೆಂಟ್ ವಲಯವೆಂದು ಘೊಷಿಸಿ ಸೀಲ್​ಡೌನ್ ಮಾಡಲಾಗಿದೆ.

    ಸೋಂಕು ತಗುಲಿರುವ ಗರ್ಭಿಣಿ ಸೋಮವಾರ ರಾತ್ರಿ ಬೆಂಗಳೂರಿನ ಗಂಡನ ಮನೆಯಿಂದ ನಗರದ ಚನ್ನಗಿರಿ ರಸ್ತೆಯಲ್ಲಿರುವ ತವರು ಮನೆಗೆ ಕಾರಿನಲ್ಲಿ ಆಗಮಿಸಿದ್ದರು. ಗರ್ಭಿಣಿಯಾಗಿದ್ದ ಕಾರಣ ಆರೋಗ್ಯದಲ್ಲಿ ಸ್ವಲ್ಪ ಸುಸ್ತು ಕಾಣಿಸಿಕೊಂಡಿದ್ದು ಮಂಗಳವಾರ ತಪಾಸಣೆಗಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಗರ್ಭಿಣಿಯರಿಗೆ ಕರೊನಾ ಪರೀಕ್ಷೆ ನಡೆಸದೆ ಚಿಕಿತ್ಸೆ ನೀಡುವುದಿಲ್ಲ ಎಂದು ತಿಳಿಸಿದ ಖಾಸಗಿ ಆಸ್ಪತ್ರೆ ವೈದ್ಯ, ಸರ್ಕಾರಿ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡು ಬರುವಂತೆ ಆಕೆಗೆ ಸೂಚಿಸಿದ್ದಾರೆ.

    ಹಳೇನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಹಿಳೆಗೆ ರಕ್ತ ಹಾಗೂ ಗಂಟಲು ದ್ರವದ ತಪಾಸಣೆ ನಡೆಸಿದ್ದು ಬುಧವಾರ ಬಂದ ಫಲಿತಾಂಶದಲ್ಲಿ ಸೋಂಕು ದೃಢಪಟ್ಟಿದೆ. ಕೂಡಲೇ ಎಚ್ಚೆತ್ತುಕೊಂಡ ತಾಲೂಕು ಆಡಳಿತ, ನಗರಸಭೆ ಅಧಿಕಾರಿಗಳು ಹಾಗೂ ಸಾರ್ವಜನಿಕ ಆಸ್ಪತ್ರೆ ವೈದ್ಯ ಸಿಬ್ಬಂದಿ ಗರ್ಭಿಣಿಯನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

    ಕರೋನಾ ಸೋಂಕು ಹರಡುವುದನ್ನು ತಪ್ಪಿಸಲು ಸರ್ಕಾರದ ಆದೇಶದಂತೆ ಸತ್ಯ ಚಿತ್ರಮಂದಿರದ ಆಸುಪಾಸಿನ 100 ಮೀ. ಅಂತರದವರೆಗೂ ಕಂಟೇನ್ಮೆಂಟ್ ವಲಯ ಎಂದು ಘೊಷಣೆ ಮಾಡಿ ಬ್ಯಾರಿಕೇಡ್​ಗಳನ್ನಿಟ್ಟು ಸೀಲ್​ಡೌನ್ ಮಾಡಲಾಗಿದೆ. ಈ ಪ್ರದೇಶದಲ್ಲಿ ರಾಸಾಯನಿಕ ಸಿಂಪಡಿಸಲಾಗಿದೆ.

    ತಂದೆ ತಾಯಿ, ಕರೆ ತಂದವ ಕ್ವಾರಂಟೈನ್: ಸೋಂಕಿತ ಗರ್ಭಿಣಿಯನ್ನು ಆಕೆಯ ಸಂಬಂಧಿಯೊಬ್ಬರು ಕಾರಿನಲ್ಲಿ ಕರೆತಂದಿದ್ದು ಆತನನ್ನೂ ಹೋಂ ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಬೆಂಗಳೂರಿನಿಂದ ಆಗಮಿಸಿ ಮೂರು ದಿನ ಮನೆಯಲ್ಲಿದ್ದ ಕಾರಣ ಸಂಪರ್ಕಕ್ಕೆ ಬಂದಿರುವ ಮಹಿಳೆಯ ತಂದೆ ಹಾಗೂ ತಾಯಿಯನ್ನೂ ಕ್ವಾರೆಂಟೈನ್ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts